ಕಲಬುರಗಿ: ತಾಲೂಕಿನ ಶ್ರೀನಿವಾಸ ಸರಡಗಿ ಗ್ರಾಮದಲ್ಲಿ ಕಲಬುರಗಿ ನಗರದಲ್ಲಿರುವ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶೇಠ ಶಂಕರಲಾಲ ಲಾಹೋಟಿ ಲಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್) ಘಟಕದ ವಿದ್ಯಾರ್ಥಿಗಳು ಶುಕ್ರವಾರ ಒಂದು ದಿನದ ಕಾರ್ಯ ಶಿಬಿರ ನಡೆಸಿದರು.
ಲಾಹೋಟಿ ಲಾ ಕಾಲೇಜಿನ ಎನ್.ಎಸ್.ಎಸ್ ಘಟಕದ ಅಧಿಕಾರಿಯಾಗಿರುವ ಉಪನ್ಯಾಸಕಿ ಡಾ. ಜ್ಯೋತಿ ಕಡಾದಿ, ವಿದ್ಯಾರ್ಥಿ ಸಂಯೋಜಕಿ, ಉಪನ್ಯಾಸಕಿ ಕರುಣಾ ಪಾಟೀಲ್ ರವರ ನೇತೃತ್ವದಲ್ಲಿ ಶ್ರೀನಿವಾಸ ಸರಡಗಿ ಗ್ರಾಮಕ್ಕೆ ಆಗಮಿಸಿದ ಎನ್ಎಸ್ಎಸ್ ವಿದ್ಯಾರ್ಥಿಗಳು ಗ್ರಾಮದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ಸ್ವಚ್ಚತಾ ಕಾರ್ಯಕ್ರಮ ನಡೆಸಿ, ಸಸಿ ನಾಟಿ ಮಾಡುವ ಮೂಲಕ ಶ್ರಮದಾನ ಮಾಡಿದರು.
ಬಳಿಕ ಸಂಜೆಯ ವೇಳೆ ಶ್ರೀನಿವಾಸ ಸರಡಗಿಯ ಶ್ರೀ ಚಿನ್ನದ ಕಂತಿ ಚಿಕ್ಕ ವೀರೇಶ್ವರ ಸಂಸ್ಥಾನ ಹಿರೇಮಠದ ಆವರಣದಲ್ಲಿ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಷ.ಬ್ರ ಡಾ.ರೇವಣಸಿದ್ದ ಶಿವಾಚಾರ್ಯರ ದಿವ್ಯ ಸಾನಿಧ್ಯದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ, ಸಸಿಗೆ ನೀರೆರೆಯುವ ಮೂಲಕ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವಚನ ನೀಡಿದ ಪರಮ ಪೂಜ್ಯ ಶ್ರೀ ಷ.ಬ್ರ ಡಾ.ರೇವಣಸಿದ್ದ ಶಿವಾಚಾರ್ಯರು, ಎನ್.ಎಸ್.ಎಸ್ ಶಿಬಿರದಿಂದ ಏನೆಲ್ಲಾ ಲಾಭಗಳು ಇವೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು.
ಕಾನೂನು ವಿದ್ಯಾರ್ಥಿಗಳ ಮೇಲೆ ಬಹಳಷ್ಟು ದೊಡ್ಡಮಟ್ಟದ ಜವಾಬ್ದಾರಿ ಇರುತ್ತದೆ. ಕಾನೂನು ವಿದ್ಯಾರ್ಥಿಗಳಿಂದ ಬಹಳಷ್ಟು ಜನರು ಒಳಿತನ್ನು ನಿರೀಕ್ಷೆ ಮಾಡ್ತಿರುತ್ತಾರೆ. ಇಂತಹ ಶಿಬಿರಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಮಾಡುವುದರಿಂದ ಸಾಕಷ್ಟು ಅನುಕೂಲಗಳಾಗುತ್ತವೆ.
ಗ್ರಾಮೀಣ ಭಾಗದ ಜನರಿಗೆ ಪರಿಸರದ, ಕಾನೂನಿನ ಅರಿವು ಮೂಡಿಸುವುದು ಬಹಳ ಮುಖ್ಯವಾಗಿರುತ್ತದೆ. ಗ್ರಾಮೀಣ ಭಾಗದಲ್ಲಿ ಇಂತಹ ಶಿಬಿರಗಳನ್ನು ಮಾಡುವ ಮೂಲಕ ಗ್ರಾಮೀಣ ಭಾಗದ ಜನರಿಗೆ ಕಾನೂನಿನ ಅರಿವು ಮೂಡಿಸುವ ಕೆಲಸಗಳನ್ನು ಕಾನೂನು ವಿದ್ಯಾರ್ಥಿಗಳು ಮಾಡಬೇಕು ಎಂದು ಡಾ.ರೇವಣಸಿದ್ದ ಶಿವಾಚಾರ್ಯರು ಕರೆ ನೀಡಿದರು.
ಇದೇ ವೇಳೆ ಮಾತನಾಡಿದ ಎನ್.ಎಸ್.ಎಸ್ ಅಧಿಕಾರಿ ಡಾ. ಜ್ಯೋತಿ ಕಡಾದಿ, ಎನ್.ಎಸ್.ಎಸ್ ಸೇರುವ ವಿದ್ಯಾರ್ಥಿಗಳು ಸೇವಾ ಮನೋಭಾವಕ್ಕೆ ತಯಾರಾಗಿರುತ್ತಾರೆ ಎಂಬುದನ್ನು ನಮ್ಮ ವಿದ್ಯಾರ್ಥಿಗಳು ಸಾಬೀತು ಮಾಡಿದ್ದಾರೆ. ಅವರು ಸರಡಗಿ ಗ್ರಾಮದಲ್ಲಿ ಸ್ವಚ್ಚತೆ ನಡೆಸಿ, ತಗ್ಗು ತೆಗೆದು ಸಸಿ ನಾಟಿ ಮಾಡಿದ್ದಾರೆ. ಕಾನೂನು ವಿದ್ಯಾರ್ಥಿಗಳು ಸಮಾಜ ಸೇವೆಗೂ ತಯಾರಾಗಿರುತ್ತೇವೆ ಎಂದು ನಮ್ಮ ವಿದ್ಯಾರ್ಥಿಗಳು ಸಾಬೀತು ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ಗೀತಾಶ್ರೀ ಪ್ರಾರ್ಥಿಸಿದರೆ, ಭಾಗ್ಯಶ್ರೀ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಅಮರೇಶ್ ನಿರೂಪಿಸಿದರೆ, ಆಶೀಸ್ ಕುಮಾರ್ ವಂದಿಸಿದರು. ಗ್ರಾಮದ ಹಿರಿಯರಾದ ಸಂಗಯ್ಯಸ್ವಾಮಿ ಹಿರೇಮಠ, ಶರಣಗೌಡ ಬಿರಾದಾರ, ಎನ್.ಎಸ್.ಎಸ್ ಕ್ಯಾಂಪ್ ಅಧಿಕಾರಿ ಜ್ಯೋತಿ ಕಡಾದಿ, ಕರುಣಾ ಪಾಟೀಲ್ ಸೇರಿದಂತೆ ಎನ್.ಎಸ್.ಎಸ್ ಅಧಿಕಾರಿಗಳು, ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.