ಕಲಬುರಗಿ:ಪ್ರತಿ ವರ್ಷದಂತೆ ಜಯನಗರ ಶಿವಮಂದಿರದಲ್ಲಿ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಶ್ರಾವಣ ಮಾಸದ ನಿಮಿತ್ತ ಆಗಷ್ಟ್ 5 ರಿಂದ ಸೆ.1ರವರೆಗೆ ಒಂದು ತಿಂಗಳು ಕಲಬುರಗಿ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಪುರಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ಇಂದಿಲ್ಲಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆಧುನಿಕ ಯುಗದಲ್ಲಿ ಅದರಲ್ಲೂ ಟಿವಿ ಮನರಂಜನೆ ಹಾಗೂ ಮೋಬೈಲ್ ಗಳ ಹಾವಳಿಯಿಂದ ಪುರಾತನ ಕಾಲದ ಪುರಾಣಗಳು ಮರೆಯಾಗುತ್ತಿವೆ.
ನಗರಗಳಲ್ಲಿ ಪ್ರವಚನ,ಪುರಾಣಗಳು ಎಂದರೆ ಇಂದಿನ ಜನಾಂಗಕ್ಕೆ ಅಸಡ್ಯೆ ಭಾವನೆ.ಇಂಥ ಪರಿಸ್ಥಿತಿಯಲ್ಲೂ ಜಯನಗರ ಶಿವಮಂದಿರದಲ್ಲಿ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ತಿಂಗಳು ಪರ್ಯಂತ ಆಧ್ಯಾತ್ಮಿಕ ಪ್ರವಚನ ನಡೆಸುತ್ತಾ ಬರಲಾಗಿದೆ. ಈ ವರ್ಷ ವಿಭಿನತೆಯ ಪುರಾಣ ನಡೆಯಲಿದೆ.ದಿನ ನಿತ್ಯ 7 ರಿಂದ 8 ಗಂಟೆವರೆಗೆ ಚಿಂಚೋಳಿ ತಾಲೂಕಿನ ಐನಾಪೂರ ಗ್ರಾಮದ ಪುರಾಣ ಪಂಡಿತ ಶ್ರೀ ಮಲ್ಲಿಕಾರ್ಜುನ ಶಾಸ್ತ್ರೀ ಕಲಬುರಗಿಯ ಆರಾಧ್ಯ ದೈವ ಮಹಾ ದಾಸೋಹಿ ಶ್ರೀ ಶರಣಬಸವೇಶ್ವರ ಪುರಾಣ ನಡೆಸಿಕೊಡಲಿದ್ದಾರೆ.
ನಂತರ ರಾತ್ರಿ 8 ರಿಂದ 8.30 ಗಂಟೆವರೆಗೆ ವಿಶೇಷ ಕಾರ್ಯಕ್ರಮ ನಡೆಯಲಿದೆ.ಇದರಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು,ಚಿಂತಕರು ಮತ್ತು ಸಾಹಿತಿಗಳು, ಪತ್ರಕರ್ತರು ಭಾಗವಹಿಸುವರು.ಕಳೆದ ವರ್ಷ ಶ್ರಾವಣ ಮಾಸದ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು.ಅನೇಕರಿಂದ ವಿವಿಧ ರೀತಿಯ ಉಪನ್ಯಾಸಗಳು ನಡೆದು ಜನರು ಮೆಚ್ಚುಗೆ ವ್ಯಕ್ತಪಡಿಸಿದರು.
ಅದೇ ರೀತಿ ಅದರ ಜೊತೆಗೆ ಮಕ್ಕಳಿಗಾಗಿ ರಂಗೋಲಿ, ಚಿತ್ರ ಬಿಡಿಸುವುದು ಸೇರಿದಂತೆ ಅನೇಕ ಸ್ಪರ್ಧೆಗಳು ಎರ್ಪಡಿಸಿ ಬಹುಮಾನ ವಿತರಣೆ ಮಾಡಲಾಯಿತು.ಜನ ಮೆಚ್ಚುಗೆಗೂ ಪಾತ್ರವಾಯಿತು ಎಂದರು.
ಆ.5 ರಂದು ಸೋಮವಾರ ಸಂಜೆ 7 ಗಂಟೆಗೆ ಜಯನಗರ ಶಿವಮಂದಿರದಲ್ಲಿ ಹಮ್ಮಿಕೊಂಡಿರುವ ಪುರಾಣ ಕಾರ್ಯಕ್ರಮವನ್ನು ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಉದ್ಘಾಟನೆ ಮಾಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಶ್ರೀ ಶರಣಬಸವ ವಿದ್ಯಾ ವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಟ್ರಸ್ಟ್ ಗೌರವಾಧ್ಯಕ್ಷ ಹಾಗೂ ಎಚ್ಕೆಇ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ, ಮಹಾನಗರ ಪಾಲಿಕೆ ಸದಸ್ಯ ವೀರಣ್ಣ ಹೊನ್ನಳ್ಳಿ, ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಆಗಮಿಸಲಿದ್ದಾರೆ.ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಅಧ್ಯಕ್ಷತೆ ವಹಿಸುವರು.
ಪುರಾಣ ಪಂಡಿತ ಶ್ರೀ ಮಲ್ಲಿಕಾರ್ಜುನ ಶಾಸ್ತ್ರೀ ಪುರಾಣ ನಡೆಸಿಕೊಡುವರು. ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಮಹಿಳಾ ಘಟಕದ ಸದಸ್ಯರು ಉಪಸ್ಥಿತರಿರುವರು.ತಿಂಗಳ ಪರ್ಯಂತ ನಡೆಯುವ ಪುರಾಣ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕದ ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ.
ಪುರಾಣದ ನಂತರ ನಿತ್ಯ ಪ್ರಸಾದ ವ್ಯವಸ್ಥೆ ಇರುತ್ತದೆ.ಪ್ರಸಾದ ದಾಸೋಹಿಗಳಿಗೆ ಸತ್ಕರಿಸಲಾಗುವುದು. ಅದೇ ರೀತಿ ಪುರಾಣದ ಮಹಾ ಮಂಗಲೋತ್ಸವ ಸೆ.1 ಭಾನುವಾರರಂದು ಜರುಗಲಿದೆ.ಭಕ್ತರು, ಸಾರ್ವಜನಿಕರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಬೇಕು ಎಂದು ಅವರು ಕೋರಿದ್ದಾರೆ.