ಸೆಪ್ಟೆಂಬರ್ 17ರಂದು ವಿಮೋಚನಾ ದಿನ ರದ್ದುಪಡಿಸಿ, ಪ್ರಜಾಸತ್ತಾತ್ಮಕ ದಿನ ಆಚರಿಸಿ: ಕೆ ನೀಲಾ

0
101

ಕಲಬುರಗಿ: ಹೈದ್ರಾಬಾದ್ ಕರ್ನಾಟಕದಲ್ಲಿ ಸೆಪ್ಟೆಂಬರ್ 17 ರಂದು ಆಚರಿಸಲಾಗುತ್ತಿರುವ ವಿಮೋಚನಾ ದಿನವಲ್ಲ, ಅದು ವಿಲೀನಿಕರಣದ ಅಥವಾ ಪ್ರಜಾಸತ್ತಾತ್ಮಕ ದಿನವಾಗಿದ್ದು, ವಿಮೋಚನಾ ದಿನವನ್ನು ರದ್ದುಪಡಿಸಿ, ಪ್ರಜಾಸತ್ತಾತ್ಮಕ ದಿನವನ್ನಾಗಿ ಆಚರಿಸಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷದ (ಮಾರ್ಕ್‍ಸಿಸ್ಟ್) ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ ಅವರು ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 17ರಂದು ಹೈದ್ರಾಬಾದ್ ಕರ್ನಾಟಕದ ವಿಮೋಚನಾ ದಿನಾಚರಣೆಯು ಆರಂಭವಾಗಿದ್ದು ಬಿಜೆಪಿ ಅಧಿಕಾರದಲ್ಲಿದ್ದಾಗ, ವಿಮೋಚನಾ ಎಂಬ ಶಬ್ದವನ್ನು ಬಳಸುವ ಮೂಲಕ ಅದು ಜನತೆಯ ಏಕತೆಯನ್ನು ಕೋಮುವಾದಿ ನೆಲೆಯಲ್ಲಿ ಒಡೆಯುವುದು ಮತ್ತು ಜನತೆಯ ನಡುವೆ ತಪ್ಪು ಹಾಗೂ ಸುಳ್ಳು ಇತಿಹಾಸವನ್ನು ಹರಡುವುದು ಅದರ ಉದ್ದೇಶವಾಗಿತ್ತು ಎಂದು ದೂರಿದರು.

