ಮಂಗಳೂರು: ಅಲ್ಪಸಂಖ್ಯಾತ ಇಲಾಖೆಯ ವಿದ್ಯಾರ್ಥಿ ವೇತನ ವಿಳಂಬ ನೀತಿಯನ್ನು ಖಂಡಿಸಿ ಹಾಗೂ ಇದನ್ನು ಪ್ರಶ್ನಿಸಿ ಪ್ರತಿಭಟಿಸಿದ ವಿದ್ಯಾರ್ಥಿಗಳ ಮೇಲೆ ದಾಖಲಿಸಿದ ಪ್ರಕರಣವನ್ನು ಹಿಂಪಡೆಯುವಂತೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ವತಿಯಿಂದ ಪತ್ರಿಕಾಗೋಷ್ಠಿ ನಡೆಯಿತು.
ಕ್ಯಾಂಪಸ್ ಫ್ರಂಟ್ ರಾಜ್ಯ ಉಪಾಧ್ಯಕ್ಷರಾದ ಅಡ್ವಕೇಟ್ ಆರಿಫ್ ಶಿವಮೊಗ್ಗ ಮಾತನಾಡಿ ‘ಶೈಕ್ಷಣಿಕ ವರ್ಷ ಪ್ರಾರಂಭವಾಗಿ ತಿಂಗಳುಗಳು ಕಳೆದರೂ ಕಳೆದ ಸಾಲಿನ ವಿದ್ಯಾರ್ಥಿ ವೇತನ ಸಿಗದೇ ಇರುವುದು ಅಲ್ಪಸಂಖ್ಯಾತ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ.ವಿದ್ಯಾರ್ಥಿಗಳು ಅಲ್ಪಸಂಖ್ಯಾತ ಇಲಾಖೆಗಳಿಗೆ ಭೇಟಿ ನೀಡಿದಾಗ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳನ್ನು ಸರಿಯಾಗಿ ಸಹಕರಿಸುತ್ತಿಲ್ಲ, ಅಲ್ಲದೆ ಈ ವಿಳಂಬ ನೀತಿಗೆ ಸರಿಯಾದ ಕಾರಣ ಕೂಡಾ ಹೇಳುತ್ತಿಲ್ಲ.
ಇನ್ನೂ ಹಲವಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಗದ ಪರಿಣಾಮ ಕಾಲೇಜಿನ ಶುಲ್ಕ ಪಾವತಿ ಮಾಡದೇ ತೊಂದರೆಗೊಳಗಾಗಿದ್ದಾರೆ. ಕ್ಯಾಂಪಸ್ ಫ್ರಂಟ್ ಕಳೆದ ಮೂರು ತಿಂಗಳುಗಳಿಂದ ವಿದ್ಯಾರ್ಥಿ ವೇತನದ ಶೀಘ್ರ ಬಿಡುಗಡೆಗಾಗಿ ವಿವಿಧ ಅಧಿಕಾರಿಗಳ ಭೇಟಿ ಹಾಗೂ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ನಡೆಸಿ ಸರ್ಕಾರ ಗಮನಕ್ಕೆ ತಂದರೂ ಇಲಾಖೆ ಈ ಕುರಿತು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರ ಸಮಸ್ಯೆಯ ಗಂಭೀರತೆಯನ್ನು ಪರಿಗಣಿಸಿ ಶೀಘ್ರ ವಿದ್ಯಾರ್ಥಿ ವೇತನ ಬಿಡುಗೊಳಿಸದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಪ್ರಕರಣ ಹಿಂಪಡೆಯುವಂತೆ ಆಗ್ರಹ ನಂತರ ಮಾತನಾಡಿ ಅವರು ಇತ್ತೀಚೆಗೆ ವಿದ್ಯಾರ್ಥಿ ವೇತನ ಬಿಡುಗಡೆಗಾಗಿ ಆಗ್ರಹಿಸಿ ಮಂಗಳೂರಿನಲ್ಲಿ ಕ್ಯಾಂಪಸ್ ಫ್ರಂಟ್ ದ.ಕ ಜಿಲ್ಲಾ ಸಮಿತಿ ವತಿಯಿಂದ ‘ಮೈನಾರಿಟಿ ಭವನ್ ಚಲೋ’ ನಡೆಸಿದ ವಿದ್ಯಾರ್ಥಿಗಳ ಮೇಲೆಯೇ ಕೇಸು ದಾಖಲಿಸಿದ ಕ್ರಮವು ಖಂಡನೀಯ. ಇದು ವಿದ್ಯಾರ್ಥಿ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು. ದೇಶದಲ್ಲಿ ಅನ್ಯಾಯದ ವಿರುದ್ಧ ಪ್ರಜಾತಂತ್ರವನ್ನು ಪ್ರಶ್ನಿಸುವ ಹಕ್ಕನ್ನು ಹೊಂದಿದ್ದು ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದುದರಿಂದ ವಿದ್ಯಾರ್ಥಿಗಳ ಮೇಲೆ ದಾಖಲಿಸಿದ ಪ್ರಕರಣವನ್ನು ಶೀಘ್ರ ಹಿಂಪಡೆಯಬೇಕು, ಇಲ್ಲದಿದ್ದಲ್ಲಿ ಇದರ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಅಶ್ವಾನ್ ಸಾದಿಕ್,ದ.ಕ ಜಿಲ್ಲಾಧ್ಯಕ್ಷ ಮುಹಮ್ಮದ್ ಸಾದಿಕ್ ಹಾಗೂ ಮಂಗಳೂರು ತಾಲೂಕು ಅಧ್ಯಕ್ಷ ಹಸನ್ ಸಿರಾಜ್ ಉಪಸ್ಥಿತರಿದ್ದರು