ರಾಯಚೂರು: ಕಲ್ಯಾಣ ಕರ್ನಾಟಕದ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಕ್ರಿಯಾ ಯೋಜನೆ ರಚಿಸಲು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್‌ಎಫ್‌ಐ) ರಾಯಚೂರು ಜಿಲ್ಲಾ ಸಮಿತಿ ಪ್ರತಿಭಟನೆ ನಡೆಸಿತ್ತು.
ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಎಸ್‌ಎಫ್‌ಐ ಕಾರ್ಯಕರ್ತರು, ನಂತರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಕಲ್ಯಾಣ ಕರ್ನಾಟಕ (ಹೈದ್ರಾಬಾದ್ ಕರ್ನಾಟಕ) ಅಭಿವೃದ್ಧಿಗಾಗಿ 371(ಜೆ) ಕಲಂ ಜಾರಿ ಮಾಡಲಾಗಿದೆ. ಈ ಭಾಗದ ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಅಭಿವೃದ್ಧಿಗಾಗಿ ಕಲ್ಯಾಣ (ಹೈದ್ರಾಬಾದ್) ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ರಚಿಸಲಾಗಿದೆ. ಗ್ರಾಮೀಣ ಪ್ರದೇಶದ ರಸ್ತೆಗಳು ಆರೋಗ್ಯ, ಶಿಕ್ಷಣ, ಮೂಲಸೌಕರ್ಯಗಳ ಅನುಷ್ಟಾನ ಈ ಮಂಡಳಿಯ ಪ್ರಮುಖ ಕೆಲಸ. 6 ಜಿಲ್ಲೆಗಳ ಅಭಿವೃದ್ಧಿಗಾಗಿ ಕೋಟಿ, ಕೋಟಿ ರೂ. ಹಣ ಬಿಡುಗಡೆಯಾಗುತ್ತಲಿದೆ. ಆದರೆ ಅದು ಸರಿಯಾಗಿ ಬಳಕೆಯಾಗುತ್ತಿಲ್ಲ. ಇದರಲ್ಲಿ ಈ ೬ ಜಿಲ್ಲೆಗಳ ಜನಪ್ರತಿನಿಧಿಗಳ ಅಸಡ್ಡೆ ಎದ್ದು ಕಾಣುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ಮಂಡಳಿ ರಚನೆಯಾಗಿ 6 ವರ್ಷ ಕಳದಿದೆ. ಇಲ್ಲಿನ ಅಸಮಾನತೆ ಇನ್ನೂ ಜೀವಂತವಿದೆ. ರಸ್ತೆಗಳು ಇನ್ನೂ ಸುಧಾರಣೆಯಾಗಿಲ್ಲ, ಶಾಲಾ–ಕಾಲೇಜುಗಳ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಹಾಸ್ಟೆಲ್‌ಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ೬,೭೩೦ ಹುದ್ದೆಗಳು ಖಾಲಿ ಇವೆ. ಕಾಲೇಜುಗಳಲ್ಲಿ 1,000ಕ್ಕೂ ಹೆಚ್ಚು ಹುದ್ದಗಳು ಖಾಲಿ ಇವೆ.ಕೇಂದ್ರೀಯ ವಿವಿ ಸೇರಿ 6 ವಿಶ್ವವಿದ್ಯಾಲಯಗಳಿದ್ದು, ಅವುಗಳಲ್ಲಿ ಬಹಳ ವರ್ಷಗಳಿಂದ ನೇಮಕಾತಿಯೇ ನಡೆದಿಲ್ಲ ಎಂದು ಆಕ್ರೊಶ ವ್ಯಕ್ತಪಡಿಸಿದರು.
ಪ್ರತೀ ಬಾರಿಯೂ ಕ್ರಿಯಾ ಯೋಜನೆ ರಚನೆ ವಿಳಂಬವಾಗುತ್ತದೆ, ಇಲ್ಲವೆ ಜಾರಿಗೆ ಆಸಕ್ತಿ ತೊರುವುದೇ ಇಲ್ಲ. ಹಾಗಾಗಿ ಬಂದ ಅನುದಾನ ಉಳಿದು ಸರಕಾರಕ್ಕೆ ವಾಪಸ್ಸಾಗುತ್ತಿದೆ. ಈ ಬಾರಿ ಕ್ರಿಯಾ ಯೊಜನೆ ರಚಿಸುವಾಗ ಈ ಭಾಗದ ಸರಕಾರಿ ಶಾಲಾ- ಕಾಲೇಜುಗಳಿಗೆ ಮೂಲಸೌಕರ್ಯ ನೀಡಬೇಕು. ಪ್ರತೀ ಜಿಲ್ಲೆಗೆ ಆಯ್ದ ಶಾಲಾ–ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಸ್ಮಾರ್ಟ್ ತರಗತಿಗಳನ್ನು ನಡೆಸಬೇಕು. ಅದಕ್ಕಾಗಿ ಎಲ್‌ಇಡಿ ಪ್ರೊಜೆಕ್ಟರ್ ವಿತರಿಸಬೇಕು.
