ಕಲಬುರಗಿ: ಜೇವರ್ಗಿ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜಿಗೆ ಕಟ್ಟಿ ಸಂಗಾವಿ ಬಳಿ ಭೀಮಾ ನದಿಗೆ ಅಡ್ಡಲಾಗಿ ಮಿನಿ ಬ್ಯಾರೇಜ್ ನಿರ್ಮಾಣ ಕುರಿತಂತೆ ಯಶಶ್ವಿ ಬಿಡ್ಡುದಾರರಾಗಿ ಟೆಂಡರ್ ಪಡೆದು ತದನಂತರ ಟೆಂಡರ್ ಒಪ್ಪಂದ ರದ್ದತಿಗೆ ಕೋರಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ.ರಾಜಾ ಅವರು ಸಣ್ಣ ಮತ್ತು ಮಧ್ಯಮ ನೀರಾವರಿ ಇಲಾಖೆಯ ಕಾರ್ಯನಿವಾಹಕ ಇಂಜಿನೀಯರ್ ಅವರಿಗೆ ಸೂಚನೆ ನೀಡಿದರು.
ಬುಧವಾರ ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಜೇವರ್ಗಿ ಪಟ್ಟಣದ ೫೦ ಸಾವಿರ ಜನರಿಗೆ ಕುಡಿಯುವ ನೀರು ಒದಗಿಸಲೆಂದೆ ಈ ಯೋಜನೆ ಕೈಗೊಳ್ಳಲಾಗಿತ್ತು. ಆದರೆ ಯಶಸ್ವಿಯಾದ ಗುತ್ತಿಗೆದಾರ ವಿನಾಕಾರಣ ಒಪ್ಪಂದ ರದ್ದುಗೊಳಿಸಿದ್ದರಿಂದ ಟೆಂಡರ್ ರದ್ದಾಗಿ ಒಂದೂವರೆ ವರ್ಷವಾದರೂ ಪುನ: ಟೆಂಡರ್ ಕರೆದು ಕಾಮಗಾರಿಗೆ ಇನ್ನು ಚಾಲನೆ ನೀಡಿಲ್ಲ ಮತ್ತು ಸದರಿ ಗುತ್ತಿಗೆದಾರನ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಗಿ ಆರೋಪಿಸಿದರು. ಇದಕ್ಕೆ ಉತ್ತರವಾಗಿ ಸಣ್ಣ ನೀರಾವರಿ ಇಲಾಖೆಯ ಇಇ ಮಾತನಾಡಿ ಗುತ್ತಿಗೆದಾರನ ಇ.ಎಂ.ಡಿ. ಮೊತ್ತ ೧೨.೫ ಲಕ್ಷ ರೂ. ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಈ ಕುರಿತು ಮಧ್ಯಪ್ರವೇಶಿಸಿದ ಸಿಇಓ ಡಾ.ಪಿ.ರಾಜಾ ಅವರು ಕೂಡಲೆ ಸದರಿ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ ಮುಂದೆ ಇಂತಹ ಕಾಮಗಾರಿಗಳನ್ನು ಪಡೆಯದಂತೆ ಅನರ್ಹಗೊಳಿಸಿ ಎಂದರು.
೫೦ ಲಕ್ಷ ರೂ. ಒಳಗಿನ ಒಟ್ಟಾರೆ ಕಾಮಗಾರಿಗಳಲ್ಲಿ ರ‍್ಯಾಂಡಮೈಸೇಷನ್ ಆಧಾರದ ಮೇಲೆ ಶೇ.೧೭.೧೫ ರಷ್ಟು ಕಾಮಗಾರಿಗಳು ಪರಿಶಿಷ್ಠ ಜಾತಿ ಮತ್ತು ಶೇ.೬.೯೫ ರಷ್ಟು ಕಾಮಗಾರಿಗಳು ಪರಿಶಿಷ್ಠ ಪಂಗಡಕ್ಕೆ ಸೇರಿದ ಗುತ್ತಿಗೆದಾರರಿಗೆ ನೀಡಬೇಕೆಂದು ಸರ್ಕಾರದ ಆದೇಶವಿದ್ದರು, ಲೋಕೋಪಯೋಗಿ ಇಲಾಖೆಯಲ್ಲಿ ಮೂರ‍್ನಾಲ್ಕು ಕಾಮಗಾರಿಗಳನ್ನು ಸೇರಿಸಿ ಪ್ಯಾಕೇಜ್‌ವಾರು ಟೆಂಡರ್ ಕರೆಯುವ ಮೂಲಕ ಸರ್ಕಾರಿ ಆದೇಶದ ಮೂಲ ಆಶಯವನ್ನೆ ಪಾಲಿಸುತ್ತಿಲ್ಲ ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಂತಪ್ಪ ಕೂಡಲಗಿ ಅವರು ಆರೋಪಿಸಿದರು.
