ರಂಗದಂಗಳದಲ್ಲಿ ಮಾತುಕತೆಯಲ್ಲಿ ರಂಗಕರ್ಮಿ ಸಾಂಬಶಿವ ದಳವಾಯಿ ಹೇಳಿಕೆ
ಕಲಬುರಗಿ: ಕೋವಿಡ್‌ನಿಂದ ರಂಗ ಚಟುವಟಿಕೆಗಳು ಮಂಕಾಗಿದ್ದವು. ಇದೀಗ ನಿಧಾನಗತಿಯಲ್ಲಿ ಅವು ಚೇತರಿಕೆ ಕಾಣುತ್ತಿರುವುದು ಸಂತಸ ತಂದಿದೆ ಎಂದು ಹಿರಿಯ ರಂಗಕರ್ಮಿ ಸಾಂಬಶಿವ ದಳವಾಯಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕಲಬುರಗಿ ರಂಗಾಯಣ ಇವರು ಸಂಯುಕ್ತಾಶ್ರಯದಲ್ಲಿ ಶನಿವಾರ ಕಲಬುರಗಿ ರಂಗಾಯಣದ ಸಭಾಂಗಣದಲ್ಲಿ ಇಳಿ ಹೊತ್ತಲ್ಲಿ ನಡೆದ “ರಂಗದಂಗಳದಲ್ಲಿ ಮಾತುಕತೆ” ಕಾರ್ಯಕ್ರಮ ಭಾಗವಹಿಸಿ ಮುಕ್ತ ಮನಸ್ಸಿನಿಂದ ಮಾತನಾಡಿದರು.
ಇತ್ತೀಚೆಗೆ ನಾಟಕಗಳು ಕಡಿಮೆಯಾಗುತ್ತಿವೆ. ಒಂದಿಬ್ಬರು, ನಾಲ್ವರು ಸೇರಿ ನಾಟಕ ಮಾಡುತ್ತಿದ್ದಾರೆ. ಮಹಿಳಾ ಕಲಾವಿದರ ಕೊರತೆ ರಂಗಭೂಮಿ ಅನುಭವಿಸುತ್ತಿದೆ. ನಾಟಕ ರಂಗದ ಸದಭಿರುಚಿ ಬೆಳೆಸುವ ನಿಟ್ಟಿನಲ್ಲಿ ನಾವು ನಾಟಕಗಳನ್ನು ಕಟ್ಟಬೇಕಾಗಿದೆ ಎಂದರು.
ರಂಗಭೂಮಿ ಪರಂಪರೆಯಲ್ಲಿ ನಾನೊಬ್ಬನಾಗಿರುವುದಕ್ಕೆ ತೃಪ್ತಿ ಇದೆ ಎಂದ ಅವರು ನೀನಾಸಂನಲ್ಲಿ ಡಿಪ್ಲೋಮಾ ಪದವಿ, ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಪದವಿ ಪಡೆದು ಹಲವಾರು ನಾಟಕ, ಸಿನಿಮಾದಲ್ಲಿ ಅಭಿನಯ ಮತ್ತು ನಿರ್ದೇಶನ ಮಾಡಿದ್ದರೂ ಇದೂವರೆಗೆ ರಾಜ್ಯ ಸರ್ಕಾರದಿಂದ ನಮ್ಮ ಕಡೆಗೆ ಯಾವ ಪ್ರಶಸ್ತಿಯೂ ವಾಲುತ್ತಿಲ್ಲ ಎಂಬ ಬೇಸರ ಮನದಲ್ಲಿದೆ ಎಂದರು.
ಇದೇ ಸಂದರ್ಭದಲ್ಲಿ ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ತಮಗೆ ಕರ್ಣಭಾರ ಪಾತ್ರ ತುಂಬಾ ಅಚ್ಚುಮೆಚ್ಚಿನದು. 1993 ರಲ್ಲಿ ಚಿತ್ರದುರ್ಗದಲ್ಲಿ ಒಂದೂವರೆ ಗಂಟೆ ನಿರಂತರ ಅಭಿನಯ ಮಾಡಿರುವೆ ಎಂದರು.
ಇದಕ್ಕು ಮುನ್ನ ಕಲಬುರಗಿ ರಂಗಾಯಣ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿ, ಹಿರಿಯ ರಂಗಭೂಮಿ ಕಲಾವಿದರು ತಮ್ಮ ರಂಗ ಪಯಣ ಮೆಲುಕು ಹಾಕುವುದರ ಜೊತೆಗೆ ಅವರ ಅನುಭವ ಮುಂದಿನ ಪೀಳಿಗೆಗೆ ಪರಿಚಯಿಸಲು ರಂಗಾಯಣವು ಇಂತಹ ಕಾರ್ಯಕ್ರಮ ಆಯೋಜಿಸಿದೆ ಎಂದು ತಿಳಿಸುತ್ತಾ ರಂಗಕರ್ಮಿ ಸಾಂಬಶಿವ ದಳವಾಯಿ ಅವರು ಕಿರು ಪರಿಚಯ ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್.ನಿರಗುಡಿ, ಹಿರಿಯ ಸಾಹಿತಿಗಳಾದ ಎಸ್.ಎಸ್. ಹಿರೇಮಠ, ಸ್ವಾಮಿರಾವ ಕುಲಕರ್ಣಿ, ಮಹಾನಂದಾ, ಎಚ್.ಎಸ್.ಬಸವಪ್ರಭು, ನಾರಾಯಣ ಕುಲಕರ್ಣಿ, ಗಿರಿಧರ ಸೇರಿದಂತೆ ಅನೇಕ ಸಾಹಿತಿಗಳು, ರಂಗಕರ್ಮಿಗಳು ಭಾಗವಹಿಸಿದ್ದರು. ರಂಗಾಯಣ ಉಪನಿರ್ದೇಶಕಿ ಜಗದೀಶ್ವರಿ ನಾಸಿ ಸರ್ವರನ್ನು ಸ್ವಾಗತಿಸಿದರು.