ಕಲಬುರಗಿ: ಕಾಂಗ್ರೆಸ್ ಹೈಕಮಾಂಡ್ ದಲಿತ ನಾಯಕರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಬೇಕು ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ(ಕ್ರಾಂತಿಕಾರಿ)ರಾಜ್ಯ ಸಂಚಾಲಕ ಅರ್ಜುನ ಭದ್ರೆ ಒತ್ತಾಯಿಸಿದರು.
ನಾಡಿನಲ್ಲಿ ಕೋಮುದಾವ ಮತ್ತು ಫ್ಯಾಸಿಜಂ ಸೋಲಿಸಬೇಕು ಎಂದು ಕಾಂಗ್ರೆಸ್ ಪರವಾಗಿ ದಲಿತರು ಅವಿರತ ಶ್ರಮಿಸಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಡಾ.ಜಿ.ಪರಮೇಶ್ವರ, ಎಚ್.ಸಿ.ಮಹಾದೇವಪ್ಪ ಸೇರಿದಂತೆ ಹಲವಾರು ದಲಿತ ನಾಯಕರಿದ್ದು, ಅವರಲ್ಲಿ ಒಬ್ಬರನ್ನು ಸಿಎಂ ಮಾಡಬೇಕು ಎಂದು ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಜಾತಿಗೊಂದು ಮಠ ಮಾಡಿಕೊಂಡು ಮಠಾಧೀಶರು ತಮ್ಮ ಜಾತಿಯವರನ್ನು ಸಿಎಂ ಮಾಡಬೇಕು ಎಂದು ಪಕ್ಷದ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೆ, ದಲಿತ ಸಿಎಂ ಕೂಗು ಮುನ್ನೆಲೆಗೆ ಬಾರದಿರುವುದು ದುರಂತದ ಸಂಗತಿ ಎಂದರು.
ಸಾತ್ವಿಕತೆ ಬೋಧಿಸುವ ಸಾಧು, ಸಂತರು, ಕಾವಿಧಾರಿ ರಾಜಕಾರಣಿಗಳೋ ಎಂಬ ಅನುಮಾನ ಜನಸಾಮಾನ್ಯರಲ್ಲಿ ಶುರುವಾಗಿದೆ. ಬುದ್ಧ, ಬಸವ, ಪರಮಹಂಸ, ವಿವೇಕಾನಂದ, ರಮಣ, ನಾರಾಯಣಗುರು ಮೊದಲಾದ ನೀತಿ ಗುರುಗಳು ತೆರೆಯ ಹಿಂದೆ ಸರಿದಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯನ್ನೇ ಬಹಿರಂಗವಾಗಿ ಗೇಲಿ ಮಾಡುತ್ತಿರುವ ಜಾತಿ, ಜಾಗದ ಗುರುಗಳ ಸಂಖ್ಯೆ ಹೆಚ್ಚುತ್ತಿದೆ. ಈ ಬೆಳವಣಿಗೆ ಒಳ್ಳೆಯದಲ್ಲ. ಮಠಾಧೀಶರು ರಾಜಕೀಯ ಮಾಡುವುದು ಅವರ ಘನತೆಗೆ ಶೋಭೆ ತರುವುದಿಲ್ಲ ಎಂದು ಟೀಕಿಸಿದರು.
ಮಲ್ಲಿಕಾರ್ಜುನ ಖನ್ನಾ, ಸೂರ್ಯಕಾಂತ ಅಜಾದಪುರ, ಮಹೇಶ ಕೋಕಿಲೆ ಇತರರಿದ್ದರು.