ಕಲಬುರಗಿ: ಸರ್ಕಾರಿ ನೌಕರಿ ಪಡೆಯುವಲ್ಲಿನ ಹುಮ್ಮಸ್ಸು, ಪಡೆದ ನಂತರ ಬದಲಾಗಬಾರದು. ನೌಕರಿ ಪಡೆಯುವುದು, ದೀರ್ಘ ಕಾಲ ಸೇವೆ ಮಾಡುವುದೇ ದೊಡ್ಡ ಸಾಧನೆಯಲ್ಲ. ಬದಲಿಗೆ ದೊರೆತ ಹುದ್ದೆಗೆ ಪ್ರಾಮಾಣಿಕತೆ, ನಿಷ್ಠೆ ಹಾಗೂ ಕರ್ತವ್ಯಬದ್ಧತೆಯಿಂದ ಸೇವೆ ಸಲ್ಲಿಸುವುದು ಮುಖ್ಯ. ಅಂತಹ ಸೇವೆ ನಿಜಕ್ಕೂ ಸಮಾಜಪರ, ಸಾರ್ಥಕತೆಯಾಗಲು ಸಾಧ್ಯವಿದೆ ಎಂದು ಅಗ್ನಿಶಾಮಕ ಠಾಣಾಧಿಕಾರಿ ಅಂಕುಶ್ ಎ.ಅಳಂದೆ ಹೇಳಿದರು.
ನಗರದ ಅಗ್ನಿಶಾಮಕ ಠಾಣೆಯ ‘ಪ್ರಾದೇಶಿಕ ಅಗ್ನಿಶಾಮಕ ತರಬೇತಿ ಕೇಂದ್ರ’ದ ಸಭಾಂಗಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮುಖ್ಯಮಂತ್ರಿ ಪದಕ ಪುರಷ್ಕøತ ಪ್ರಮುಖ ಅಗ್ನಿಶಾಮಕರಾದ ಶಾಂತಪ್ಪ ಪಟ್ಟೇದ್‍ರಿಗೆ ಮಂಗಳವಾರ ಏರ್ಪಡಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಶಾಂತಪ್ಪ ಪಟ್ಟೇದ ನೆಲೋಗಿ ಅವರು ಪ್ರಮುಖ ಅಗ್ನಿಶಾಮಕರಾಗಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜಪರ ಕಾಳಜಿಯಿದೆ. ತುರ್ತು ಸಂದರ್ಭಗಳಲ್ಲಿ ಧೈರ್ಯದಿಂದ ಕಾರ್ಯನಿರ್ವಹಿಸಿ ಸಮಸ್ಯೆಯನ್ನು ಬಗೆಹರಿಸುವಲ್ಲಿ ಶ್ರಮಿಸುತ್ತಾರೆ. ಅವರ ಅಮೋಘವಾದ ಸೇವೆಯನ್ನು ಗಮನಿಸಿ ‘ಮುಖ್ಯಮಂತ್ರಿ ಪದಕ’ ನೀಡಿ, ಗೌರವಿಸಲಾಗಿದೆ. ಇದು ಇಲಾಖೆ, ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಸತ್ಕಾರ ಸ್ವೀಕರಿಸಿ ಮಾತನಾಡಿ ಶಾಂತಪ್ಪ ಪಟ್ಟೇದ್ ನೆಲೋಗಿ, ನನಗೆ ದೊರೆತ ಪುರಸ್ಕಾರ ನನ್ನ ಕಾರ್ಯಕ್ಕೆ ಕೈಜೋಡಿಸಿದ ಸಹದ್ಯೋಗಿಗಳು, ಇಲಾಖೆಯ ಅಧಿಕಾರಿಗಳಿಗೆ ಸಲ್ಲುತ್ತದೆ. ಬದ್ಧತೆಯಿಂದ ಸೇವೆ ಸಲ್ಲಿಸಬೇಕು ಎಂಬುದು ನನ್ನ ಧ್ಯೇಯವಾಗಿದ್ದು, ಆ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪುರಸ್ಕಾರ ನನಗೆ ಮತ್ತಷ್ಟು ಜವಾಬ್ದಾರಿಯನ್ನು ಹೆಚ್ಚಿಸಿದೆ. ಬಸವೇಶ್ವರ ಸಮಾಜ ಸೇವಾ ಬಳಗವು ಜಾತ್ಯಾತೀತ ಸೇವಾ ಸಂಸ್ಥೆಯಾಗಿದ್ದು, ಎಲ್ಲರನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಸಮಾಜ ಸೇವಕರಾದ ಡಾ.ಸುನೀಲಕುಮಾರ ಎಚ್.ವಂಟಿ, ದೇವೇಂದ್ರಪ್ಪ ಗಣಮುಖಿ, ಶಿವಯೋಗೆಪ್ಪಾ ಎಸ್.ಬಿರಾದಾರ, ಅಸ್ಲಾಂ ಶೇಖ್, ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳಾದ ಶ್ರೀಶೈಲ್, ಭೀಮಯ್ಯ, ಮಲ್ಲಿಕಾರ್ಜುನ ಇಟಗಾ, ಮೊಹ್ಮದ್ ಫಿರೋಜ್, ಆಸಿಂದಕುಮಾರ, ಸುನೀಲ್, ಯೂಸುಫ್, ಸುರೇಶ ಪೂಜಾರಿ, ಸೋಪನರಾವ್ ಸೇರಿದಂತೆ ಇನ್ನಿತರರು ಹಾಜರಿದ್ದರು.