ವೈದ್ಯೆಯ ಮೇಲಿನ ಅತ್ಯಾಚಾರ – ಕೊಲೆ ಖಂಡಿಸಿ ಎಐಡಿವೈಒ ಪ್ರತಿಭಟನೆ

0
34

ಶಹಾಬಾದ: ಕೊಲ್ಕತ್ತಾದ ಸರ್ಕಾರಿ ಆರ್. ಜಿ. ಕರ್ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವೈಧ್ಯೆಯ ಮೇಲಿನ ಅತ್ಯಾಚಾರ ಕೊಲೆ ಹಾಗೂ ಪ್ರತಿಭಟನಾಕಾರರ ಮೇಲಿನ ದಾಳಿಯ ಕುರಿತು ತುರ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಎಐಡಿವೈಒ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಎಐಡಿವೈಒ ಜಿಲ್ಲಾಧ್ಯಕ್ಷ ಜಗನ್ನಾಥ ಎಸ್.ಹೆಚ್ ಹಾಗೂ ಗುಂಡಮ್ಮ ಮಡಿವಾಳ ಮಾತನಾಡಿ, ಕೊಲ್ಕತ್ತಾದ ಸರ್ಕಾರಿ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತರಬೇತಿ ನಿರತ ಮಹಿಳಾ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಹತ್ಯೆಯ ಘಟನೆಯು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ಪೈಶಾಚಿಕ ಅತ್ಯಾಚಾರ, ಕೊಲೆ ಹಾಗೂ ಪ್ರತಿಭಟನಾಕಾರರ ಮೇಲಿನ ದಾಳಿಯನ್ನು ಎಐಡಿವೈಒ) ಶಹಾಬಾದ್ ಸ್ಥಳೀಯ ಸಮಿತಿಯು ಅತ್ಯುಗ್ರವಾಗಿ ಖಂಡಿಸುತ್ತದೆ.

Contact Your\'s Advertisement; 9902492681

ಆಗಸ್ಟ್ 8ರಂದು ರಾತ್ರಿ ಪಾಳಿಯಲ್ಲಿ ಕೆಲಸದಲ್ಲಿದ್ದ 32 ವರ್ಷದ ಟ್ರೈನಿ ವೈದ್ಯೆಯ ಮೃತ ದೇಹವು ಶುಕ್ರವಾರ ಬೆಳಗ್ಗೆ ಕಾಲೇಜಿನ ಮೂರನೇ ಮಹಡಿಯ ಸೆಮಿನಾರ್ ಹಾಲಿನಲ್ಲಿ ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುತ್ತಿಗೆ ಮೂಳೆ ಮುರಿದು, ಕಣ್ಣು, ಬಾಯಿ, ಖಾಸಗಿ ಅಂಗದಲ್ಲೂ ರಕ್ತಸ್ರಾವ ಆಗುವಷ್ಟು ಭೀಕರವಾದ ಲೈಂಗಿಕ ದೌರ್ಜನ್ಯ ನಡೆದಿರುವ ಕುರಿತು ವರದಿಯಾಗಿದೆ. ಇದು ದೇಶದ ನಾಗರಿಕರಲ್ಲಿ ತೀವ್ರವಾದ ಆತಂಕ, ಗಾಬರಿ ಮತ್ತು ಆಘಾತವನ್ನು ಉಂಟು ಮಾಡಿದೆ. ಜನರ ಜೀವವನ್ನು ರಕ್ಷಿಸಬೇಕಾದ ವೈದ್ಯರಿಗೇ ರಕ್ಷಣೆ ಇಲ್ಲದಂತಾಗಿರುವುದು ಅತ್ಯಂತ ಹೇಯ ಕೃತ್ಯವಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ಸಂತ್ರಸ್ತೆಗೆ ತ್ವರಿತ ನ್ಯಾಯಕ್ಕಾಗಿ ಒತ್ತಾಯಿಸಿ ಕಿರಿಯ ವೈದ್ಯರು ಕೆಲಸವನ್ನು ನಿಲ್ಲಿಸಿ, ಪ್ರತಿಭಟನೆಗಳನ್ನು ಆಯೋಜಿಸುತ್ತಿರುವುದು ನಿರೀಕ್ಷಿತ ಮತ್ತು ನ್ಯಾಯಸಮ್ಮತವಾಗಿದೆ. ಅಲ್ಲದೆ ದೇಶದಾದ್ಯಂತ ಜನರು ಈ ಘಟನೆಯನ್ನು ಖಂಡಿಸಿ ಹಾಗೂ ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅಪರಾಧಗಳ ವಿರುದ್ಧ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಕೆಲಸದ ಸ್ಥಳಗಳಲ್ಲಿ ಮಹಿಳೆಯ ಸುರಕ್ಷತೆಯ ಬಗ್ಗೆ ಜನರು ಚರ್ಚಿಸುವಂತಾಗಿದೆ.

