ಕಲಬುರಗಿ: ಜ್ಞಾನ ದೇಗುಲದ ಸಾರಥಿ, ಅಕ್ಷರ ಲೋಕದ ಗುರುಮೂರ್ತಿ ಎಂದೇ ಖ್ಯಾತರಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆದರ್ಶಗಳನ್ನು ಶಿಕ್ಷಕರು ಮೈಗೂಡಿಸಿಕೊಂಡರೆ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣವನ್ನು ನೀಡಬಹುದು ಎಂದು ಶರಣಬಸವ ವಿಶ್ವವಿದ್ಯಾಲಯದ ನಿರ್ದೇಶಕರಾದ ಡಾ. ವಿ. ಡಿ. ಮೈತ್ರಿ ಕರೆ ನೀಡಿದರು.
ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪಾ ಸಭಾಮಂಟಪದಲ್ಲಿಂದು ಆಯೋಜಿಸಿದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು ಭಾರತೀಯ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟ್ಟನ್ನು ನೀಡುವ ಮೂಲಕ, ಶಿಕ್ಷಣ ಕ್ಷೇತ್ರ, ತತ್ವಜ್ಞಾನ, ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್, ಭಾರತೀಯರ ಮನದಲ್ಲಿ ನೆಲೆಸಿದ್ದಾರೆ. ಓರ್ವ ಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದ ಇವರ ಜನ್ಮದಿನವನ್ನು ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ ಹಾಗೂ ಇದು ಶಿಕ್ಷಕರೆಲ್ಲರೂ ಹೆಮ್ಮೆ ಪಡುವಂತಹ ದಿನ ಎಂದು ಹೇಳಿದರು.
ಇಂದಿನ ದಿನಗಳಲ್ಲಿ ಐಐಟಿ, ಐಐಎಮ್‍ನಂತಹ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ನಮ್ಮ ದೇಶದಲ್ಲಿಯೇ ಸಂಶೋಧನೆಗಳತ್ತ ಗಮನ ಹರಿಸದೇ ವಿದೇಶಕ್ಕೆ ಹಾರಿ ಹೋಗುತ್ತಿದ್ದಾರೆ. ಇಂದಿನ ಭಾರತೀಯ ಶಿಕ್ಷಣವು ವಿದೇಶಿಗರಿಗೆ ಹೆಚ್ಚು ಉಪಯೋಗವಾಗುತ್ತಿದೆ. ಶರಣಬಸವ ವಿಶ್ವವಿದ್ಯಾಲಯದಂತಹ ಕೆಲ ವಿಶ್ವವಿದ್ಯಾಲಯಗಳು ಇಂದಿಗೂ ಮೌಲ್ಯಯುತ ಶಿಕ್ಷಣ ನೀಡುತ್ತಾ ಭಾರತ ದೇಶಕ್ಕೆ ಕೊಡುಗೆ ನೀಡುವ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿದ್ದೇವೆ ಎಂದು ಹೆಮ್ಮೆಯಿಂದ ಹೇಳಿದರು.
ರಾಧಾಕೃಷ್ಣನ್ ಅವರು ಉಪರಾಷ್ಟ್ರಪತಿಯಾಗಿ ದೆಹಲಿಗೆ ಹೊರಡುವ ಸಂದರ್ಭದಲ್ಲಿ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು, ಅವರನ್ನು ಕಳುಹಿಸಿ ಕೊಡಲು ಸಾರೋಟನ್ನು ತಂದು ಅಲಂಕರಿಸಿ, ಕುದುರೆಯ ಬದಲು ತಾವೇ ಕುದುರೆಗಳಂತೆ, ಅವರು ಕುಳಿತ ಸಾರೋಟನ್ನು ಪ್ರೀತಿಪೂರ್ವಕವಾಗಿ ರೈಲ್ವೆ ನಿಲ್ದಾಣದವರೆಗೂ ಎಳೆದು ಕೊಂಡು ಹೋಗಿ, ಭಾವಪೂರ್ಣ ವಿದಾಯ ಹೇಳಿದ್ದರು ಎಂದು ತಿಳಿಸಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಂಬಂಧಗಳನ್ನು ಉನ್ನತೀಕರಣಗೊಳಿಸುತ್ತಾ, ದೇಶದೊಳಗಿನ ಆಂತರಿಕ ಕಲಹಗಳಿಗೆ ತಿಲಾಂಜಲಿ ನೀಡುತ್ತಾ, ದೇಶವನ್ನು ಸುಭಿಕ್ಷವಾಗಿಸಿದ ಕೀರ್ತಿ ಡಾ. ರಾಧಾಕೃಷ್ಣನ್ ಅವರಿಗೆ ಸಲ್ಲುತ್ತದೆ. ತಾವೊಬ್ಬ ಉತ್ತಮ ಶಿಕ್ಷಣ ಸುಧಾರಕರೂ ಹೌದು ಎಂಬುದನ್ನು ತಮ್ಮ ಸೇವಾವಧಿಯಲ್ಲಿ ತೋರಿಸಿಕೊಟ್ಟವರು ಡಾ. ರಾಧಾಕೃಷ್ಣನ್ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರಿಗೆ ಹಾಗೂ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಕುಲಸಚಿವ (ಮೌಲ್ಯಮಾಪನ) ಡಾ. ಶಿವದತ್ತ ಹೊನ್ನಳ್ಳಿ, ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಡೀನ್ ಡಾ. ಶಿವುಕುಮಾರ ಜವಳಿಗಿ, ಎಮ್‍ಸಿಎ ವಿಭಾಗದ ಡಾ. ಶ್ರೀಕಾಂತ ಪಾಟೀಲ, ಸಮಾಜ ವಿಜ್ಞಾನ ನಿಕಾಯದ ಡೀನ್ ಟಿ. ವಿ. ಶಿವಾನಂದನ್, ಸಂಗೀತ ವಿಭಾಗದ ಶ್ರೀ ರೇವಯ್ಯ ವಸ್ತ್ರದಮಠ ವೇದಿಕೆ ಮೇಲಿದ್ದರು.