ವಾಡಿ: ಪಟ್ಟಣ ಸಮೀಪದ ಸುಕ್ಷೇತ್ರ ಹಳಕರ್ಟಿಯ ಶ್ರೀಸಿದ್ದೇಶ್ವರ ಧ್ಯಾನಧಾಮದ ಪೂಜ್ಯ ಶ್ರೀರಾಜಶೇಖರ ಸ್ವಾಮೀಜಿ ಅವರ ಪಟ್ಟಾಧೀಕಾರ ಮಹೋತ್ಸವ ಏ.೧೯ ರಂದು ಏರ್ಪಡಿಸಲಾಗಿದ್ದು, ಏ.೯ ರಿಂದ ಹನ್ನೊಂದು ದಿನಗಳ ಕಾಲ ಶರಣಬಸವೇಶ್ವರರ ಪುರಾಣ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಹೇಳಿದರು.
ಬುಧವಾರ ಸಿದ್ದೇಶ್ವರ ಧ್ಯಾನಧಾಮದಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ತಾಯಿ ತುಳಜಾಪುರ ಅಂಬಾಭವಾನಿಯ ಭಕ್ತರಾಗಿ ಎರಡು ಸಲ ನಿರ್ವಿಕಲ್ಪ ಸಮಾದಿ ಯಾಗ ಕೈಗೊಂಡಿರುವ ಮಹಾತಪಸ್ವಿ ಶ್ರೀರಾಜಶೇಖರ ಸ್ವಾಮೀಜಿ ಅವರು ಅಪಾರ ಭಕ್ತ ಸಮೂಹವನ್ನು ಹೊಂದಿದ್ದಾರೆ.
ರಂಭಾಪುರಿ ಜಗದ್ಗುರು ಶ್ರೀಪ್ರಸನ್ನ ರೇಣುಕಾ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಪಾವನ ಸಾನಿಧ್ಯದಲ್ಲಿ ಏ.೧೯ ರಂದು ಪಟ್ಟಾಧೀಕಾರ ಮಹೋತ್ಸವ ನಡೆಯಲಿದ್ದು, ಇದಕ್ಕೂ ಮೊದಲು ಏ.೧೮ ರಂದು ಸಂಜೆ ೫:೦೦ ಗಂಟೆಗೆ ಜಗದ್ಗುರುಗಳು ಅಡ್ಡಪಲ್ಲಕಿ ಉತ್ಸವದ ಮೂಲಕ ಪುರಪ್ರವೇಶ ಮಾಡಲಿದ್ದಾರೆ.
ಅಂಬಾಭವಾನಿ ಮೂರ್ತಿ ಪ್ರತಿಷ್ಠಾಪನೆ, ದೇವಸ್ಥಾನದ ಶಿಖರಕ್ಕೆ ಕಳಸಾರೋಹಣ, ಪೂಜ್ಯರ ತುಲಾಭಾರ ನೆರವೇರಲಿದೆ. ಪೂಜ್ಯರ ಪಟ್ಟಾಧೀಕಾರ ಮಹೋತ್ಸವದಲ್ಲಿ ಜಿಲ್ಲೆಯ ಸಾವಿರಾರು ಜನ ಭಕ್ತರು ಪಾಲ್ಗೊಳ್ಳುವರು. ಏ.೯ ರಿಂದ ೧೯ರ ವರೆಗೆ ಹಳಕರ್ಟಿ ಧ್ಯಾನಧಾಮದಲ್ಲಿ ಪುರಾಣ ಜತೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿವೆ ಎಂದು ವಿವರಿಸಿದರು.
ಪೂಜ್ಯ ಶ್ರೀ ರಾಜಶೇಖರ ಸ್ವಾಮೀಜಿ ಮಾತನಾಡಿ, ಸಿದ್ದೇಶ್ವರ ದೇವಸ್ಥಾನ ಪರಿಸರದಲ್ಲಿ ದೇವಿಯ ಪೂಜೆ ಮಾಡಿಕೊಂಡು ಬರುವ ಮೂಲಕ ಇದನ್ನು ಸಿದ್ದೇಶ್ವರ ಧ್ಯಾನಧಾಮ ಎಂದು ಪರಿವರ್ತಿಸಿದ್ದೇವೆ. ಇನ್ನುಮುಂದೆ ಈ ಧ್ಯಾನಧಾಮವು ರಂಭಾಪುರಿ ಪೀಠದ ವ್ಯಾಪ್ತಿಗೆ ಸೇರುತ್ತಿದೆ. ಪರಿಣಾಮ ಧ್ಯಾನಧಾಮವು ರಂಭಾಪುರಿ ಪೀಠದ ಶಾಖಾ ಮಠವಾಗಿ ಬದಲಾಗಲಿದೆ. ಪಟ್ಟಾಧೀಕಾರ ಮಹೋತ್ಸವದ ಬಳಿಕ ಶ್ರೀಮಠವು ಮತ್ತಷ್ಟು ಧಾರ್ಮಿಕ ಕಾರ್ಯಗಳ ಸೇವೆಯಲ್ಲಿ ತೊಡಗಲಿದೆ. ಭಕ್ತರೇ ನನಗೆ ಆಸ್ತಿ. ಭಕ್ತರ ಭಾವನೆಗಳಿಗೆ ಪೂರಕವಾಗಿ ಮತ್ತು ಅವರ ಕಷ್ಟ ಸುಃಖಗಳಲ್ಲಿ ಭಾಗಿಯಾಗಿ ಶ್ರೀಮಠವನ್ನು ಉನ್ನತ ಮಟ್ಟಕ್ಕೇರಿಸುವ ಛಲವಿದೆ. ಭಕ್ತರು ನನ್ನ ಜತೆಗಿದ್ದರೆ ಸಾಕು ಅದೇ ನನಗೆ ಶಕ್ತಿ ಎಂದರು.
ಬೆನಕನಹಳ್ಳಿ ಶ್ರೀಕೇದಾರಲಿಂಗ ಸ್ವಾಮೀಜಿ, ವೀರಶೈವ ಲಿಂಗಾಯತ ಸಮಾಜದ ವಾಡಿ ಅಧ್ಯಕ್ಷ ಶರಣಗೌಡ ಪಾಟೀಲ ಚಾಮನೂರ, ಮುಖಂಡರಾದ ನೀಲಕಂಠಪ್ಪ ಸಾಹು ಸಂಗಶೆಟ್ಟಿ, ಪ್ರಕಾಶ ಚಂದನಕೇರಿ, ಸಿದ್ದು ಮುಗುಟಿ, ಮಲ್ಲಿಕಾರ್ಜುನ ಕಟ್ಟಿಮನಿ, ನಿಂಗಣ್ಣ ಇರಗೊಂಡ, ವೀರೇಶ ಕೊಟಗಿ, ಮಹ್ಮದ್ ಸಲೀಮ್, ಭಾಗಣ್ಣ ಹೊನಗುಂಟಿ, ಶರಣು ಹಿಟ್ಟಿನ್, ಸಿದ್ದು ಭಾವಿಕಟ್ಟಿ, ಮೈಲಾರಿ ಸುಣಗಾರ, ಪ್ರೇಮ ರಾಠೋಡ, ರವಿ ನಾಯಕ, ವಿಜಯ ನಾಲವಾರ ಸುದ್ದಿ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.