- ಎಂ.ಡಿ ಮಶಾಖ ಚಿತ್ತಾಪುರ
ಚಿತ್ತಾಪುರ; ಪಟ್ಟಣದ ನಾಗಾವಿ ಕ್ಯಾಂಪಸ್’ನಲ್ಲಿರುವ ಸರ್ಕಾರಿ ಆದರ್ಶ ವಿದ್ಯಾಲಯದ ಮುಖ್ಯಗುರು ಹಾಗೂ ಅಡುಗೆ ಸಿಬ್ಬಂದಿಯವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ತಾಲೂಕು ಅಧ್ಯಕ್ಷ ಚಂದರ್ ಚವ್ಹಾಣ ಆಗ್ರಹಿಸಿದ್ದಾರೆ.
ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ ಅವರು, ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸಮಯಕ್ಕೆ ಸರಿಯಾಗಿ ಮಕ್ಕಳಿಗೆ ನೀಡಲ್ಲ. ಕಸಕಡ್ಡಿ ಹುಳಗಳು ಮಿಶ್ರಿತ ಆಹಾರ ನೀಡುತ್ತಾರೆ. ಅರೆಬರೆ ಕುದಿಸಿದ ಮೊಟ್ಟೆ ನೀಡುತ್ತಾರೆ, ಬೆಳೆ ಸಾಂಬಾರದಲ್ಲಿ ತರಕಾರಿ ಬಳಸದೆ ತಿಳಿಯಾಗಿರುತ್ತದೆ.
ಹಣ್ಣಾದ ಬಾಳೆಹಣ್ಣು ನೀಡದೆ ಖಗ್ಗಾದ ಹಣ್ಣನ್ನು ನೀಡುತ್ತಿದ್ದು, ಇದರಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಇಷ್ಟೇಲ್ಲಾ ಸಮಸ್ಯೆಗಳಿದ್ದರೂ ಮುಖ್ಯಗುರುಗಳು ಮಾತ್ರ ಗಮನ ಹರಿಸದೇ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಹೇಳಿದರು.
ಇತ್ತೀಚೆಗೆ ಸೀರಾದಲ್ಲಿ ಹುಳಗಳು ಕಂಡು ಮಕ್ಕಳು ತಿನ್ನದೇ ಆಕ್ಷೇಪಿಸಿದಾಗ ಈ ವಿಷಯ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರ ಗಮನಕ್ಕೆ ಬರುತ್ತಿದ್ದಂತೆ ಮುಖ್ಯಗುರುಗಳು ಮಾಡಿದ ಸೀರಾ ಹೊರಗಡೆ ಚೆಲ್ಲಿ ಕೈ ತೊಳೆದುಕೊಂಡಿರುವ ಘಟನೆ ನಡೆದಿತ್ತು.
ಆದಾದ ಮೇಲೆಯೂ ಯಾವುದೇ ಸುಧಾರಣೆ ಕಂಡಿಲ್ಲ. ನಿತ್ಯದ ಅಡುಗೆ ಸಿಬ್ಬಂದಿ ಅಕ್ಕಿ ಬೇಳಿಯನ್ನು ಸರಿಯಾಗಿ ಸ್ವಚ್ಛತೆ ಮಾಡದೇ ಹಾಗೆಯೇ ಮಾಡುತ್ತಿದ್ದರಿಂದ ನಿತ್ಯ ಕಸಕಡ್ಡಿ ಮಿಶ್ರಿತ ಬಿಸಿಯೂಟ ಸೇವನೆ ಮಾಡಬೇಕಾದ ಪರಿಸ್ಥಿತಿಯಿದೆ. ಆದ್ದರಿಂದ ಕೂಡಲೇ ಬೇಜವಾಬ್ದಾರಿ ಮುಖ್ಯಗುರು ಮತ್ತು ಅಡುಗೆ ಸಿಬ್ಬಂದಿಗಳನ್ನು ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಕರವೇ ಪದಾಧಿಕಾರಿಗಳಾದ ಭಾಸ್ಕರ ಕರಿಚಕ್ರ, ಗಣೇಶ ರಾಠೋಡ, ಜಗದೀಶ್ ದಂಡೋತಿ, ಅಪ್ಸರ್ ಸೇಟ್, ಬಸವರಾಜ ದೇವಣಿ, ರಾಜಶೇಖರ ಗುತ್ತೇದಾರ, ದೇವಪ್ಪ ಯಾಗಾಪೂರ, ಆಸೀಫ್ ಇವಣಿ ಇದ್ದರು.