ಬೆಂಗಳೂರು: ಮೊಬೈಲ್ ಆಪ್ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆಹಚ್ಚಲು ಜುಲೈ 15 ರಿಂದ 30 ರವರೆಗೆ ಸಮೀಕ್ಷೆ ನಡೆಸಲಾಗುವುದು ಎಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಡಾ. ಶಾಲಿನಿ ರಜನೀಶ್ ಅವರು ತಿಳಿಸಿದರು.
ಇಂದು ವಿಧಾನಸೌಧದ ಅಭಿವೃದ್ಧಿ ಆಯುಕ್ತರ ಕೊಠಡಿಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮಸ್ಯೆಗಳ ಬಗ್ಗೆ ಚರ್ಚಿಸಲು ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಕ್ಷಣದಿಂದ ಯಾವ ಮಕ್ಕಳು ವಂಚಿತರಾಗಬಾರದು ಎನ್ನುವ ದೃಷ್ಟಿಯಿಂದ ಸಮೀಕ್ಷೆಯನ್ನು ಹಮ್ಮಿಕೊಳ್ಳಲಾಗಿದೆ. ಕಟ್ಟಡ ಕಾರ್ಮಿಕರ ಮಕ್ಕಳು, ವಲಸೆ ಬಂದಿರುವ ಮಕ್ಕಳು, ವಿಶೇಷ ಚೇತನ ಮಕ್ಕಳ ಸಮೀಕ್ಷೆಯನ್ನು ಆರ್‍ಡಿಪಿಆರ್, ಯುಡಿಡಿ ಮತ್ತು ಬಿಬಿಎಂಪಿ ಇಲಾಖೆಗಳಿಂದ ಹಾಗೂ ಪೈಲೆಟ್ ಸಮೀಕ್ಷೆಯನ್ನು ಗ್ರಾಮಾಂತರ, ಮಹಾನಗರ ಪಾಲಿಕೆ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕೈಗೊಳ್ಳಲು ಸೂಚಿಸಿದರು.
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆ ಹಚ್ಚಲು ಈಗಾಗಲೇ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ 3738 ಹಾಜರಾತಿ ಅಧಿಕಾರಿಗಳಿಗೆ ಹಾಗೂ ಕಾರ್ಮಿಕ ಇಲಾಖೆಯ ವತಿಯಿಂದ 1049 ಜಿಲ್ಲಾ ಮತ್ತು ತಾಲ್ಲೂಕಿನ ಹಿರಿಯ ಕಾರ್ಮಿಕ ನಿರೀಕ್ಷಕರುಗಳಿಗೆ ತರಬೇತಿ ನೀಡಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಗ್ರಾಮಪಂಚಾಯಿತಿ ಶಿಕ್ಷಣ ಪಡೆ ಸದಸ್ಯರುಗಳು ಹಾಗೂ ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳಿಗೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆ ಹಚ್ಚಲು ತರಬೇತಿಯನ್ನು ನೀಡಲು ಸೂಚಿಸಲಾಗಿದೆ.
ಪ್ರತಿ ಮಾಹೆಯ 5ನೇ ತಾರೀಖು 7 ದಿನಕ್ಕಿಂತ ಹೆಚ್ಚು ಗೈರುಹಾಜರಾದ ಮಕ್ಕಳ ವಿವರಗಳನ್ನು ತರಬೇತಿ ಪಡೆದ ಅಧಿಕಾರಿಗಳಿಂದ ಅನುಪಾಲನೆ ಮಾಡಿ ವರದಿ ಕ್ರೋಢೀಕರಿಸಲಾಗುತ್ತಿದೆ. ಆರ್.ಟಿ.ಇ ನಿಯಮ ‘6 ಡಿ’ ರಂತೆ ಹಾಜರಾತಿ ಅಧಿಕಾರಿಗಳು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಪೋಷಕರಿಗೆ ನೋಟೀಸ್ ನೀಡಿ ಶಾಲೆಗೆ ಕರೆತರಲು ಒಂದು ತಿಂಗಳ ಅವಧಿ ಹಾಗೂ ಶಾಲೆಗೆ ಹಾಜರಾಗದಿದ್ದಲ್ಲಿ ಮುಂದಿನ ಕ್ರಮ ಕೈಗೊಂಡು ವರದಿ ಕ್ರೋಢೀಕರಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಸಂಬಂಧ ಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.