Contact Your\'s Advertisement; 9902492681

1948ರ ಸೆಪ್ಟೆಂಬರ್ ಮುನ್ನಾದ ತಿಂಗಳುಗಳಲ್ಲಿ ನಡೆದ ರಜಾಕಾರ ದಂಗೆಯನ್ನು ಬಿಜೆಪಿಯು ಕೋಮುವಾದಿಕರಣಗೊಳಿಸಿ ತನ್ನ ರಹಸ್ಯ ಕಾರ್ಯಕ್ರಮವನ್ನು ಜಾರಿಗೊಳಿಸಲು ಯತ್ನಿಸಿದೆ. ರಜಾಕಾರರೆಲ್ಲರೂ ಮುಸ್ಲಿಂರೇ ಆಗಿರಲಿಲ್ಲ ಮತ್ತು ಮುಸ್ಲಿಂರೆಲ್ಲರೂ ರಜಾಕಾರರಾಗಿರಲಿಲ್ಲ ಎನ್ನುವುದಕ್ಕೆ ಇತಿಹಾಸವೇ ಸಾಕ್ಷಿ. ಅಧಿಕಾರ ಗದ್ದುಗೆಗಾಗಿ ನಡೆದ ಮತ್ತು ಬ್ರಿಟಿಷರು ದೇಶ ಬಿಟ್ಟು ಹೋಗುವಾಗಲೂ ಭಾರತವನ್ನು ಒಡೆದು ಆಳುವ ಗುರಿಯನ್ನು ಸಾಧಿಸಲು ನಡೆಸಿದ ಪ್ರಯತ್ನದ ಕಾರಣದಿಂದ ನಡೆದ ರಜಾಕಾರರ ದಂಗೆಯನ್ನು ಈ ಹೊತ್ತಿನಲ್ಲಿ ಕೋಮು ನೆಲೆಯಿಂದ ಮಾತ್ರ ನೋಡುವ ತಪ್ಪು ದೃಷ್ಟಿಕೋನವನ್ನು ಪ್ರಚುರಪಡಿಸಲಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲೀಗ ಕಾಂಗ್ರೆಸ್ ಪಕ್ಷವು ಆಡಳಿತದಲ್ಲಿದೆ. ಈಗಲಾದರೂ ಆ ಪ್ರಮಾದವನ್ನು ಸರಿಪಡಿಸಬೇಕು. ಸರ್ಕಾರವು ಸೆಪ್ಟೆಂಬರ್ 17ರಂದು ಪ್ರಜಾಸತ್ತೆಯ ದಿನವಾಗಿ ಆಚರಿಸಲು ನಿರ್ಧರಿಸಬೇಕು ಎಂದು ಒತ್ತಾಯಿಸಿದ ಅವರು, 1724ರಿಂದ 1948ರವರೆಗೆ ನಿಜಾಮ್ ಮನೆತನವು ಆಳ್ವಿಕೆ ಮಾಡಿದೆ. ಮುಸ್ಲಿಂ ಆಳರಸರು ಇದ್ದರೂ ಇಸ್ಲಾಂ ರಾಜ್ಯವಾಗಿರಲಿಲ್ಲ. ಜನಸಂಖ್ಯೆಯಲ್ಲಿ ಶೇಕಡಾ 84ರಷ್ಟು ಮುಸ್ಲಿಮೇತರರು ಇದ್ದರೆ, ಶೇಕಡಾ 14ರಷ್ಟು ಮಾತ್ರ ಮುಸ್ಲಿಂರು ಮತ್ತು ಶೇಕಡಾ 2ರಷ್ಟು ಕ್ರಿಶ್ಚಿಯನ್ ಜನಸಂಖ್ಯೆಯಾಗಿತ್ತು. ಆದಾಗ್ಯೂ, 224 ವರ್ಷಗಳಲ್ಲಿ ಯಾವುದೇ ಕೋಮುದಂಗೆ ನಡೆದಿಲ್ಲ ಎಂದರು.

ಜನತೆಯು ಕೋಮು ಸಾಮರಸ್ಯದಲ್ಲಿ ಬದುಕು ಕಟ್ಟಿಕೊಂಡಿದೆ. ಆಡಳಿತದ ಪ್ರಮುಖ ಹುದ್ದೆಗಳಲ್ಲಿ ಮುಸ್ಲಿಮೇತರರೇ ಪ್ರಧಾನವಾಗಿದ್ದರು. ಹಾಗೆ ನೋಡಿದರೆ ಹೈದ್ರಾಬಾದ್ ಸಂಸ್ಥಾನದ ವ್ಯಾಪ್ತಿಯಲ್ಲಿ ಇಂದಿಗೂ ಚಾರಿತ್ರಿಕವಾಗಿ ಕೋಮು ಸೌಹಾರ್ದತೆಯ ಬಹುಸಂಸ್ಕøತಿ ಪರಂಪರೆಗೆ ಆಳವಾದ ಬೇರುಗಳಿವೆ. ಭಾವೈಕ್ಯತೆ ಇಲ್ಲಿನ ಜೀವಾಳವಾಗಿದೆ. ಆದಾಗ್ಯೂ, ಬಿಜೆಪಿ ಭಾವೈಕ್ಯ ಪರಂಪರೆಯನ್ನು ನಾಶಗೊಳಿಸುವ ಉದ್ದೇಶವಿರುವುದರಿಂದ ಆ ದಿನವನ್ನು ಕೋಮುವಾದದ ವಿಸ್ತರಣೆಗೆ ಬಳಸಿದೆ ಎಂದು ಅವರು ಕಟುವಾಗಿ ಟೀಕಿಸಿದರು.

