ಕಲಬುರಗಿ: ಶೋಷಿತ ಸಮುದಾಯಗಳ ನಾಯಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೇಜೋವಧೆ ಖಂಡಿಸಿ ಹಾಗೂ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿರುವ ರಾಜ್ಯಪಾಲರ ನಡೆಯನ್ನು ಖಂಡಿಸಿ ಜಿಲ್ಲಾ ಕುರುಬರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಮೂಲಕ ರಾಜ್ಯದ ಘನವೆತ್ತ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಹಾಗೂ ಆಳಂದ ಶಾಸಕ ಬಿ.ಆರ್.ಪಾಟೀಲ್, ಗೌರವಯುತ ಸ್ಥಾನದಲ್ಲಿ ಇರುವ ರಾಜ್ಯಪಾಲರು ಅರ್ಜಿ ನೀಡಿದವರ ಹಿನ್ನೆಲೆ ತಿಳಿದುಕೊಳ್ಳಬೇಕು.
ಕರ್ನಾಟಕ ಇತಿಹಾಸದಲ್ಲಿ ಮುಖ್ಯಮಂತ್ರಿಗಳಾಗಿ ಐದು ವರ್ಷ ಅವಧಿ ಪೂರೈಸಿದ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯ. ನಾಯುಕನ ತೇಜೋವಧೆ ಮಾಡಿ, ಅಧಿಕಾರದಿಂದ ಕೆಳಗಿಳಿಸಲು ಹುನ್ನಾರ ನಡೆಸುತ್ತಿರುವ ಕೇಂದ್ರ ಸರ್ಕಾರ ಹಾಗೂ ಇಲ್ಲಿನ ಬಿಜೆಪಿ ನಾಯಕರು ಹತಾಶೆಗೊಂಡಿದ್ದಾರೆ ಎಂದರು.
ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಜಂಟಿಯಾಗಿ ನಡೆಸುತ್ತಿರುವ ಪಾದಯಾತ್ರೆ ಪಾಪದ ಪಾದಯಾತ್ರೆಯಾಗಿದ್ದು, ರಾಜಕೀಯ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ನಾಯಕತ್ವ ಗಟ್ಟಿಗೊಳಿಸುವ ಸಲುವಾಗಿ ನಾವೆಲ್ಲರೂ ಅವರ ಬೆನ್ನಿಗೆ ನಿಲ್ಲೋಣ ಎಂದು ಹೇಳಿದ ಅವರು, ಸಿದ್ದರಾಮಯ್ಯ ಅವರ ಬೆನ್ನ ಹಿಂದೆ ೧೩೬ ಶಾಸಕರ ಶಕ್ತಿಯಿದೆ ಎಂದು ಹೇಳಿದರು.
ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಂಟಕ ತರುವ ಕೆಲಸ ನಡೆಯುತ್ತಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಕಣ್ಣೀರು ಒರೆಸುವ ಕೆಲಸ ಸಿದ್ದರಾಮಯ್ಯ ಮಾಡುತ್ತಿದ್ದು,ರಾಜ್ಯದಲ್ಲಿನ ಎಲ್ಲಾ ವರ್ಗದ ಜನರಿಗೆ ಸವಲತ್ತುಗಳನ್ನು ನೀಡಿದ ಏಕೈಕ ನಾಯಕ ಸಿದ್ದರಾಮಯ್ಯ. ಏನಾದರೂ ಹುನ್ನಾರ ಮಾಡಿ, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಕುತಂತ್ರ ಸಫಲವಾಗದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಗುರುನಾಥ ಎಸ್ ಪೂಜಾರಿ, ಕಾರ್ಯಾಧ್ಯಕ್ಷ ಸಾಯಬಣ್ಣಾ ಪೂಜಾರಿ,ಕೂಲಿ ಸಮಾಜದ ಮುಖಂಡ ಲಚ್ಚಪ್ಪಾ ಜಮಾದಾರ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ತಾರಫೈಲ್, ಹುಲಿಗೆಪ್ಪಾ ಕನಕಗಿರಿ ಮಾತನಾಡಿದರು. ಕೋಶಾಧ್ಯಕ್ಷ ರವಿಗೊಂಡ ಕಟ್ಟಿಮನಿ, ಮಲ್ಲಿಕಾರ್ಜುನ ಮರಬೂಳ, ರೇಣುಕಾ ಸಿಂಗೆ, ಭಗವಂತರಾಯ್, ಸುನಿಲ್ ಮಾನ್ಪಡೆ, ರಾಜೇಶ್ ಗುತ್ತೇದಾರ್ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ.ರಾಜ್ಯದ ಜನರ ಆಶೀರ್ವಾದ ಸಿದ್ದರಾಮಯ್ಯ ಅವರ ಮೇಲಿರುವ ತನಕ ಯಾರು ಸಹ ಏನೂ ಮಾಡಲು ಸಾಧ್ಯವಿಲ್ಲ. ರಾಜ್ಯದ ಎಲ್ಲಾ ವರ್ಗದ ಜನರು ಸಿದ್ದರಾಮಯ್ಯ ಅವರ ಪರವಾಗಿ ಇದ್ದಾರೆ ಎಂಬುದು ಬಿಜೆಪಿಯವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಇದೇ ರೀತಿ ಮುಂದುವರಿದರೆ ರಾಜ್ಯದಲ್ಲಿ ದಂಗೆ ಏಳಲಿದೆ. -ಗುರುನಾಥ ಪೂಜಾರಿ, ಜಿಲ್ಲಾಧ್ಯಕ್ಷ, ಜಿಲ್ಲಾ ಕುರುಬರ ಸಂಘ, ಕಲಬುರಗಿ