ವಾಡಿ: ಅಕ್ಷರದಾಸೋಹ ಯೋಜನೆಯ ಮಧ್ಯಾಹ್ನದ ಬಿಸಿಯೂಟ ಸೇವಿಸಿ 30ಕ್ಕೂ ಅಧಿಕ ವಿದ್ಯಾರ್ಥಿಗಳು ವಾಂತಿ ಭೇದಿಯಿಂದ ಬಳಲಿ ಸುಸ್ತಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಚಿತ್ತಾಪುರ ತಾಲ್ಲೂಕಿನ ಸನ್ನತಿ ಗ್ರಾಪಂ ವ್ಯಾಪ್ತಿಯ ಕನಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದೆ.
ಘಟನೆಯಲ್ಲಿ ಸುಮಾರು 30ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು ಅದರಲ್ಲಿ 5-6 ವಿದ್ಯಾರ್ಥಿಗಳ ಆರೋಗ್ಯದಲ್ಲಿ ಗಂಭೀರ ವ್ಯತ್ಯಾಸ ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ.ಎಂ
ದಿನಂತೆ ಬಿಸಿ ಊಟ ಸೇವಿಸಿದ ಬಳಿಕ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಕೆಲವರಲ್ಲಿ ವಾಂತಿಭೇದಿ, ಕೈ ಕಾಲು ಸೆಳೆತ ತಲೆಸುತ್ತು ಉಂಟಾಗಿ ಶಾಲೆಯಲ್ಲೇ ನೆಲ ಹಿಡಿಯಲು ಆರಂಭಿಸಿದ್ದಾರೆ.
ಗಾಬರಿಗೊಂಡ ಶಿಕ್ಷಕರು ಪೋಷಕರಿಗೆ ಮಾಹಿತಿ ನೀಡಿ ಅಸ್ವಸ್ಥಗೊಂಡು ನೆಲ ಹಿಡಿದ ವಿದ್ಯಾರ್ಥಿಗಳನ್ನು ಸಮೀಪದ ಕೊಲ್ಲೂರು ಸರ್ಕಾರಿ ಆಸ್ಪತ್ರೆಗೆ ಮಕ್ಕಳನ್ನು ಕರೆತಂದಿದ್ದಾರೆ. 20ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರ ಸಮಸ್ಯೆ ಕಂಡು ಬಂದ 5 ವಿದ್ಯಾರ್ಥಿಗಳನ್ನು ವಾಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರೆ ಇನ್ನುಳಿದ 3-4 ವಿದ್ಯಾರ್ಥಿಗಳನ್ನು ಪೋಷಕರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡುತ್ತಿದ್ದಾರೆ. ಘಟನೆಗೆ ಬಿಸಿಯೂಟ ಸೇವನೆ ಅಥವಾ ನೀರು ಸೇವನೆ ಕಾರಣ ಅನ್ನುವುದು ಗೊತ್ತಾಗಿಲ್ಲ.
ವಿದ್ಯಾರ್ಥಿಗಳ ಅರೋಗ್ಯದಲ್ಲಿನ ಏರುಪೇರಿನಿಂದ ಗ್ರಾಮದಲ್ಲಿ ಈಗ ಆತಂಕದ ವಾತಾವರಣ ಉಂಟಾಗಿದೆ.