ಸಮಿತಿಗಳ ಕಾರ್ಯ ಪರಾಮರ್ಶಿಸಿದ ಕಲಬುರಗಿ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ

0
36

ಕಲಬುರಗಿ; ಕಲಬುರಗಿಯಲ್ಲಿ ಇದೇ ಸೆ.17 ರಂದು ರಾಜ್ಯ ಸಚಿವ ಸಂಪುಟ ಸಭೆ ನಿಗದಿಯಾಗಿದ್ದರಿಂದ ಸಭೆ ಯಶಸ್ಸಿಗೆ ರಚಿಸಲಾಗಿರುವ ವಿವಿಧ ಸಮಿತಿಗಳ ಕೆಲಸ ಕಾರ್ಯಗಳನ್ನು ಬುಧವಾರ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ಪರಾಮರ್ಶಿಸಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರ ಜೊತೆ ವಿವಿಧ ಸಮಿತಿಗಳ ಅಧಿಕಾರಿಗಳೊಂದಿಗೆ ಪ್ರಗತಿ ಕಾರ್ಯ ಪರಿಶೀಲಿಸಿ ಮಾತನಾಡಿದ ಅವರು, ಆಯಾ ಸಮಿತಿಗೆ ವಹಿಸಲಾದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಯಾವುದೇ ರೀತಿಯ ಲೋಪದೋಷಕ್ಕೆ ಇಲ್ಲಿ ಅವಕಾಶ ನೀಡಬಾರದು ಎಂದರು.

Contact Your\'s Advertisement; 9902492681

ಮುಖ್ಯಮಂತ್ರಿಗಳು, ಸಚಿವ ಸಂಪುಟ ಸದಸ್ಯರು, ಹಿರಿಯ ಅಧಿಕಾರಿಗಳು ಸೇರಿ ಇಡೀ ಸರ್ಕಾರವೇ ಕಲಬುರಗಿಯತ್ತ ಬರುವುದರಿಂದ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಪರಸ್ಪರ ಸಮನ್ವಯತೆ ಸಾಧಿಸಬೇಕು. ಶಿಷ್ಠಾಚಾರದಂತೆ ವಸತಿ, ಸಾರಿಗೆ, ಭದ್ರತೆ, ಊಟೋಪಚಾರದ ಬಗ್ಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ವಿಮಾನ ನಿಲ್ದಾಣಕ್ಕೆ ಹೆಚ್ಚುವರಿ ಬಸ್ ಸೇವೆ ಕಲ್ಪಿಸಬೇಕು. ಒಟ್ಟಾರೆಯಾಗಿ ಸಚಿವ ಸಂಪುಟ ಸಭೆ ಯಶಸ್ವಿಗೊಳಿಸಲು ಎಲ್ಲಾ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.

ಭದ್ರತಾ ದೃಷ್ಠಿಯಿಂದ ಅಧಿಕಾರಿ-ಸಿಬ್ಬಂದಿಗಳಿಗೆ ಪೊಲೀಸ್ ಇಲಾಖೆ ಪಾಸ್ ನೀಡಬೇಕು. ಸಂಪುಟ ಸಭೆಯ ನಿರ್ಧಾರಗಳು ತ್ವರಿತಗತಿಯಲ್ಲಿ ಪ್ರಚಾರ ನೀಡಬೇಕು, ಡಿ.ಸಿ. ಕಚೇರಿ ಆವರಣದಲ್ಲಿಯೇ ವೈದ್ಯರ ತಂಡ, ಅಗ್ನಿಶಾಮಕ ದಳದ ತಂಡ ನಿಯೋಜಿಸಬೇಕು ಎಂದು ಅಧಿಕಾರಿಗಳಿಗೆ ಕೃಷ್ಣ ಭಾಜಪೇಯಿ ತಿಳಿಸಿದರು.

ಸಚಿವ ಸಂಪುಟ ಸಭೆ ಯಶಸ್ಸಿಗೆ ರಚಿಸಲಾಗಿರುವ ಸ್ವಾಗತ, ಹಣಕಾಸು, ಆಹಾರ ಮತ್ತು ಕುಡಿಯುವ ನೀರು, ಸಮನ್ವಯ ಮತು ಸಹಾಯವಾಣಿ, ವಸತಿ, ಸಾರಿಗೆ ಮತ್ತು ಸಂಪರ್ಕ, ಭದ್ರತಾ, ಮಾಧ್ಯಮ, ಆರೋಗ್ಯ, ಪ್ರಸ್ತಾವನೆ ತಯ್ಯಾರಿಕೆ ಹಾಗೂ ಸಂಪುಟ ಸಭೆ ಕೋಣೆ ನಿರ್ವಹಣೆ ಸಮಿತಿ ಹೀಗೆ ಒಟ್ಟು 11 ಸಮಿತಿಗಳ ಪ್ರಗತಿ ಕಾರ್ಯ ಈ ಸಂದರ್ಭದಲ್ಲಿ ಪರಿಶೀಲಿಸಲಾಯಿತು.

ಪ್ರಸ್ತಾವನೆ ಸಭೆಗೆ ಬರುವಂತೆ ಸಮನ್ವಯ ಸಾಧಿಸಿ: ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಸ್ತಾವನೆ ಸಚಿವ ಸಂಪುಟದ ಮುಂದೆ ಹೋಗಲು ಸರ್ಕಾರದ ಹಂತದಲ್ಲಿ ಬಾಕಿ ಇದ್ದಲ್ಲಿ ಅಥವಾ ಹೊಸ ಪ್ರಸ್ತಾವನೆಗಳಿದಲ್ಲಿ ಕೂಡಲೆ ತಮ್ಮ ತಮ್ಮ ಇಲಾಖಾ ಮುಖ್ಯಸ್ಥರ ಮೂಲಕ ಸಚಿವಾಲಯಕ್ಕೆ ಕಳುಹಿಸಿ ಅಲ್ಲಿಂದ ಕ್ಯಾಬಿನೆಟ್ ಸಚಿವಾಲಯಕ್ಕೆ ಪ್ರಸ್ತಾವನೆ ಹೋಗುವಂತೆ ಅಧಿಕಾರಿಗಳು ಖುದ್ದು ಸಮನ್ವಯ ಸಾಧಿಸಬೇಕು ಎಂದು ಡಿ.ಸಿ ಬಿ.ಫೌಜಿಯಾ ತರನ್ನುಮ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಡಿ.ಸಿ.ಪಿ ಕನಿಕಾ ಸಿಕ್ರಿವಾಲ್, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವಾರ್ ಸಿಂಗ್ ಮೀನಾ, ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ.ಆಕಾಶ ಶಂಕರ, ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಡಿ.ಸಿ.ಎಫ್. ಸುಮಿತ್ ಪಾಟೀಲ, ಕೆ.ಕೆ.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ, ಅಪರ ಪ್ರಾದೇಶಿಕ ಆಯುಕ್ತ ಇಲಿಯಾಸ್ ಅಹ್ಮದ್ ಇಸಾಮದಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here