ಈ ಭಾಗದಲ್ಲಿರುವ ಸಮಾಜಕಲ್ಯಾಣ ಮತ್ತು ಬಿಸಿಎಂ, ಅಲ್ಪಸಂಖ್ಯಾತ ಇಲಾಖೆಯ ವ್ಯಾಪ್ತಿಯಲ್ಲಿ ನಡೆಯುವ ಹಾಸ್ಟೆಲ್‌ಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಎಲ್ಲಾ ಹಾಸ್ಟೆಲ್‌ಗಳಿಗೆ ಸ್ವಂತ ಕಟ್ಟಡ ನೀಡಬೇಕು. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮಾಸಿಕವಾಗಿ 3500 ರೂ. ಆಹಾರ ಭತ್ಯೆ ನೀಡಬೇಕು. ಹಾಸ್ಟೆಲ್‌ಗಳಲ್ಲಿ ಗ್ರಂಥಾಲಯ ಸೌಲಭ್ಯ ನೀಡಬೇಕು.
ಶಾಲಾ–ಕಾಲೇಜುಗಳ ಗ್ರಂಥಾಲಯಗಳನ್ನು ಬಲಪಡಿಸಬೇಕು. ಹಾಗೂ ಸಮರ್ಪಕವಾಗಿ, ಅಗತ್ಯವಾಗಿರುವ ಪುಸ್ತಕಗಳನ್ನು ವಿತರಿಸಬೇಕು. ವಿದ್ಯಾರ್ಥಿಗಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ರಕ್ತಹೀನತೆಯಂತೆ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಹಾಗಾಗಿ ಈ ಭಾಗದ ಶಾಲಾ– ಕಾಲೇಜುಗಳಲ್ಲಿ ಮೊಟ್ಟೆ, ಬಾಳೆ ಹಣ್ಣು ವಿತರಣೆ ಮಾಡಬೇಕು.
ಈ ಅನುದಾನದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಬೇಕು. ಮಂಡಳಿಯ ಅನುದಾನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಾದ ಐಎಎಸ್, ಕೆಎಎಸ್, ಪಿಡಿಒ, ಪೊಲೀಸ್, ಬ್ಯಾಂಕಿಂಗ್ ಇನ್ನಿತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಹಾಕಿದ ಅಭ್ಯರ್ಥಿಗಳಿಗೆ ತರಬೇತಿ (ಕೋಚಿಂಗ್) ಪಡೆಯಲು ಆರ್ಥಿಕ ಸಹಾಯ ಮಾಡಬೇಕು.
ಇದೇ ಅನುದಾನದಲ್ಲಿ ಹಾಸ್ಟೆಲ್ ವಂಚಿತ ವಿದ್ಯಾರ್ಥಿಗಳಿಗೆ ಕೊಠಡಿ– ಆಹಾರ ಭತ್ಯೆಯಾಗಿ 2,000 ರೂ. ಮಾಸಿಕ ಭತ್ಯೆ ನೀಡಬೇಕು. ಬಿ.ಎಡ್, ಎಂಜನೀಯರಿಂಗ್, ಮೆಡಿಕಲ್, ಎಲ್‌ಎಲ್‌ಬಿ, ಐಟಿಐ ಇನ್ನಿತರ ವೃತ್ತಿಪರ ಕೋರ್ಸ್ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ 20,000 ರೂ. ಪ್ರೋತ್ಸಾಹ ಧನ ನೀಡಬೇಕು.
ಖಾಲಿ ಇರುವ ಈ ಭಾಗದ ಎಲ್ಲಾ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ರೈತರಿಗೆ, ಕೂಲಿಕಾರರಿಗೆ, ಸ್ವಯಂ ಉದ್ಯೋಗಸ್ಥರಿಗೆ, ಮಹಿಳೆಯರಿಗೆ ಆರ್ಥಿಕವಾಗಿ ಸಬಲರಾಗಲು ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ರಾಯಚೂರು ಜಿಲ್ಲಾ ಸಮಿತಿ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಶಿವಕುಮಾರ್ ಮ್ಯಾಗಳಮನಿ, ಜಿಲ್ಲಾ ಕಾರ್ಯದರ್ಶಿ ರಮೇಶ್ ವೀರಾಪೂರ, ಜಿಲ್ಲಾ ಉಪಾಧ್ಯಕ್ಷ ಲಿಂಗರಾಜ್ ಕಂದಗಲ್, ಡಿವೈಎಫ್ಐ ಮುಖಂಡ ಶಿವಪ್ಪ ಬ್ಯಾಗವಾಟ್, ಮುಖಂಡರಾದ ದಿಲ್‌ಶಾದ್, ರಾಜೇಶ್ವರಿ, ರಶಿದಾ, ಹಜರತ್ ಬೇಗಂ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.