ಕಲಬುರಗಿ: ವಿಶ್ವಮಧ್ವ ಮಹಾಪರಿಷತ್ತಿನ ಅಂಗಸಂಸ್ಥೆಯಾದ ನಗರದ ಹರಿದಾಸ ಸಾಹಿತ್ಯ ಪ್ರಚಾರವಾಹಿನಿಯ 272ನೇ ನಗರ ಸಂಕೀರ್ತನೆ ಕಾರ್ಯಕ್ರಮ ಶುಕ್ರವಾರ ಸಂಜೆ ನಗರದ ಬಸವೇಶ್ವರ ಕಾಲೋನಿಯ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ ವಾಹಿನಿಯ 23ನೇ ವಾರ್ಷಿಕೋತ್ಸವ ಪ್ರಯುಕ್ತ ಬೆಂಗಳೂರಿನ ಶ್ರೀ ಶ್ರೀನಿವಾಸ ಉತ್ಸವ ಬಳಗದ ಸಂಸ್ಥಾಪಕ ಅಧ್ಯಕ್ಷರಾದ ಡಾ. ವಾದಿರಾಜ ತಾಯಲೂರು ಅವರಿಗೆ `ಶ್ರೀ ಜಗನ್ನಾಥ ವಿಠ್ಠಲ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಶ್ರೀ ಲಕ್ಷ್ಮೀ ಭಜನಾ ಮಂಡಳಿ ಸದಸ್ಯೆಯರಿಂದ ಭಜನೆ, ಸಾಮೂಹಿಕವಾಗಿ ಲಕ್ಷ್ಮೀಶೋಭಾನದ ಪಾರಾಯಣ ನಡೆದವರು. ವಾಹಿನಿಯ ಅಧ್ಯಕ್ಷರಾದ ಪಂ. ಗೋಪಾಲಾಚಾರ್ಯ ಅಕಮಂಚಿ ಅವರು ಅಧ್ಯಕ್ಷತೆ ವಹಿಸಿ ಪ್ರವಚನ ನೀಡಿದರು. ವಾರ್ಷಿಕೋತ್ಸವ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶ್ರೀರಾಮ ಸೇವಾ ಪರಿಷತ್ ಅಧ್ಯಕ್ಷ ಗುಂಡಾಚಾರ್ಯ ಜೋಶಿ ನರಿಬೋಳ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿಯ ಉಪಾಧ್ಯಕ್ಷರೂ ಆದ ದಾಸಸಾಹಿತ್ಯ ವಿದ್ವಾಂಸ ವ್ಯಾಸರಾಜ ಸಂತೆಕೆಲ್ಲೂರ ನಿರೂಪಿಸಿದರು. ಬ್ರಾಹ್ಮಣ ಸಮಾಜದ ಹಿರಿಯರಾದ ಪಾಂಡುರಂಗರಾವ ಕಂಪ್ಲಿ, ಡಾ. ಲಕ್ಷ್ಮೀಕಾಂತ ಮೊಹರೀರ್, ಕೃಷ್ಣ ಮಳ್ಳಿ ಮತ್ತಿತರರು ಪಾಲ್ಗೊಂಡಿದ್ದರು.