ಕಲಬುರಗಿ: ಗುಲಬರ್ಗಾ (ಮೀಸಲು) ಲೋಕಸಭಾ ಕ್ಷೇತ್ರ ಚುನಾವಣೆಯ ಮತ ಎಣಿಕೆ ಕಾರ್ಯವು ಮಂಗಳವಾರ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಶಾಂತಿಯುತವಾಗಿ ಜರುಗಿತು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರು 27,205 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಕ್ಷೇತ್ರದ ಚುನಾವಣಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಘೋಷಿಸಿ ಅಭ್ಯರ್ಥಿಗೆ ಪ್ರಮಾಣಪತ್ರ ವಿತರಿಸಿದರು.
ಅಭ್ಯರ್ಥಿಗಳು ಪಡೆದ ಮತಗಳ ವಿವರ: ಅಂಚೆ ಮತ್ತು ಇಟಿಪಿಬಿಎಸ್ ಮತಗಳು ಸೇರಿದಂತೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರು 6,52,321, ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಡಾ. ಉಮೇಶ ಜಿ. ಜಾಧವ ಅವರು 6,25,116, ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿ ಹುಚ್ಚೇಶ್ವರ ವಠಾರ್ ಗೌರ್ ಅವರು 7,888, ಉತ್ತಮ ಪ್ರಜಾಕೀಯ ಪಾರ್ಟಿ ಅಭ್ಯರ್ಥಿ ನಾಗೇಂದ್ರ ರಾವ್ ಅವರು 1,226, ಭಾರತೀಯ ಬಹುಜನ ಕ್ರಾಂತಿ ದಳ ಅಭ್ಯರ್ಥಿ ರಾಜಕುಮಾರ ಅವರು 709, ಪ್ರಹಾರ್ ಜನಶಕ್ತಿ ಪಾರ್ಟಿ ಅಭ್ಯರ್ಥಿ ಬಿ. ವಿಜಯಕುಮಾರ ಚಿಂಚನಸೂರಕರ್ ಅವರು 554, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ವಿಜಯ ಜಾಧವ ಅವರು 560, ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಅಭ್ಯರ್ಥಿ ಎಸ್.ಎಂ.ಶರ್ಮಾ ಅವರು 1,144, ಪಕ್ಷೇತರ ಅಭ್ಯರ್ಥಿಗಳಾದ ಆನಂದ ಸಿನ್ನೂರ ಅವರು 1,280, ಜ್ಯೋತಿ ರಮೇಶ ಚವ್ಹಾಣ ಅವರು 2,805, ತಾರಾಬಾಯಿ ಬೋವಿ ಅವರು 1,550, ರಮೇಶ ಭೀಮಸಿಂಗ್ ಚವ್ಹಾಣ ಅವರು 1,334, ಶರಣಪ್ಪ (ಪಿಂಟು) ಅವರು 1,884 ಹಾಗೂ ಸುಂದರ ಅವರು 3,677 ಮತಗಳನ್ನು ಪಡೆದಿದ್ದಾರೆ. 8,429 ಮತಗಳು ನೋಟಾಗೆ ಚಲಾವಣೆಯಾಗಿದ್ದರೆ, 756 ಮತಗಳು ತಿರಸ್ಕøತವಾಗಿವೆ.
ಬೆಳಿಗ್ಗೆ 8 ಗಂಟೆಯಿಂದಲೆ ವಿವಿಧ ಕಟ್ಟಡಗಳಲ್ಲಿ ವಿಧಾನಸಭಾವಾರು ಒಟಾರೆ 21 ಸುತ್ತುಗಳಲ್ಲಿ ಮತ ಎಣಿಕೆ ಕಾರ್ಯ ಶಾಂತಿಯುತವಾಗಿ ನಡೆಯಿತು. ಎಣಿಕೆ ಕಾರ್ಯಕ್ಕೆ ವಿಶ್ವವಿದ್ಯಾಲಯದ ಆವರಣದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಗುಲಬರ್ಗಾ ಲೋಕಸಭಾ ಮತಕ್ಷೇತ್ರದ ಸಾಮಾನ್ಯ ವೀಕ್ಷಕ ದೀಪಂಕರ ಸಿನ್ಹಾ ಅವರು ಹಾಜರಿದ್ದು, ಸುಸೂತ್ರವಾಗಿ ಮತ ಎಣಿಕೆ ಜರುಗುವಂತೆ ನೋಡಿಕೊಂಡರು. ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಇದ್ದರು.
ದೇಶದ ಅತಿ ದೊಡ್ಡ ಪ್ರಜಾಪ್ರಭುತ್ವ ಹಬ್ಬವಾದ ಸಾರ್ವತ್ರಿಕ ಲೋಕಸಭೆ ಚುನಾವಣೆ ಘೋಷಣೆ ದಿನದಿಂದ ಮತ ಎಣಿಕೆ ವರೆಗೂ ಸಂಪೂರ್ಣ ಚುನಾವಣೆ ಪ್ರಕ್ರಿಯೆ ಸುಸೂತ್ರವಾಗಿ ನಡೆಯಲು ಹಗಲು-ರಾತ್ರಿ ಕಾರ್ಯನಿರ್ವಹಿಸಿದ ಕಲಬುರಗಿ ಜಿಲ್ಲಾಡಳಿತದ ಎಲ್ಲಾ ಹಿರಿಯ ಅಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ನೋಡಲ್ ಅಧಿಕಾರಿಗಳು, ಸಿಬ್ಬಂದಿಗಳು, ಪೊಲೀಸರಿಗೆ ಮತ್ತು ವಿಶೇಷವಾಗಿ ಶಾಂತಿಯುತ ಚುನಾವಣೆಗೆ ಸಹಕರಿಸಿದ ರಾಜಕೀಯ ಪಕ್ಷದ ನಾಯಕರು, ಅಭ್ಯರ್ಥಿಗಳು, ಏಜೆಂಟರಿಗೆ, ಮಾಧ್ಯಮದವರಿಗೆ ಹಾಗೂ ಮತದಾರ ಪ್ರಭುಗಳಿಗೆ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಧನ್ಯವಾದ ಅರ್ಪಿಸಿದ್ದಾರೆ.