ಕಲುಷಿತ ನೀರು ಪೂರೈಕೆಯಾಗದಂತೆ ಎಚ್ಚರ ವಹಿಸಿ: ಬಿ.ಫೌಜಿಯಾ ತರನ್ನುಮ್

0
23

ಕಲಬುರಗಿ: ಮಳೆಗಾಲ ಆರಂಭವಾಗುವ‌ ದಿನಗಳು ಸಮೀಪಿಸುತ್ತಿರುವುದರಿಂದ ಹೊಸ‌ ನೀರು ಸೇರಿ ಕುಡಿಯುವ ನೀರು ಕಲುಷಿತವಾಗುವ ಸಾಧ್ಯತೆ ಇದ್ದು, ಕಲಬುರಗಿ‌ ಮಹಾನಗರ ಸಾರ್ವಜನಿಕರಿಗೆ ಕಲುಷಿತ ನೀರು ಪೂರೈಕೆಯಾಗದಂತೆ ಮತ್ತು ನೀರು ಪೂರೈಕೆ ಮುನ್ನ ಕಡ್ಡಾಯವಾಗಿ ಟೆಸ್ಟಿಂಗ್ ಮಾಡಿಸುವಂತೆ ಮಹಾನಗರ ಪಾಲಿಕೆ ಮತ್ತು ಕೆ.ಯು.ಐ.ಡಿ.ಎಫ್.ಸಿ ಅಧಿಕಾರಿಗಳಿಗೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಸೂಚಿಸಿದರು.

ಗುರುವಾರ ಸಂಜೆ ತಮ್ಮ ಕಚೇರಿ ಸಭಾಂಗಣದಲ್ಲಿ ಪಾಲಿಕೆ, ಕೆ.ಯು‌.ಐ.ಡಿ.ಎಫ್.ಸಿ. ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ನಗರದ ಸಾರ್ವಜನಿಕರಿಗೆ ವೇಳಾಪಟ್ಟಿಯಂತೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು. ನೀರು ಪೂರೈಕೆ ಬಗ್ಗೆ ಮುಂಚಿತವಾಗಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಈ ಬಗ್ಗೆ ಸೋಮವಾರದೊಳಗೆ ಮೈಕ್ರೋ ಪ್ಲ್ಯಾನ್ ಸಲ್ಲಿಸುವಂತೆ ಪಾಲಿಕೆ ಆಯುಕ್ತರಿಗೆ ಡಿ.ಸಿ ನಿರ್ದೇಶನ ನೀಡಿದರು.

Contact Your\'s Advertisement; 9902492681

ನಗರದಲ್ಲಿ ಯಾವುದೇ ವಾರ್ಡ್ ನಲ್ಲಿ ಕಲುಷಿತ ನೀರು ಸೇವನೆಯಿಂದ ಅಹಿತಕರ ಘಟನೆ ನಡೆದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನೆ ಹೊಣೆಗಾರರನ್ನಾಗಿ ಮಾಡಲಾಗುವುದು. ಶುದ್ಧ ಕುಡಿಯುವ ನೀರು ಪೂರೈಕೆ ನಿಮ್ಮ ಮೊದಲ ಆದ್ಯತೆಯಾಗಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು ನಿರು ಪೂರೈಕೆ ಟ್ಯಾಂಕ್ ಗಳನ್ನು ಆಗಾಗ ಸ್ವಚ್ಚಗೊಳಿಸಬೇಕು. ಅಧಿಕಾರಿಗಳು ನಿರಂತರ‌ ಭೇಟಿ ನೀಡಿ ಸ್ವಚ್ಛತೆ ಕುರಿತು ಖಾತ್ರಿಪಡಿಸಿಕೊಳ್ಳಬೇಕು ಎಂದರು.

ಇನ್ನೇನು 15 ದಿನದಲ್ಲಿ ಮಳೆಗಾಲ ಆರಂಭವಾಗಲಿದೆ. ಕೂಡಲೆ ನಗರದ ಎಲ್ಲಾ ವಾರ್ಡುಗಳ ಚರಂಡಿ ಸ್ವಚ್ಛಗೊಳಿಸಿ ಮಳೆ‌ ನೀರು ಸರಾಗವಾಗಿ ಹೊಗುವಂತಾಗಬೇಕು. ಬ್ಲಾಕೇಜ್ ಗಳಿದಲ್ಲಿ ಕೂಡಲೆ ತೆರವುಗೊಳಿಸಬೇಕು ಎಂದರು.

ಎಲ್ & ಟಿ ಕೆಲಸ ವೇಗ ಹೆಚ್ಚಿಸಬೇಕು: ಕಲಬುರಗಿ‌ ನಗರದ 55 ವಾರ್ಡುಗಳಿಗೆ 24 ಗಂಟೆ ನಿರಂತರ ಕುಡಿಯುವ ನೀರು ಪೂರೈಸುವ ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿ ವೇಗ ಪಡೆಯದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಡಿ.ಸಿ. ಅವರು, ಕೂಡಲೆ ಹೆಚ್ಚಿನ ಕಾರ್ಮಿಕರನ್ನು ನಿಯೋಜಿಸಿ ಕಾಮಗಾರಿ ಚುರುಕುಗೊಳಿಸಬೇಕು ಎಂದು ಕಂಪನಿಯ ಟೀಮ್ ಲೀಡರ್ ಕುಮಾರ ಸೇನ್ ಅವರಿಗೆ ನಿರ್ದೇಶನ ನೀಡಿದರು.

ಕಲಬುರಗಿ ಮಹಾನಗರ ಪಾಲಿಕೆ ಮತ್ತು ಕೆ.ಯು.ಐ.ಡಿ.ಎಫ್.ಸಿ ಅಧೀಕ್ಷಕ ಅಭಿಯಂತ ಆರ್.ಪಿ.ಜಾಧವ ಮಾತನಾಡಿ ನಗರದ 4 ವಾರ್ಡ್ ಗಳಲ್ಲಿ 24 ಗಂಟೆ ಕಾಲ ಕುಡಿಯುವ ನೀರು ಪೂರೈಸುತ್ತಿದ್ದು, ಉಳಿದ ವಾರ್ಡುಗಳಲ್ಲಿ ನಿರಂತರ ನೀರು ಸರಬರಾಜು ಮಾಡುವ ಕಾಮಗಾರಿ ನಡೆದಿದೆ. ಇನ್ನೂ 51 ವಾರ್ಡ್ ಗಳಲ್ಲಿ 4 ರಿಂದ 6 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಚರಂಡಿ ಸ್ವಚ್ಛತೆ ಕಾರ್ಯ ಸಹ ನಡೆದಿದೆ‌ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಕೆ.ಯು.ಐ.ಎಫ್.ಡಿ.ಸಿ. ಕಾರ್ಯನಿರ್ವಾಹಕ ಅಭಿಯಂತರರುಗಳಾದ ಕೆ.ಎಸ್.ಪಾಟೀಲ, ಶಿವಕುಮಾರ ಪಾಟೀಲ ಸೇರಿದಂತೆ ಪಾಲಿಕೆ ಮತ್ತು ಕೆ.ಯು.ಐ.ಎಫ್.ಡಿ.ಸಿ. ಅಧಿಕಾರಿ-ಸಿಬ್ಬಂದಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here