ಸರ್ಕಾರದ ಆದೇಶವನ್ನು ಧಿಕ್ಕರಿಸಿ ಯಾರು ಕಾಮಗಾರಿಗಳು ನೀಡುವಂತಿಲ್ಲ ಎಂದು ಅನುಷ್ಠಾನ ಏಜೆನ್ಸಿಗಳಿಗೆ ಎಚ್ಚರಿಕೆ ನೀಡಿದ ಡಾ.ಪಿ.ರಾಜಾ ಅವರು ಈ ಕುರಿತು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಿಗೆ ನೋಟಿಸ್ ಜಾರಿ ಮಾಡಿ ಉತ್ತರ ಪಡೆದು ಸರ್ಕಾರಕ್ಕೆ ವರದಿ ಕಳುಹಿಸಲಾಗುವುದು ಎಂದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆರ್ಥಿಕ ಮತು ಭೌತಿಕ ಪ್ರಗತಿಯ ನಿಧಾನಗತಿ ಸಾಧನೆಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ಈ ಕುರಿತು ಶೀಘ್ರದಲ್ಲಿಯೆ ಇಲಾಖೆಯ ಎಲ್ಲಾ ಸಹಾಯಕ ಅಭಿಯಂತರರ ಸಭೆ ನಡೆಸಲಾಗುವುದು. ಬಹುತೇಕ ಇಲಾಖೆಗಳು ಆರ್ಥಿಕ ಮತ್ತು ಭೌತಿಕ ಗುರಿ ಬಗ್ಗೆ ವರದಿಯಲ್ಲಿ ಸರಿಯಾಗಿ ಮಾಹಿತಿ ನೀಡದಿದ್ದಕ್ಕೆ ಅತೃಪ್ತಿವ್ಯಕ್ತಪಡಿಸಿ ಮುಂದೆ ಹೀಗಾಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲಾ ಪಂಚಾಯತಿ ಟೈಡ್, ಅನ್‌ಟೈಡ್ ಗ್ರ್ಯಾಂಟ್ ಅನುದಾನದಡಿ ಕ್ರಿಯಾ ಯೋಜನೆ ರೂಪಿಸಬೇಕಿದ್ದು, ಕೆಲವು ಸದಸ್ಯರು ಪ್ರಸ್ತಾವನೆ ಸಲ್ಲಿಸದಿರುವುದರಿಂದ ಕ್ರಿಯಾ ಯೋಜನೆ ಸಿದ್ದಪಡಿಸಲು ತಡವಾಗುತ್ತಿದ್ದು, ೨ ದಿನದಲ್ಲಿ ಎಲ್ಲಾ ಜಿ.ಪಂ. ಸದಸ್ಯರು ತಮ್ಮ ಪ್ರಸ್ತಾವನೆ ಸಲ್ಲಿಸಬೇಕೆಂದು ಅವರು ಕೋರಿದರು. ಜೇವರ್ಗಿ ತಾಲೂಕಿನ ಹರವಾಳ ರಸ್ತೆ ಸಂಪೂರ್ಣ ಕಳಪೆ ಮಟ್ಟದಾಗಿದೆ ಎಂದು ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರು ಆಕ್ಷೇಪಿಸಿರುವ ಹಿನ್ನೆಲೆಯಲ್ಲಿ ಕೂಡಲೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸುವಂತೆ ಪಂಚಾಯತ ರಾಜ್ ಇಂಜಿನೀಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಿಗೆ ತಿಳಿಸಿದರು. ಹರವಾಳದಲ್ಲಿ ಪ್ರೌಢ ಶಾಲಾ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಲಭ್ಯವಿರುವ ಅನುದಾನಕ್ಕನುಗುಣವಾಗಿ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಡಾ.ಪಿ.ರಾಜಾ ಅವರು ಕೆ.ಆರ್.ಐ.ಡಿ.ಎಲ್ ಅಧಿಕಾರಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಅನುದಾನದ ಕೊರತೆಯಿಂದ ಕಸ್ತೂರಬಾ ವಸತಿ ಶಾಲೆಗಳ ಕಟ್ಟಡ ಕಾಮಗಾರಿಗಳು ಅರ್ಧಕ್ಕೆ ನಿಂತಿರುವುದು ಗಮನಕ್ಕೆ ಬಂದಿದ್ದು, ಇಂತಹ ಶಾಲೆಗಳ ಪಟ್ಟಿ ಸಲ್ಲಿಸಿದಲ್ಲಿ ಹೆಚ್ಚಿನ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದಿ ಸಿಇಓ ಡಾ.ಪಿ.ರಾಜಾ ತಿಳಿಸಿದರು.
ಶಾಲೆಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಕೆಕೆಆರ್‌ಡಿಬಿಗೆ ಪ್ರಸ್ತಾವನೆ:- ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶರಣಗೌಡ ದೌಲತರಾವ ಪಾಟೀಲ್ ಮಾತನಾಡಿ ಜಿಲ್ಲೆಯಲ್ಲಿ ಕೆಲ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಪರಿಕಲ್ಪನೆಯಡಿ ಕಂಪ್ಯೂಟರ್ ಸೇರಿದಂತೆ ಇನ್ನಿತರ ಉಪಕರಣಗಳು ಬಂದಿವೆ ಆದರೆ ಶಾಲೆಗೆ ವಿದ್ಯುತ್ ಸಂಪರ್ಕ ಇಲ್ಲದೆ ಅವು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎಂದರು. ಡಿಡಿಪಿಐ ಶಾಂತಗೌಡ ಪಾಟೀಲ ಮಾತನಾಡಿ ಜಿಲ್ಲೆಯ ೧೨೬ ಶಾಲೆಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲ, ೧೦೨೦ ಶಾಲೆಗಳಲ್ಲಿ ಮುಖ್ಯಗುರುಗಳ ಕೋಣೆಗೆ ಮಾತ್ರ ವಿದ್ಯುತ್ ಸಂಪರ್ಕವಿದೆ. ಕಲಬುರಗಿ ಜಿಲ್ಲೆ ಸೇರಿದಂತೆ ಒಟ್ಟಾರೆ ವಿಭಾಗದ ಎಲ್ಲಾ ಶಾಲೆಗಳಿಗೆ ವಿದ್ಯುತ್ ಸಂಪರ್ಕ ಪೂರೈಸಲು ಸಾರ್ವಜನಿಕ ಶಿಕ್ಷಣ ಆಯುಕ್ತಾಲಯದಿಂದ ಕೆ.ಕೆ.ಆರ್.ಡಿ.ಬಿ.ಗೆ ಪ್ರಸ್ತಾವನೆ ಸಲ್ಲಿಸಿದೆ. ಅದೇ ರೀತಿ ಶಾಲಾ ಕಟ್ಟಡದ ದುರಸ್ತಿ ಕಾಮಗಾರಿಗೂ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿದೆ ಎಂದರು.
ಇದೇ ಸಂದರ್ಭದಲ್ಲಿ ನೀರಾವರಿ, ಜೆಸ್ಕಾಂ, ಕಾಡಾ, ಆರೋಗ್ಯ, ಮಹಿಳಾ ಮತು ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು. ಸಭೆಯಲ್ಲಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ಪ್ರವೀಣ ಪ್ರಿಯಾ ಡೇವಿಡ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.