ಕಲಬುರಗಿ: ಶಿಕ್ಷಣ ಕ್ಷೇತ್ರದಲ್ಲಿ ಡಾ. ಅಪ್ಪಾಜಿಯವರ ಸಾಟಿಯಿಲ್ಲದ ಅವಿರತ ಶ್ರಮಕ್ಕಾಗಿ ಮತ್ತು ಒಂದು ಕಾಲದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶವನ್ನು ಪ್ರಮುಖ ಶೈಕ್ಷಣಿಕ ಕೇಂದ್ರವಾಗಿ ಪರಿವರ್ತಿಸುವಲ್ಲಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅಪ್ರತಿಮ ಕೊಡುಗೆ ನೀಡಿದ ಶರಣಬಸವ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಾಧಿಪತಿಗಳಾದ ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರಿಗೆ ರವಿವಾರ ಸಂಜೆ ಗುರುವಂದನೆ ಸಲ್ಲಿಸಲಾಯಿತು.
ಶರಣಬಸವೇಶ್ವರ ಸಂಸ್ಥಾನದ ಮಹಾಮನೆಯಲ್ಲಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಇಡೀ ಉತ್ತರ ಕರ್ನಾಟಕದಲ್ಲಿ ಪ್ರಥಮ ಬಹುಶಿಸ್ತೀಯ ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೆ ಕಾರಣರಾದ ಡಾ. ಅಪ್ಪಾಜಿ ಅವರಿಗೆ ನಮನ ಸಲ್ಲಿಸಿದ ಧಾರ್ಮಿಕ ಮುಖಂಡರು ಒಟ್ಟುಗೂಡಿ ಅಪ್ಪಾಜಿಯವರ ಶಿಕ್ಷಣ ದಾಸೋಹ ಪ್ರೇಮವನ್ನು ಕೊಂಡಾಡಿದರು.
ಡಾ. ಅಪ್ಪಾಜಿಯವರು ಮಾಂಟೆಸ್ಸರಿಯಿಂದ ಸ್ನಾತಕೋತ್ತರ ಪದವಿಯವರೆಗೆ ವಿವಿಧ ವಿಭಾಗಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವ ಮೂಲಕ ಈ ಭಾಗದ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಸಬಲೀಕರಣಕ್ಕೆ ಕಾರಣರಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಹರಸೂರು ಗ್ರಾಮ ಕಲ್ಮಠದ ಪೂಜ್ಯ ಷ. ಬ್ರ. ಕರಿಸಿದ್ದೇಶ್ವರ ಶಿವಾಚಾರ್ಯರು, ಬೆಳಗುಂಪಿ ಮಠದ ಪೂಜ್ಯ ಷ. ಬ್ರ. ಅಭಿನವ ಪರ್ವತೇಶ್ವರ ಮಹಾಸ್ವಾಮಿಗಳು ಹಾಗೂ ಚೌಡಾಪುರಿ ಮಠದ ಪೂಜ್ಯ ಡಾ. ರಾಜಶೇಖರ ಶಿವಾಚಾರ್ಯರು ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದರು.
ಅಪ್ಪಾಜಿ ಅವರ ಉತ್ತರಾಧಿಕಾರಿ ಹಾಗೂ 9ನೇ ಪೀಠಾಧಿಪತಿ ಚಿರಂಜೀವಿ ಪೂಜ್ಯ ದೊಡ್ಡಪ್ಪ ಅಪ್ಪಾಜಿ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಈ ಸಂದರ್ಭದಲ್ಲಿ ಮಾತನಾಡಿ, ಈ ಪ್ರದೇಶದ ಮಕ್ಕಳಿಗೆ ಶೈಕ್ಷಣಿಕ ಅವಕಾಶಗಳ ಹೊಸ ಮಾರ್ಗಗಳನ್ನು ತೆರೆದು ಕೈಗೆಟುಕುವ ವೆಚ್ಚದಲ್ಲಿ, ಗುಣಮಟ್ಟದ ಶಿಕ್ಷಣವನ್ನು ಒದಗಿಸಿದ ಡಾ. ಅಪ್ಪಾಜಿಯವರಿಗೆ ಗುರು ಎಂದು ಕರೆಯಲು ಮತ್ತು ಗುರುತಿಸಲು ಸರಿಯಾದ ವ್ಯಕ್ತಿಯಾಗಿದ್ದಾರೆ ಎಂದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ ತಮ್ಮ ಸ್ವಾಗತ ಭಾಷಣದಲ್ಲಿ, 250 ವರ್ಷಗಳ ಹಿಂದೆ ಶರಣರು ಈ ಭಾಗದಲ್ಲಿ ಗುರು-ಶಿಷ್ಯ ಪರಂಪರೆಯನ್ನು ಆರಂಭಿಸಿದ್ದು, ಇಂದಿಗೂ ಈ ಪರಂಪರೆ ಮುಂದುವರಿದುಕೊಂಡು ಬಂದಿದೆ. ಶರಣಬಸವೇಶ್ವರ ದೇಗುಲದ ಗರ್ಭಗುಡಿಯಲ್ಲ್ಲಿ ಗುರು ಮತ್ತು ಶಿಷ್ಯರು ವಿರಾಜಮಾನರಾಗಿದ್ದಾರೆ. ಇದು ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ಪುಣ್ಯಕ್ಷೇತ್ರದಲ್ಲಿ ಕಾಣಸಿಗುತ್ತದೆ ಎಂದರು.
ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ, ಚಿರಂಜೀವಿ ಪೂಜ್ಯ ದೊಡ್ಡಪ್ಪ ಅಪ್ಪಾಜಿ ಮತ್ತು ಅವರ ಸಹೋದರಿಯರಾದ ಕುಮಾರಿ ಮಹೇಶ್ವರಿ ಎಸ್ ಅಪ್ಪ, ಕುಮಾರಿ ಶಿವಾನಿ ಎಸ್. ಅಪ್ಪ ಹಾಗೂ ಕುಮಾರಿ ಭವಾನಿ ಎಸ್. ಅಪ್ಪ ಅವರು ಕೂಡಿಕೊಂಡು ಡಾ. ಶರಣಬಸವಪ್ಪ ಅಪ್ಪಾಜಿ, ಪೂಜ್ಯ ಡಾ. ರಾಜಶೇಖರ ಶಿವಾಚಾರ್ಯರು, ಪೂಜ್ಯ ಕರಿಸಿದ್ದೇಶ್ವರ ಶಿವಾಚಾರ್ಯರು ಮತ್ತು ಪೂಜ್ಯ ಅಭಿನವ ಪರ್ವತೇಶ್ವರ ಮಹಾಸ್ವಾಮಿಗಳಿಗೆ ಗುರುವಂದನಾ ಅನುಕ್ರಮವಾಗಿ ಪಾದಪೂಜೆ ಸಲ್ಲಿಸಿದರು.
ಗುರುವಂದನಾ ಕಾರ್ಯಕ್ರಮದ ಆರಂಭದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಡಾ. ಅಪ್ಪಾಜಿ ಅವರಿಗೆ ನೀಡಿದ ಸಂಗೀತ ಗುರುವಂದನಾ ಗೌರವ ಸಲ್ಲಿಸಿದರು.
ವಿದ್ಯಾರ್ಥಿಗಳು ಮತ್ತು ಸಂಗೀತ ವಿಭಾಗದ ಅಧ್ಯಾಪಕರು 12ನೇ ಶತಮಾನದ ವಚನಗಳನ್ನು ಸಂಗೀತ ರೂಪದಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ತಮ್ಮ ಭಾವಪೂರ್ಣ ಮಾಂತ್ರಿಕ ಗಾಯನದೊಂದಿಗೆ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದರು. ಇದೇ ಸಂದರ್ಭದಲ್ಲಿ ಪಿಎಚ್. ಡಿ. ಪದವಿ ಪಡೆದವರೆಲ್ಲರಿಗೂ ಸನ್ಮಾನಿಸಲಾಯಿತು.
ಗುರುವಂದನಾ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರ. ಅನಿಲಕುಮಾರ ಬಿಡವೆ, ಕುಲಸಚಿವ ಡಾ. ಎಸ್.ಜಿ.ಡೊಳ್ಳೇಗೌಡರ್, ಕುಲಸಚಿವ(ಮೌಲ್ಯಮಾಪನ) ಡಾ. ಎಸ್.ಎಚ್.ಹೊನ್ನಳ್ಳಿ, ಡೀನ್ ಡಾ. ಲಕ್ಷ್ಮೀ ಪಾಟೀಲ ಮಾಕಾ ಸೇರಿದಂತೆ ವಿವಿಧ ವಿಭಾಗಗಳ ಡೀನರು, ಮುಖ್ಯಸ್ಥರು ಹಾಗೂ ಇತರ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಂಘದಡಿಯಲ್ಲಿ ನಡೆಸುವ ಎಲ್ಲಾ ಶಾಲಾ ಕಾಲೇಜುಗಳ ಪ್ರಾಂಶುಪಾಲರು ಮತ್ತು ಇತರ ಸಿಬ್ಭಂದಿ ವರ್ಗದವರು ಡಾ. ಅಪ್ಪಾಜಿಯವರಿಗೆ ಗುರುವಂದನೆ ಸಲ್ಲಿಸಿದರು. ಗುರುವಂದನೆ ಸಲ್ಲಿಸಿದವರಲ್ಲಿ ಜಗನ್ನಾಥ ಡಿಗ್ಗಿ, ಅವರ ಪತ್ನಿ ಜಗದೇವಿ ಡಿಗ್ಗಿ ಮತ್ತು ಡಾ. ಬಸವರಾಜ ಡಿಗ್ಗಿ ಪ್ರಮುಖರು.