ಸೇಡಂ: ಮಕ್ಕಳ ಅಭ್ಯಾಸಕ್ಕೆ ಮೊಬೈಲ್ ಮಾರಕವಾಗುತ್ತಿದೆ. ಮಕ್ಕಳಿಂದ ಮೊಬೈಲ್ ದೂರವಿಡಿ ಎಂದು ನರ್ಮದಾದೇವಿ ಕಾಲೇಜಿನ ಪ್ರಾಧ್ಯಾಪಕರು ಆಗಿರುವ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಆರತಿ ಕಡಗಂಚಿ ಹೇಳಿದರು.
ಪಟ್ಟಣದ ರಾಮಚಂದ್ರ ಬಡಾವಣೆಯಲ್ಲಿರುವ ರಾಷ್ಟ್ರಕೂಟ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಸಂಚಾಲಿತ ಶ್ರೀ ಶಾರದಾ ಪಾಠಶಾಲೆಯಲ್ಲಿ ಶುಕ್ರವಾರ ಅದ್ದೂರಿಯಾಗಿ ನಡೆದ ಗ್ರಾಜ್ಯುಯೇಷನ್ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಟಿವಿ ಮತ್ತು ಮೊಬೈಲ್‍ಗಳಿಂದ ಮಕ್ಕಳನ್ನು ದೂರವಿಟ್ಟು ಅವರ ಅಭ್ಯಾಸದ ಕಡೆಗೆ ಗಮನಹರಿಸಬೇಕು. ಮಕ್ಕಳ ಶಾಲಾ ಚಟುವಟಿಕೆಯ ಜತೆ ತಾಯಂದಿರು ಮನೆಯಲ್ಲಿಯೂ ಸಹ ಪಠ್ಯೇತರ ಚಟುವಟಿಕೆ ಮಾಡಿಸಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಪತ್ರಕರ್ತ-ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ಮಾತನಾಡಿ, ಮಕ್ಕಳ ಬೌದ್ಧಿಕ ವಿಕಾಸದ ಜತೆಗೆ ಆತ್ಮವಿಶ್ವಾಸವನ್ನು ಬೆಳೆಸಬೇಕು. ಪ್ರತಿವರ್ಷವೂ ಗಾಜ್ಯುಯೇಷನ್ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸುವ ಮೂಲಕ ಮಕ್ಕಳಲ್ಲಿ ಬೌದ್ಧಿಕ ವಿಕಾಸಕ್ಕೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ಹೇಳಿದರು.
ಮುಖ್ಯ ಗುರು ರಾಜೇಶ್ವರಿ ಪಾಟೀಲ ಮಾತನಾಡಿ, ಶಾಲೆಯಲ್ಲಿ ಬೆಸ್ಟ್ ಸ್ಟುಡೆಂಟ್ ಕೊಡುವ ಮೂಲಕ ಮಕ್ಕಳಲ್ಲಿ ಓದುವ ಉತ್ಸಾಹ ಹೆಚ್ಚು ಮಾಡಲಾಗುತ್ತದೆ. ಅದರ ಜೊತೆಗೆ, ಬೆಸ್ಟ್ ಪಾಲಕರು ಎಂದು ಅವಾರ್ಡ್ ನೀಡುವ ಮೂಲಕ ಉಳಿದ ಪಾಲಕರಿಗೆ ಪ್ರೇರಣೆ ನೀಡುವಂತಹ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಹೇಳಿದರು.
ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹರಿಕಿಶನ್ ಲಡ್ಡಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಶ್ರೀಮತಿ ಈರಮ್ಮ ಹಾಶನಪಲ್ಲಿ ಹೊಲಿಗೆ ತರಬೇತಿ ಕೇಂದ್ರವನ್ನು ಉದ್ಘಾಟಿಸಿದರು. ಉಚಿತವಾದ ತರಬೇತಿ ನೀಡುವ ಮೂಲಕ ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸುವಂತಹ ಆತ್ಮವಿಶ್ವಾಸ ತುಂಬುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಹರಿಕಿಶನ್ ಲಡ್ಡಾ ಹೇಳಿದರು.
ಶಾಲೆಯ ಆವರಣದಲ್ಲಿ ಎರಡು ಸಸಿಗಳನ್ನು ನೆಡಲಾಯಿತು. ಸಮಾರಂಭದಲ್ಲಿ ವಿದ್ಯಾರ್ಥಿಗಳು ಗೌನ್ ಮತ್ತು ಹ್ಯಾಟ್ ವಿಶೇಷ ಉಡುಗೆಯಲ್ಲಿದ್ದರು. ಅವರಿಗೆ ವಿಶೇಷವಾಗಿ ಫಲಿತಾಂಶದ ಪ್ರಗತಿ ಪತ್ರ ನೀಡಿ ಗೌರವಿಸಲಾಯಿತು.
ನೂರಾರು ಪಾಲಕರು ಭಾಗವಹಿಸಿದ್ದರು. ರತ್ನಕಲಾ ರೆಡ್ಡಿ, ವಿಜಯಲಕ್ಷ್ಮೀ ಸುಜಿತ್‍ಕುಮಾರ, ಗಿರೀಶರೆಡ್ಡಿ ಹಾಶನಪಲ್ಲಿ, ಸಿದ್ದಪ್ರಸಾದರೆಡ್ಡಿ, ಮಹಾದೇವ, ಯಲ್ಲಪ್ಪ, ಶಾಂತಕುಮಾರ ಪಾಟೀಲ, ಸಂತೋಷಕುಮಾರ, ರಾಜಕುಮಾರ, ಸುವರ್ಣಾ ಪಾಟೀಲ, ಶ್ರೀದೇವಿ ಇತರರಿದ್ದರು.
ಕಾರ್ಯಕ್ರಮದ ರೂವಾರಿ ಶಿಕ್ಷಕ ಕಾರ್ತಿಕರೆಡ್ಡಿ ಇದ್ದರು. ಶಿಕ್ಷಕಿ ಮೇಘಾ ಸ್ವಾಗತಿಸಿದರು. ಶಿಕ್ಷಕಿ ದೇವಿಕಾ ಕಾರ್ಯಕ್ರಮ ನಿರೂಪಿಸಿದರು. ನಂತರ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.