ಪ್ರಧಾನಿ ಮೋದಿಗೆ ಪತ್ರ ಬರೆದ 50 ಜನ ಗಣ್ಯರ ವಿರುದ್ಧ ಪ್ರಕರಣ: ಗಾಂಧಿ ಪ್ರತಿಮೆ ಬಳಿ ಪ್ರಗತಿಪರರ ಪ್ರತಿಭಟನೆ

0
108

ಕಲಬುರಗಿ: ದೇಶದಲ್ಲಿ ಹೆಚ್ಚುತ್ತಿರುವ ಸಾಮೂಹಿಕ ಹಲ್ಲೆ ಹಾಗೂ ಅಮಾನವೀಯ ಘಟನೆಗಳನ್ನು ತಡೆಯುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದ ಐವತ್ತು ಜನ ಗಣ್ಯರ ವಿರುದ್ಧ ಪ್ರಕರಣ ದಾಖಲಿಸಿದ್ದನ್ನು ಖಂಡಿಸಿ ಭಾನುವಾರ ನಗರದ ಸಾರ್ವಜನಿಕ ಉದ್ಯಾನವನದಲ್ಲಿನ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಪ್ರತಿಮೆಯ ಬಳಿ ಪ್ರಗತಿಪರರು ಮೌನ ಪ್ರತಿಭಟನೆ ನಡೆಸಿದರು.

ಪ್ರಗತಿಪರ ಚಿಂತಕರಾದ ಕಾಶೀನಾಥ್ ಅಂಬಲಗಿ, ಕೆ. ನೀಲಾ, ಅರ್ಜುನ್ ಬಡಿಗೇರ್, ಮಾರುತಿ ಗೋಖಲೆ, ಅಶ್ವಿನಿ ಮದನಕರ್, ದತ್ತಾತ್ರೇಯ್ ಇಕ್ಕಳಕಿ, ಮಹೇಶ್ ರಾಠೋಡ್. ಭೀಮಾಶಂಕರ್ ಮಾಡ್ಯಾಳ್, ಮೌಲಾ ಮುಲ್ಲಾ, ಅರ್ಜುನ್ ಭದ್ರೆ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Contact Your\'s Advertisement; 9902492681

ಗೋರಕ್ಷಣೆಯ ಹೆಸರಿನಲ್ಲಿ ಸಾಮೂಹಿಕ ಹಲ್ಲೆಗಳನ್ನು ನಡೆಸಲಾಗುತ್ತಿದೆ. ಲವ್ ಜಿಹಾದ್ ಹೆಸರಿನಲ್ಲಿ ನೈತಿಕ ಪೋಲಿಸ್‌ಗಿರಿ ನಡೆಸಲಾಗುತ್ತಿದೆ. ಇಂತಹ ಅಮಾನವೀಯ ಘಟನೆಗಳನ್ನು ಖಂಡಿಸಿ, ಅವುಗಳನ್ನು ತಡೆಯಲು ಆಗ್ರಹಿಸಿ ಇತಿಹಾಸ ತಜ್ಞ ರಾಮಚಂದ್ರ ಗುಹಾ, ಖ್ಯಾತ ನಿರ್ದೇಶಕ ಮಣಿರತ್ನಂ, ಅನುರಾಗ್ ಕಶ್ಯಪ್, ಅಪರ್ಣಾ ಸೇನ್ ಸೇರಿದಂತೆ ಖ್ಯಾತ ನಟ, ನಟಿಯರನ್ನು ಒಳಗೊಂಡು ಐವತ್ತು ಜನ ಗಣ್ಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಆ ಕುರಿತು ಕ್ರಮ ಕೈಗೊಳ್ಳದೇ, ಪತ್ರ ಬರೆದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಮುಂದಾಗಿರುವುದ ಸರ್ವಾಧಿಕಾರದ ಪ್ರತೀಕ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ಆಗುತ್ತಿರುವ ಅಸಹಿಷ್ಣುತೆಯನ್ನು ತಡೆಯಲು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಮ್ಮ ಸಂವಿಧಾನ ಕೊಟ್ಟಿದೆ. ಹಿಂಸಾತ್ಮಕ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿರುವುದರಿಂದ ನಿಯಂತ್ರಿಸಲು ಗಣ್ಯರು ಪ್ರಧಾನಿಗೆ ಪತ್ರ ಬರೆದಿದ್ದು ತಪ್ಪೇನಿಲ್ಲ. ಆದಾಗ್ಯೂ, ಅವರ ವಿರುದ್ಧವೇ ಪ್ರಕರಣ ದಾಖಲಿಸುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಯಂತ್ರಿಸಲಾಗುತ್ತಿದೆ ಎಂದು ಅವರು ಕೇಂದ್ರದ ವಿರುದ್ಧ ಅವರು ಕಿಡಿಕಾರಿದರು.

ಭಾರತವು ಶಾಂತಿ ಮತ್ತು ಸೌಹಾರ್ದತೆಗೆ ಇಡೀ ಜಗತ್ತಿನಲ್ಲಿಯೇ ಹೆಸರುವಾಸಿಯಾಗಿದೆ. ಬಹುತ್ವ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು. ಆಡಳಿತ ನಡೆಸುತ್ತಿರುವ ಸರ್ಕಾರವಂತೂ ಪ್ರಜಾಪ್ರಭುತ್ವದ ಸಂರಕ್ಷಣೆಗೆ ಮುಂದಾಗಬೇಕು. ಆದಾಗ್ಯೂ, ಪ್ರಜಾಪ್ರಭುತ್ವದ ಕುರಿತು ಧ್ವನಿ ಎತ್ತಿದವರನ್ನೇ ಹತ್ಯೆ ಮಾಡಲಾಗುತ್ತಿದೆ. ಈಗಾಗಲೇ ಡಾ. ದಾಬೋಲ್ಕರ್, ಡಾ. ಎಂ.ಎಂ. ಕಲಬುರ್ಗಿ, ಪನಸಾರೆ, ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಲಾಗಿದೆ. ಇಂತಹ ಅಮಾನವೀಯ ಹಿಂಸೆಗಳನ್ನು ನಿಲ್ಲಿಸಿ ಎಂದು ಪತ್ರ ಬರೆದರೆ ಅದು ದೇಶದ್ರೋಹವೇ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಕೂಡಲೇ ಪ್ರಕರಣವನ್ನು ಬೇಶರತ್ತಾಗಿ ಹಿಂಪಡೆಯಬೇಕು ಹಾಗೂ ದೇಶದಲ್ಲಿನ ಗುಂಪು ಹತ್ಯೆ, ಗೋರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆಯನ್ನು ತಡೆಯಬೇಕು ಎಂದು ಅವರು ಒತ್ತಾಯಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here