ವೈದ್ಯೆ ವಿದ್ಯಾರ್ಥಿನಿಯ ಮೇಲಾದ ಕೃತ್ಯದ ವಿರುದ್ಧ ನ್ಯಾಯಕ್ಕಾಗಿ ಪ್ರತಿಭಟಿಸುತ್ತಿದ್ದವರ ಮೇಲೆ ಏಕಾಏಕಿ ಸಮಾಜಘಾತುಕ ಶಕ್ತಿಗಳು ದಾಳಿ ಮಾಡಿದ್ದಾರೆ. ಸಾಕ್ಷ್ಯವನ್ನು ನಾಶಪಡಿಸುವ ಮತ್ತು ತನಿಖೆಗೆ ಅಡ್ಡಿಪಡಿಸುವ ಉದ್ದೇಶದಿಂದ ಮತ್ತು ಪ್ರತಿಭಟನಾಕಾರರ ಮನಸ್ಸಿನಲ್ಲಿ ಭಯದ ಭಾವನೆಯನ್ನು ಹುಟ್ಟಿಸಲು 14 ಆಗಸ್ಟ್ 2024 ರಂದು ಮಧ್ಯರಾತ್ರಿ ಆರ್ ಜಿ ಕರ್ ವೈದ್ಯಕೀಯ ಕಾಲೇಜಿಗೆ ನುಗ್ಗಿ ಪ್ರತಿಭಟನೆಯ ಸ್ಥಳವನ್ನು ಧ್ವಂಸಗೊಳಿಸಿದ್ದಾರೆ. ಈ ಕೃತ್ಯ ಎಸಗಿರುವ ಅಪರಾಧಿಗಳನ್ನು ರಕ್ಷಿಸಲು ಗೂಂಡಾಗಳು ನಡೆಸಿರುವ ಈ ಉದ್ದೇಶಪೂರ್ವಕ ಮತ್ತು ವ್ಯವಸ್ಥಿತ ದಾಳಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ.

ಆಸ್ಪತ್ರೆಯ ಅಧಿಕಾರಿಗಳು ಸಹ ಈ ಘಟನೆಗೆ ತಕ್ಷಣ ಪ್ರತಿಕ್ರಿಯಿಸಿಲ್ಲ, ಬದಲಾಗಿ ಅಪರಾಧಿಗಳೊಂದಿಗೆ ಶಾಮೀಲಾಗಿದ್ದು ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವಂತೆ ಕಾಣುತ್ತಿದೆ.ಗೂಂಡಾಗಳ ಇಂತಹ ಕೃತ್ಯಗಳು ಅಪರಾಧ ಎಸಗಿದವರಿಗೆ ಮಾತ್ರ ಸಹಾಯ ಮಾಡುತ್ತವೆ ಮತ್ತು ನಿಜವಾದ ಪ್ರತಿಭಟನಾಕಾರರನ್ನು ಸಮಾಜ ವಿರೋಧಿಗಳೆಂದು ಬಿಂಬಿಸುವ ಮತ್ತು ಚಳವಳಿಯನ್ನು ಹತ್ತಿಕ್ಕುವ ಕೈಗಳನ್ನು ಬಲಪಡಿಸುತ್ತವೆ. ಆದ್ದರಿಂದ ತಾವು ಈ ಕುರಿತು ಕೂಡಲೆ ಮಧ್ಯೆ ಪ್ರವೇಶಿಸಿ ಸಂತ್ರಸ್ತೆಗೆ ನ್ಯಾಯ ಸಿಗುವಂತಾಗಲು ತುರ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸ್ಥಳೀಯ ಅಧ್ಯಕ್ಷ ರಘು ಪವಾರ್, ಕಾರ್ಯದರ್ಶಿ ರಮೇಶ್ ದೇವಕರ್ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here