ಸುರಪುರ: ಸಗರ ನಾಡಿನ ಆರಾಧ್ಯ ದೈವ ಎನಿಸಿರುವ ಸುರಪುರದ ಐತಿಹಾಸಿಕ ದೇವಸ್ಥಾನ ಶ್ರೀ ವೇಣುಗೋಪಾಲ ಸ್ವಾಮಿಯ ಹಾಲೋಕಳಿ ಜಾತ್ರೆ ಅದ್ದೂರಿಯಾಗಿ ಜರಗಿತು. ಜಾತ್ರೆಯ ಅಂಗವಾಗಿ ಬೆಳಿಗ್ಗೆ ಶ್ರೀ ವೇಣುಗೋಪಾಲ ಸ್ವಾಮಿಯ ಮೂರ್ತಿಗೆ ವಿಶೇಷ ಪೂಜಾ ಅಲಂಕಾರ ಅಭಿಷೇಕ ನೈವೇದ್ಯ ಅರ್ಪಣೆ ಇತ್ಯಾದಿ ಪೂಜಾ ಕೈಂಕರ್ಯಗಳು ಜರುಗಿದವು.
ಮಧ್ಯಾಹ್ನದ ವೇಳೆಗೆ ಸುರಪುರದ ಅರಸು ಮನೆತನದ ವತಿಯಿಂದ ತಿರುಪತಿಯ ವೆಂಕಟೇಶ್ವರನಿಗೆ ಮುಡುಪು ಸಲ್ಲಿಸುವ ಕಾರ್ಯಕ್ರಮವನ್ನು ನಡೆಸಲಾಗಿದೆ. ಈ ಸಂದರ್ಭದಲ್ಲಿ ರಾಜಾ ಕೃಷ್ಣಪ್ಪ ನಾಯಕ ಅವರು ಮುಡುಪು ತಲೆಯ ಮೇಲೆ ಹೊತ್ತು ದರ್ಬಾರದಿಂದ ಹೊರಬಂದು ತಮ್ಮ ಪ್ರತಿನಿಧಿಯ ಮೂಲಕ ತಿರುಪತಿಗೆ ಕಳುಹಿಸುವ ಕಾರ್ಯಕ್ರಮ ನಡೆಯಿತು ಈ ಸಂದರ್ಭದಲ್ಲಿ ರಾಜಾ ಸೀತಾರಾಮ್ ನಾಯಕ, ರಾಜಾ ಶ್ರೀನಿವಾಸ ನಾಯಕ ಸೇರಿದಂತೆ ರಾಜಾ ಕೃಷ್ಣಪ್ಪ ನಾಯಕ ಅವರ ಸಹೋದರರು ಪರಿವಾರ ಹಾಗೂ ವತನದಾರರು ಕೂಡ ಭಾಗವಹಿಸಿದ್ದರು.
ಸಂಜೆ ನಡೆದ ದೇವರ ಸ್ತಂಭಾರೋಹಣ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಭಕ್ತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನ ಆವರಣದಲ್ಲಿ ನಡೆದ ಸ್ತಂಭಾರೋಹಣದಲ್ಲಿ ಸತ್ಯಂಪೇಟೆಯ ಗ್ರಾಮಸ್ಥರಿಂದ ಮೊದಲ ಸ್ತಂಭಾರೋಹಣ ನೆರವೇರಿತು.
ಆನಂತರ ಶ್ರೀ ವೇಣುಗೋಪಾಲ ಸ್ವಾಮಿಯ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಪಲ್ಲಕ್ಕಿಯಲ್ಲಿ ಮೆರವಣಿಗೆಯನ್ನು ನಡೆಸಲಾಯಿತು. ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ನಗರದ ಕಬಾಡಗೇರಾದಲ್ಲಿನ ಕಾಳಿಕಾದೇವಿ ದೇವಸ್ಥಾನದವರೆಗೂ ನಡೆಸಿ ನಂತರ ಮರಳಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಬಂದು ತಲುಪಿತು. ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಭಕ್ತಾದಿಗಳು ಭಜನೆ, ಬಾಜಾ ಭಜಂತ್ರಿ ಯೊಂದಿಗೆ ಜನರ ಹರ್ಷೋದ್ಗಾರದ ಮಧ್ಯೆ ಅದ್ದೂರಿ ಮೆರವಣಿಗೆ ನಡೆಯಿತು. ಕಾರ್ಯಕ್ರಮದಲ್ಲಿ ದೇವಸ್ಥಾನದ ಅರ್ಚಕರು ಸಂಸ್ಥಾನದ ರಾಜ ಗುರುಗಳು ಹಾಗೂ ವತನದಾರರು ಸೇರಿದಂತೆ ಸಾವಿರಾರು ಜನ ಭಕ್ತರು ಭಾಗವಹಿಸಿದ್ದರು.
ಶ್ರೀ ವೇಣುಗೋಪಾಲ ಸ್ವಾಮಿಯ ಹಾಲೋಕಳಿ ಜಾತ್ರೆ ನಾಡಿನಲ್ಲಿಯೇ ವಿಶೇಷವಾಗಿದ್ದು ಜಾತ್ರೆಯಲ್ಲಿ ಭಾಗವಹಿಸಿದವರು ಹಾಲಿನ ಓಕಳಿಯನ್ನ ಆಡುತ್ತಿದ್ದ ಪರಂಪರೆ ನಡೆದುಕೊಂಡು ಬಂದು ಈಗಲೂ ಮುಂದುವರೆದು ಪವಿತ್ರ ಗಂಗಾಜಲದ ತಿತಿ ಆಡುವ ಮೂಲಕ ವಿಶೇಷವಾಗಿ ಆಚರಿಸಲಾಗುತ್ತದೆ.