ಕಲಬುರಗಿ: ಮೋಟಾರು ವಾಹನ ಕಾಯ್ದೆ 2019 ಹಿಂಪಡೆಯುವಂತೆ ಆಗ್ರಹಿಸಿ ಗುಲ್ಬರ್ಗ ನ್ಯಾಯವಾದಿಗಳ ಸಂಘದ ವತಿಯಿಂದ ಇಂದು ಪ್ರತಿಭಟನೆ ನಡೆಸಲಾಯಿತು.
ಈ ಕಾಯ್ದೆ ತಿದ್ದುಪಡಿ ಮಾಡಿರುವುದರಿಂದ ಸಾಮಾನ್ಯ ಜನತೆಗೆ ತೊಂದರೆಯಾಗುತ್ತಿದ್ದು, 1988 ಕಾಯ್ದೆ ಸೆಕ್ಷೆನ್ 140 ಪ್ರಕಾರ ಅಪಘಾತದಲ್ಲಿ ಗಾಯಗೊಂಡವರಿಗೆ ಪರಿಹಾರ ಹಣ 25,000 ರೂ, ಅಪಘಾತದಲ್ಲಿ ನಿಧನರಾದವರಿಗೆ 50,000 ರೂ. ಪರಿಹಾರ ನೀಡಲಾಗುತ್ತಿತ್ತು.
ಆದರೆ ಈಗಿನ ಕಾಯ್ದೆ ಪ್ರಕಾರ ಇದೆಲ್ಲವನ್ನು ತೆಗೆದು ಹಾಕಿದ್ದರಿಂದ ಅಪಘಾತಕ್ಕೀಡಾದ, ಮೃತಪಟ್ಟವರಿಗೆ ತಕ್ಷಣ ಪರಿಹಾರ ಸಿಗುವುದಿಲ್ಲ. ಇನ್ಸೂರೆನ್ಸ್ ಎಕ್ಟ್ ಕೂಡ ಬದಲಾವಣೆಯಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಹೀಗಾಗಿ ಈಗ ಜಾರಿಗೆ ತಂದ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಕೆಲವೊತ್ತು ಮಾನವ ಸರಪಳಿ ನಿರ್ಮಿಸಿ ಬಳಿಕ ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಅರುಣಕುಮಾರ ಬಿ. ಕಿಣ್ಣಿ, ಪ್ರಧಾನ ಕಾರ್ಯದರ್ಶಿ ಶರಣಬಸವ ಸಿ. ಪಸ್ತಾಪುರ, ಜಂಟಿ ಕಾರ್ಯದರ್ಶಿ ಶಿವಾನಂದ, ಖಜಾಂಚಿ ಸಂತೋಷ ಪಾಟೀಲ, ಉಪಾಧ್ಯಕ್ಷ ರಾಜಶೇಖರ ಡೊಂಗರಗಾಂವ, ವಕೀಲರಾದ ವಿನೋದ ಜೆನೇವೆರಿ, ಮಾಲತಿ ರೇಷ್ಮೆ ಇತರರು ಭಾಗವಹಿಸಿದ್ದರು.