ಶಹಾಬಾದ: ಬುದ್ದಿ, ದೇಹ, ಮನಸ್ಸ್ಸು ಎಲ್ಲವನ್ನು ನಿಯಂತ್ರಿಸಿ ಆರೋಗ್ಯ ಕೊಡುವ ಶಕ್ತಿ ಯೋಗದಲ್ಲಿದೆ. ಯೋಗ ಜೀವನದ ಅಂಗವಾದಲ್ಲಿ ನಮ್ಮ ಆರೋಗ್ಯ ಸದೃಡವಾಗಲಿದೆ ಎಂದು ಪತಂಜಲಿ ಯೋಗ ಸಮಿತಿಯ ಯೋಗ ಗುರುಗಳಾದ ಮೋಹನ ಘಂಟ್ಲಿ ಹಾಗೂ ನೀಲಗಂಗಮ್ಮ ಘಂಟ್ಲಿ ಹೇಳಿದರು.
ಅವರು ನಗರದ ಶರಣಬಸವೇಶ್ವರ ಆವರಣದಲ್ಲಿ ಪತಂಜಲಿ ಯೋಗ ಸಮಿತಿ, ಬಿಜೆಪಿ ಮಂಡಲ ವತಿಯಿಂದ ಆಯೋಜಿಸಲಾದ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ನಾವು ಪ್ರತಿ ನಿತ್ಯದ ನಮ್ಮ ದೈನಂದಿನ ಚಟುವಟಿಕೆಯಲ್ಲಿ ಯೋಗವನ್ನು ಒಂದು ಅಂಗವಾಗಿ ತೆಗೆದುಕೊಂಡಲ್ಲಿ ಆರೋಗ್ಯವಂತರಾಗುವುದರೊಂದಿಗೆ ನಮ್ಮ ಮುಂದಿನ ಪೀಳಿಗೆಗೂ ಉತ್ತಮ ಮಾರ್ಗದರ್ಶನವನ್ನು ನೀಡಬಹುದು. ಯೋಗವನ್ನು ಈ ಒಂದು ದಿನ ಮಾತ್ರ ಆಚರಿsಸಿದರೆ ಸಾಲದು ಅದನ್ನು ನಮ್ಮ ಜೀವನದಲ್ಲಿ ಪ್ರತಿ ದಿನ ಅಳವಡಿಸಿಕೊಳ್ಳಬೇಕು. ಸದೃಢವಾದ ದೇಹವನ್ನು ಹೊಂದಬೇಕಾದರೆ ಉತ್ತಮವಾದ ಆಹಾರದ ಜೊತೆಗೆ ಪರಿಶುದ್ಧವಾದ ಮನಸ್ಸನ್ನು ಹೊಂದುವುದು ಅಗತ್ಯವಿದೆ ಆರೋಗ್ಯವಂತ ಜೀವನಕ್ಕೆ ಪ್ರತಿನಿತ್ಯ ಪ್ರಾಣಾಯಾಮ, ಯೋಗ, ವ್ಯಾಯಾಮ, ಧ್ಯಾನ ರೂಪಿಸಿಕೊಳ್ಳುವುದರ ಜೊತೆಗೆ ಶುದ್ಧ ಆಹಾರ ಮತ್ತು ಪಾನೀಯ ಸೇವನೆಯಿಂದ ಆರೋಗ್ಯವಂತ ಬದುಕು ಕಂಡುಕೊಳ್ಳಲು ಸಾಧ್ಯವಿದೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ನಿಂಗಣ್ಣ ಹುಳಗೋಳಕರ್ ಮಾತನಾಡಿ, ಬದುಕಿಗೆ ಆಹಾರ,ನೀರು ಹಾಗೂ ಗಾಳಿ ಎಷ್ಟು ಅವಶ್ಯಕವೋ, ಅಷ್ಟೇ ಜೀವನಕ್ಕೆ ಯೋಗ ಅಗತ್ಯ
ಯೋಗ ರೋಗಗಳನ್ನು ಹೊಡೆದೊಡಿಸಿ, ದೇಹದ ಆರೋಗ್ಯವನ್ನು ಕಾಪಾಡುವ ಸಾಧನ.ಎಲ್ಲದಕ್ಕಿಂತ ಹೆಚ್ಚಿನದಾಗಿ ಶಾಂತಿ ಹಾಗೂ ಸಹಬಾಳ್ವೆಯಿಂದ ಬದುಕುವುದನ್ನು ಕಲಿಸಿಕೊಡುತ್ತದೆ.ಚಿಕ್ಕ ವಯಸ್ಸಿನಿಂದಲೇ ಯೋಗ ಮಾಡಿದರೆ ಜೀವನದಲ್ಲಿ ಎಲ್ಲವನ್ನು ಸಾಧಿಸುವ ಸಾಮಥ್ರ್ಯ ಯೋಗ ನೀಡುತ್ತದೆ. ಪ್ರಧಾನಿ ಮೋದಿಯವರು ಯೋಗಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಗ್ಗಳಿಕೆ ಬರುವಂಥ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀಶೈಲಪ್ಪ ಅವಂಟಿ, ಕನಕಪ್ಪ ದಂಡಗುಲಕರ, ಚಂದ್ರಕಾಂತ ಗೊಬ್ಬೂರಕರ ಕಾರ್ಯಕ್ರಮ ಉದ್ಘಾಟಿಸಿದರು. ಸಿದ್ರಾಮ ಕುಸಾಳೆ, ದೇವದಾಸ ಜಾಧವ, ಬಸವರಾಜ ಬಿರಾದಾರ, ಸೂರ್ಯಕಾಂತ ವಾರದ, ಯಲ್ಲಪ್ಪ ದಂಡಗುಲಕರ, ಗುರುಲಿಂಗಪ್ಪ ಚೆಟ್ಟಿ, ಚನ್ನಬಸಪ್ಪ ವಾರದ, ಚೆನ್ನಪ್ಪ ಕುಬಾರ, ಈರಣ್ಣ ಪ್ಯಾರಸಾಬಾದ, ಸಂತೋಷ ಪಾಟೀಲ ನಿರ್ಮಲಾ, ಸುಖೇಸಿನಿ ಜಾಧವ, ಪಾರ್ವತಿ ಚೆಟ್ಟಿ, ಪಾರ್ವತಿ ಇತರರು ಪಾಲ್ಗೊಂಡಿದ್ದರು.