ಕಲಬುರಗಿ: ಸರ್ವಶಕ್ತ, ಸರ್ವಾಂತರ್ಯಾಮಿ, ಸರ್ವಜ್ಞನಾದ ದೇವರನ್ನು ಸತ್ಸಂಗದ ಮೂಲಕ ಕಂಡು ಕೊಂಡು ಅನುಭವಿಸುವುದೇ ಶಿವಯೋಗ ಎಂದು ಪತ್ರಕರ್ತ- ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಗರದ ಮಾಕಾ ಲೇಔಟ್ ಬಡಾವಣೆಯಲ್ಲಿ ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿ ವತಿಯಿಂದ ಶುಕ್ರವಾರ ಬಸವ ಮಂಟಪದಲ್ಲಿ ಹಮ್ಮಿಕೊಂಡಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ‘ಶರಣರ ದೃಷ್ಟಿಯಲ್ಲಿ ಶಿವಯೋಗ’ ವಿಷಯ ಕುರಿತು ಮಾತನಾಡಿದ ಅವರು, ಚಂಚಲ ಚಿತ್ತವಾದ ಮನಸ್ಸನ್ನು ನಿಗ್ರಹ ಮಾಡಿ ಆರೋಗ್ಯ ಕಾಪಡಿಕೊಳ್ಳುವುದೇ ಯೋಗ ಎಂದು ತಿಳಿಸಿದರು.
ಲಿಂಗವ ಪೂಜಿಸಿ ಫಲವೇನಯ್ಯ, ನದಿಯೊಳಗೆ ನದಿ ಬೆರೆಸಿದಂತಾಗದನ್ನಕ್ಕ ಎನ್ನುವ ಬಸವಣ್ಣನವರ ವಚನದಂತೆ ಅಂಗತ್ವದಿಂದ ಲಿಂಗತ್ವ ಪಡೆಯುವುದೇ ನಿಜವಾದ ಯೋಗ ಎಂದು ಅವರು ಹೇಳಿದರು.
ಶಿವನಾಗಿ ಪೂಜಿಸಬೇಕು, ಹರನಾಗಿ ಪೂಜಿಸಬೇಕು, ಬಯಲು, ಬಯಲನೇ ಬಿತ್ತಿ ಬಯಲಾಗುವುದೇ ನಿಜವಾದ ಯೋಗವಾಗಿದ್ದು, ಅರಿವು, ಆಚಾರ ಒಂದಾಗುವುದೇ ನಿಜವಾದ ಪೂಜೆ. ಅದುವೆ ಶಿವಯೋಗ ಎಂಬುದನ್ನು ಶರಣರು ಅಂದೇ ಹೇಳಿದ್ದರು ಎಂದು ತಿಳಿಸಿದರು.
ಯೋಗ ಶಿಕ್ಷಕ ಶಿವಾನಂದ ದಾನಮ್ಮಗುಡಿ ಯೋಗ ತರಬೇತಿ ನೀಡಿದರು. ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಅಯ್ಯಣ್ಣ ನಂದಿ ಅಧ್ಯಕ್ಷತೆ ವಹಿಸಿದ್ದರು.
ರೂಪಾ ಮುನ್ನೋಳಿ, ಡಾ.ಸಂಜೀವಕುಮಾರ ಶೆಟಕಾರ, ಶ್ರೀದೇವಿ, ಲಕ್ಷ್ಮೀಬಾಯಿ, ಮಲ್ಲಿಕಾರ್ಜುನ ದ್ಯಾಮಗೊಂಡ, ಸಿದ್ಧರಾಮ ವಾಲಿ, ಚಂದ್ರಕಾಂತ ಅಂಕಲಗಿ, ಶರಣಬಸಪ್ಪ ಬಾಗೋಡಿ, ಪ್ರಸನ್ನ ವಾಂಜರಖೇಡ, ಸತೀಶ ಸಜ್ಜನ್, ಶಿವಾನಂದ ಮಾಲಗತ್ತಿ, ರಾಜು ಸಿನ್ನೂರ್ ಇತರರಿದ್ದರು.