ದೇಶವು ರಾಜಕೀಯ ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ದೇಶದಲ್ಲಿ 560ಕ್ಕೂ ಹೆಚ್ಚು ಸಂಸ್ಥಾನಗಳಿದ್ದವು. ಅನೇಕ ಸಂಸ್ಥಾನಗಳು ಭಾರತದ ಒಕ್ಕೂಟದಲ್ಲಿ ವಿಲೀನವಾಗುವ ಸಂದರ್ಭದಲ್ಲಿ ಸೇನೆ ಬಳಸಲಾಗಿದೆ. ದಂಗೆಗಳು ನಡೆದಿವೆ. ಕಾಂಗ್ರೆಸ್ ಆ ಸಂಸ್ಥಾನಗಳೊಂದಿಗೆ ವಿಲೀನಕರಣದ ಒಪ್ಪಂದ ನಡೆಸಿ ಸಂಪತ್ ಪೂರ್ತಿ ರಾಜಮನೆತನಗಳಿಗೆ ಬಿಟ್ಟು ಕೊಡಲಾಗಿದೆ. ಆಂಧ್ರದ ಕೃಷಿ ಕೂಲಿ ಕಾರ್ಮಿಕರು ಸಂಘರ್ಷದಿಂದ ಪಡೆದುಕೊಂಡ ಭೂಮಿಯನ್ನು ಇದೇ ಕಾಂಗ್ರೆಸ್ ಮತ್ತೆ ಭೂಮಾಲಿಕರಿಗೆ ಪರಭಾರೆ ಮಾಡಿದ್ದಿದೆ. ತಾನು ಉಳ್ಳವರ ಮತ್ತು ಭೂಮಾಲಿಕರ ಪರ ಎನ್ನುವುದನ್ನು ಕಾಂಗ್ರೆಸ್ ರುಜುಗೊಳಿಸಿದೆ ಎಂದು ಅವರು ಕಿಡಿಕಾರಿದರು.

ಇತಿಹಾಸದ ಪುಟಗಳಲ್ಲಿ ಇನ್ನೂ ಅನೇಕ ಸತ್ಯಗಳಿವೆ. ಆದಾಗ್ಯೂ, ಕಾಂಗ್ರೆಸ್ ಜವಾಬ್ದಾರಿಯು ಈಗ ಭಾರತದ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಬೇಕಿದೆ. ಕೋಮು ಸಾಮರಸ್ಯದ ಬೇರುಗಳನ್ನು ಗಟ್ಟಿಗೊಳಿಸಬೇಕಾಗಿದೆ. ಹೀಗಾಗಿ ಸೆಪ್ಟೆಂಬರ್ 17ನ್ನು ಪ್ರಜಾಸತ್ತೆಯ ದಿನ ಇಲ್ಲವೇ ವಿಲೀನಿಕರಣದ ದಿನವೆಂದು ಆಚರಿಸಬೇಕು ಎಂದು ಅವರು ಒತ್ತಾಯಿಸಿದರು.

ದೇಶಾದ್ಯಂತ ಪ್ರತಿಯೊಂದನ್ನೂ ಕೋಮುವಾದೀಕರಣ ಮಾಡುವ ಪ್ರಯತ್ನ ನಡೆಯುತ್ತಿರುವುದು ಅತ್ಯಂತ ಅಪಾಯಕಾರಿಯಾಗಿದೆ. ಆದ್ದರಿಂದ ಕೋಮುಸಾಮರಸ್ಯ, ಜಾತ್ಯಾತೀತೆ ಪರಂಪರೆಯ ರಕ್ಷಣೆಗಾಗಿ ಕೋಮುದಂಗೆ ನಿಯಂತ್ರಣ ಕಾಯ್ದೆ ಜಾರಿಗೊಳಿಸಬೇಕು ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಎಂ.ಬಿ. ಸಜ್ಜನ್, ಶ್ರೀಮಂತ್ ಬಿರಾದಾರ್, ಸುಧಾಮ್ ಧನ್ನಿ, ಪಾಂಡುರಂಗ ಮಾವಿನಕರ್ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here