ಇಎಸ್‌ಐ ಆಸ್ಪತ್ರೆಯಲ್ಲಿ ಸೆ.21 ರಿಂದ 24ರ ವರೆಗೆ ಉಚಿತ ಸೀಳು ತುಟಿ ಶಸ್ತ್ರಚಿಕಿತ್ಸೆ

0
57

ಕಲಬುರಗಿ: ಮಿಷನ್ ಸ್ಮೈಲ್, ಮುತ್ತೂಟ್ ಫಿನ್ ಕಾರ್ಫ್ ಲಿಮಿಟೆಡ್‌ನ ಅಂಗ ಸಂಸ್ಥೆಯಾದ ಮುತ್ತೂಟ್ ಪಪ್ಪಾಚಾನ್ ಫೌಂಡೇಷನ್, ಇಎಸ್‌ಐಸಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ, ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಇದೇ ಸೆಪ್ಟಂಬರ್ ೨೧ರಿಂದ ೨೪ರವರೆಗೆ ಮಕ್ಕಳು ಹಾಗೂ ವಯಸ್ಕರಿಗೆ ಉಚಿತ ಸೀಳು ತುಟಿ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುವುದು ಎಂದು ಇಎಸ್‌ಐಸಿಯ ಡೀನ್ ಡಾ.ಎನ್.ನಾಗರಾಜ ಅವರು ತಿಳಿಸಿದ್ದಾರೆ.

ಇಎಸ್‌ಐಸಿ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಈ ವರ್ಷ ನೂರು ರೋಗಿಗಳನ್ನು ತಪಾಸಣೆ ಮಾಡಿ, ಸುಮಾರು ೫೦ ಸೀಳು ತುಟಿ ರೋಗಿಗಳಿಗೆ ಸಮಗ್ರ ಚಿಕಿತ್ಸೆಯನ್ನು ನುರಿತ ವೈದ್ಯರಿಂದ ಕೊಡಿಸಲಾಗುವುದು ಎಂದು ತಿಳಿಸಿದರು. ಆಸ್ಪತ್ರೆವತಿಯಿಂದ ಶಸ್ತ್ರ ಚಿಕಿತ್ಸಾ ಕೊಠಡಿ, ಅನಸ್ತೇಶಿಯಾ, ವಾರ್ಡ್, ರೋಗಿಗಳನ್ನು ನೋಡಿಕೊಳ್ಳುವ ನರ್ಸ್ ಮುಂತಾದ ವ್ಯವಸ್ಥೆ ಮಾಡಲಾಗುವುದು ಎಂದು ಅವರು ವಿವರಿಸಿದರು. ಇದು ನಾಲ್ಕನೇಯ ಸಂಯೋಜಿತ ಕಾರ್ಯವಾಗಿದ್ದು, ಕಳೆದ ೩ ವರ್ಷಗಳಲ್ಲಿ ಸೀಳು ತುಟಿಯ ೨೦೦ ರೋಗಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ ಎಂದು ಅವರು ಹೆಮ್ಮೆಯಿಂದ ನುಡಿದರು.

Contact Your\'s Advertisement; 9902492681

ಮಿಷನ್ ಸ್ಮೈಲ್‌ನ ಕಾರ್ಯಕ್ರಮ ಮುಖ್ಯಸ್ಥ ರಫಿ ಉರ್ ರೆಹಮಾನ್ ಅವರು ಮಾತನಾಡಿ, ಮಿಷನ್ ಸ್ಮೈಲ್ ಒಂದು ನೋಂದಾಯಿತ ವೈದ್ಯಕೀಯ ಚಾರಿಟಿ ಸಂಸ್ಥೆಯಾಗಿದ್ದು, ಸೀಳು ತುಟಿಯಿಂದ ಹುಟ್ಟಿರುವ ಮಕ್ಕಳ ಜೀವನವನ್ನು ಬದಲಿಸುವ ಉದ್ದೇಶಕ್ಕಾಗಿ ಸಂಪೂರ್ಣ ಸಮರ್ಪಿತವಾಗಿದೆ. ೨೦೦೨ರಿಂದ ಸುಮಾರು ೫೦,೦೦೦ ಸೀಳು ತುಟಿ ರೋಗಿಗಳಿಗೆ ಸಂಪೂರ್ಣ ವೈದ್ಯಕೀಯ ತಪಾಸಣೆ ಮಾಡಿ ೩೮೦೦೦ ಮಕ್ಕಳು ಹಾಗೂ ವಯಸ್ಕರಿಗೆ ಶಸ್ತ್ರ ಚಿಕಿತ್ಸೆ ಮಾಡಲು ಕೈಜೋಡಿಸಿದೆ ಎಂದು ತಿಳಿಸಿದರು.

ಮುತ್ತೂಟ್ ಪಪ್ಪಾಚಾನ್ ಫೌಂಡೇಶನ್‌ನ ರೀಜನಲ್ ಮ್ಯಾನೇಜರ್ ಬಿಸ್ವಾ ಮೆಹ್ತೊ ಅವರು ಮಾತನಾಡಿ, ಪೌಂಡೇಶನ್ ವತಿಯಿಂದ ಸೀಳು ತುಟಿ ರೋಗಿಗಳಿಗೆ ಉಚಿತ ಬಸ್/ರೈಲು ಪ್ರಯಾಣ, ಊಟ, ವಸತಿ, ಸ್ಕ್ರೀನಿಂಗ್/ಸಂಪೂರ್ಣ ವೈದ್ಯಕೀಯ ತಪಾಸಣೆ, ಶಸ್ತ್ರಚಿಕಿತ್ಸೆ, ಔಷಧಿ ವೆಚ್ಚ, ಸರ್ಜರಿಗೆ ಮುಂಚೆ ಮತ್ತು ಸರ್ಜರಿ ನಂತರದ ಚಿಕಿತ್ಸಾ ವೆಚ್ಚಗಳನ್ನು ಭರಿಸಲಾಗುವುದು ಎಂದು ತಿಳಿಸಿದರು. ಉಚಿತ ಶಸ್ತ್ರಚಿಕಿತ್ಸೆ ಪಡೆಯಲು ಇಚ್ಚಿಸುವ ರೋಗಿಗಳು ಸಮೀಪದ ಮುತ್ತೂಟ್ ಫಿನ್ ಕಾರ್ಫ್ ಶಾಖೆಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9972690972 ಹಾಗೂ 9448595180ಗೆ ಸಂಪರ್ಕಿಸುವಂತೆ ಅವರು ಕೋರಿದರು.

ಈ ಸಂದರ್ಭದಲ್ಲಿ ಇಎಸ್‌ಐಸಿ ಆಸ್ಪತ್ರೆಯ ಅರವಳಿಕೆ ವಿಭಾಗದ ಮುಖ್ಯಸ್ಥ ಡಾ.ಸಂದೀಪ್, ಇಎಸ್‌ಐಸಿ ಆಸ್ಪತ್ರೆಯ ಅಧೀಕ್ಷಕ ಡಾ.ಚೌದ್ರಿ, ಮುತ್ತೂಟ್ ಫಿನ್ ಕಾರ್ಫ್‌ನ ಪ್ರಾದೇಶಿಕ ವ್ಯವಸ್ಥಾಪಕ ವಿನಾಯಕ ಎನ್.ಟಿ ಅವರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here