ಕಲಬುರಗಿ: ಬೆಂಗಳೂರಿನ ನಂದಾದೀಪ ಚಾರಿಟೇಬಲ್ ಟ್ರಸ್ಟ್ ಹಾಗೂ ಎಸ್‍ಬಿಐ ಗೆಳೆಯರ ಬಳಗದ ವತಿಯಿಂದ ನಗರದ ಜಗತ್ ವೃತ್ತದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಸಾರ್ವಜನಿಕರಿಗಾಗಿ ಉಚಿತವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಗುರುವಾರ ನಡೆದ ಸರಳ ಸಮಾರಂಭದಲ್ಲಿ ಈ ಸೇವೆಗೆ ಚಾಲನೆ ನೀಡಲಾಯಿತು.
ಕೆನರಾ ಬ್ಯಾಂಕಿನ ನಿವೃತ್ತ ಅಧಿಕಾರಿ, ಸಾಮಾಜಿಕ ಕಾರ್ಯಕರ್ತ ಮಹಾದೇವಯ್ಯ ಕರದಳ್ಳಿ ಅವರು ಈ ಸಂದರ್ಭದಲ್ಲಿ ಮಾತನಾಡಿ, ಇದೊಂದು ಮಾದರಿಯ ಮಾನವೀಯ ಕಾರ್ಯವಾಗಿದ್ದು, ಬೇಸಿಗೆಯಲ್ಲಿ ಶುದ್ಧ ಮತ್ತು ತಂಪಾದ ಕುಡಿಯುವ ನೀರು ನೀಡುವುದು ಶ್ರೇಷ್ಠ ಕಾರ್ಯವಾಗಿದೆ, ಇದೇ ರೀತಿ ಇತರೆ ಸಂಘ-ಸಂಸ್ಥೆಗಳು ಕೂಡ ಇಂಥ ಸೇವಾ ಕಾರ್ಯಗಳಿಗೆ ಮುಂದಾಗಬೇಕು ಎಂದರು.
ನಂದಾದೀಪ ಚಾರಿಟೇಬಲ್ ಟ್ರಸ್ಟ್ ಪರವಾಗಿ ಎಸ್‍ಬಿಐ ನಿವೃತ್ತ ಅಧಿಕಾರಿ ಎಫ್. ರಮೇಶ್ ಮಾತನಾಡಿ, ಕಳೆದ ಎಂಟು ವರ್ಷಗಳಿಂದಲೂ ನಂದಾದೀಪ ಟ್ರಸ್ಟ್ ಮತ್ತು ಎಸ್‍ಬಿಐ ಗೆಳೆಯಗರ ಬಳಗದ ವತಿಯಿಂದ ಜಗತ್ ವೃತ್ತದಲ್ಲಿ ಜನರಿಗೆ ತಂಪಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಮುಂದಿನ ಎರಡು ತಿಂಗಳ ಕಾಲ ಪ್ರತಿದಿನ ಬೆಳಿಗ್ಗೆ 10ರಿಂದ ಮಧ್ಯಾಹ್ನ 4 ಗಂಟೆಯವರೆಗೆ ಶುದ್ಧೀಕರಿಸಿದ, ತಂಪಾದ ಕುಡಿಯುವ ನೀರು ಪೂರೈಸಲಾಗುತ್ತದೆ, ಪ್ರತಿದಿನ ಸುಮಾರು ಒಂದು ಸಾವಿರ ಜನರು ನೀರು ಕುಡಿಯುವ ಅಂದಾಜಿದೆ. ಇದಕ್ಕೆ ಒಟ್ಟಾರೆ ಎರಡು ತಿಂಗಳಲ್ಲಿ 1.25 ಲಕ್ಷ ರೂ. ವೆಚ್ಚವಾಗುತ್ತಿದೆ ಎಂದು ಮಾಹಿತಿ ನೀಡಿದರು.
ನಗರದ ಖ್ಯಾತ ವೈದ್ಯ ಡಾ. ಮಲ್ಹಾರರಾವ ಮಲ್ಲೆ, ಎಸ್‍ಬಿಐ ನಿವೃತ್ತ ಅಧಿಕಾರಿಗಳಾದ ಶೇಷಗಿರಿ ಎನ್. ಬೀಡಕರ್, ಅರವಿಂದ ಹುಣಸಗಿ, ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಬಸವರಾಜ ನಾಯ್ಕರ್ ವೇದಿಕೆಯ ಮೇಲಿದ್ದರು. ಎಸ್‍ಬಿಐ ಗೆಳೆಯರ ಬಳಗದ ಜಯರಾಂ ಕಡಗದಕೈ, ಸುನೀಲ ಕುಲಕರ್ಣಿ, ಸಂಯೋಜಕ ಚಂದ್ರಕಾಂತ ಕಲ್ಕೋರಿ, ಸುರೇಶ ಆಲಗೂಡಕರ್, ಗುರುಭೀಮ ಗೋದಿ, ಸಂತೋಷ ಒಂಟಿ, ಮತ್ತಿತರರು ಇದ್ದರು.