ಸುರಪುರ: ಸರಕಾರಿ ನೌಕರರು ಒಳ್ಳೆ ಸಂಬಳ ಪಡೆಯುತ್ತಾರೆ ಎಂದು ಜನರು ಮಾತನಾಡುತ್ತಾರೆ,ಆದರೆ ನಮ್ಮ ಅಕ್ಷರ ದಾಸೋಹ ನೌಕರರು ಅತ್ಯಂತ ಕಡಿಮೆ ಸಂಬಳ ಪಡೆದು ಹೆಚ್ಚು ಕೆಲಸ ಮಾಡಿ ಮಕ್ಕಳಿಗೆ ಅನ್ನವ ಉಣಿಸುವ ಸೇವೆ ಅಮೋಘವಾಗಿದೆ ಎಂದು ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ ಮಾತನಾಡಿದರು.
ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು ಸಂಯೋಜನೆ) ಎರಡನೇ ಸಮಾವೇಶ ಉದ್ಘಾಟಿಸಿ ಮಾತನಾಡಿ,ಸರಕಾರ ಅಕ್ಷರ ದಾಸೋಹ ನೌಕರರಿಗೆ ಇನ್ನೂ ಹೆಚ್ಚಿನ ಸಂಬಳವನ್ನು ನೀಡಬೇಕು,ಅಕ್ಷರ ದಾಸೋಹ ನೌಕರರ ಸೇವೆಯನ್ನು ಸರಕಾರ ಅರಿತುಕೊಳ್ಳಬೇಕು ಎಂದರು.ಅಲ್ಲದೆ ಅಕ್ಷರ ದಾಸೋಹ ನೌಕರರಿಗೆ ನಮ್ಮಿಂದ ಬೇಕಾದ ಸಹಕಾರವನ್ನು ನೀಡುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರ ಸಹೋದರ ರಾಜಾ ಸುಶಾಂತ ನಾಯಕ ಮಾತನಾಡಿ,ಸರಕಾರ ಅಕ್ಷರ ದಾಸೋಹ ನೌಕರರಿಗೆ ವಿವಿಧ ಸೌಲಭ್ಯಗಳನ್ನು ನೀಡಿದೆ,ಇನ್ನೂ ಹೆಚ್ಚಿನ ಸೌಲಭ್ಯದ ಕುರಿತು ತಾವು ಬೇಡಿಕೆಯನ್ನು ಸಲ್ಲಿಸಿದಲ್ಲಿ ಅದನ್ನು ನಮ್ಮ ಅಣ್ಣನವರಾದ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರ ಗಮನಕ್ಕೆ ತಂದು ನಿಮ್ಮ ಬೇಡಿಕೆಗಳಿಗೆ ಸ್ಪಂಧಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಕಾಮ್ರೆಡ್ ಮಾಲಿನಿ,ಕೇತ್ರ ಸಮನ್ವಯಾಧಿಕಾರಿ ಪಂಡಿತ ನಿಂಬೂರ,ತಾ.ಪ್ರಧಾನ ಕಾರ್ಯದರ್ಶಿ ಸುರೇಖಾ ಕುಲಕರ್ಣಿ ಹಾಗೂ ಹಿಂದಿನ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾಗಿದ್ದ ಮೌನೇಶ ಕಂಬಾರ ಸೇರಿ ಅನೇಕರು ಮಾತನಾಡಿದರು.ಇದೇ ಸಂದರ್ಭದಲ್ಲಿ ಮೌನೇಶ ಕಂಬಾರ ಅವರಿಗೆ ವೀಶೆಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಅಲ್ಲದೆ ಉತ್ತಮವಾಗಿ ಸೇವೆ ಸಲ್ಲಿಸಿ ಅಕ್ಷರ ದಾಸೋಹ ನೌಕರರಿಗೆ ಸನ್ಮಾನಿಸಿ ಪ್ರಶಸ್ತಿ ನೀಡಿ ಗೌರವಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘಟನೆ ತಾ.ಅಧ್ಯಕ್ಷೆ ಸೌಜಾದಿ ಬೇಗಂ ವಹಿಸಿದ್ದರು,ಸಿದ್ದಮ್ಮ ಬಾಗಲಕೋಟೆ,ರಾಜಶೇಖರ ದೇಸಾಯಿ,ಸೋಮರಡ್ಡಿ ಮಂಗಿಹಾಳ,ಪ್ರಕಾಶ ಆಲ್ಹಾಳ,ಈರಮ್ಮ ಹೈಯಾಳಕರ್ ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದರು.
ತಾಲೂಕಿನಾದ್ಯಂತ ಆಗಮಿಸಿದ್ದ ಎರಡು ನೂರಕ್ಕೂ ಹೆಚ್ಚು ಜನ ಅಕ್ಷರ ದಾಸೋಹ ನೌಕರರು ಭಾಗವಹಿಸಿದ್ದರು.