ಶಹಾಬಾದ: ಸುಗ್ರೀವಾಜ್ಞೆ ಮೂಲಕ ಕೂಡಲೇ ಒಳಮೀಸಲಾತಿ ಜಾರಿಗೊಳಿಸುವಂತೆ ಅಗ್ರಹಿಸಿ ದಲಿತ ಮಾದಿಗ ಸಮನ್ವಯ ಸಮಿತಿ(ಡಿಎಂಎಸ್‍ಎಸ್)ಯಿಂದ ಗ್ರೇಡ್-2 ತಹಶೀಲ್ದಾರ್ ಗುರುರಾಜ ಸಂಗಾವಿ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವiನವಿ ಸಲ್ಲಿಸಿದರು.
ದಲಿತ ಮಾದಿಗ ಸಮನ್ವಯ ಸಮಿತಿ ಅಧ್ಯಕ್ಷ ಶಿವರಾಜ ಕೋರೆ ಮಾತನಾಡಿ, ನ್ಯಾಯಮೂರ್ತಿ ಸದಾಶಿವ ಆಯೋಗದ ಆಸೆಯಂತೆ ಪರಿಶಿಷ್ಟ ಜಾತಿಗೆ ಒಳಮೀಸಲಾತಿ ಜಾರಿ ಮಾಡುವುದಕ್ಕೆ ಆಯಾ ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ. ಪರಿಶಿಷ್ಟ ಜಾತಿ ಜನಾಂಗಕ್ಕೆ ಒಳಮೀಸಲಾತಿ ನೀಡಿದರೆ ಸಮಾನತೆಗೆ ಯಾವುದೇ ರೀತಿಯ ಧಕ್ಕೆಯಾಗುವುದಿಲ್ಲ. ಸಂವಿಧಾನದ ಆಶಯದಂತೆ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಅನುಸಾರವಾಗಿ ರಾಜ್ಯ ಸರ್ಕಾರವು ಒಳಮೀಸಲಾತಿ ಜಾರಿ ಮಾಡುವುದಕ್ಕೆ ಯಾವುದೇ ತರಹದ ಕಾನೂನು ಉಲ್ಲಂಘನೆಯಾಗುವುದಿಲ್ಲವೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿರುತ್ತದೆ ಎಂದು ತಿಳಿಸಿದರು.
“ಶಹಾಬಾದ್ ತಾಲೂಕಿನ ದಲಿತ ಮಾದಿಗ ಸಮನ್ವಯ ಸಮಿತಿ ಸುಪ್ರೀಂ ಕೋರ್ಟ್‍ಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇವೆ. ಸುಪ್ರಿಂ ಕೋರ್ಟ್‍ನ ಈ ಐತಿಹಾಸಿಕ ನಿರ್ಣಯವನ್ನು ಸ್ವಾಗತಿಸುತ್ತೇವೆ ಮತ್ತು ರಾಜ್ಯದಲ್ಲಿರುವ ಮಾದಿಗ ಸಮಾಜದ ಹೋರಾಟಗಾರರು ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಯಥವತ್ತಾಗಿ ಜಾರಿಗೊಳಿಸಬೇಕೆಂದು ಮೂರು ದಶಕಗಳ ಸತತವಾಗಿ ಹೋರಟ ಮಾಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಅತಿಹೆಚ್ಚು ಮಾದಿಗ ಸಮಾಜದ ಜನಾಂಗವಿದ್ದು, ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಜಾರಿಯಾಗದ ಹೊರತು ಮಾದಿಗ ಸಮಾಜಕ್ಕೆ ನ್ಯಾಯ ದೊರಕಲಾರದು.
ವರ್ಷಗಳಲ್ಲಿ ಸಾವು-ನೋವುಗಳಾಗಿವೆ ಮಾದಿಗ ಸಮಾಜದ ಸಹೋದರರ ರಕ್ತ ಹರಿದಿದೆ. ಹೋರಾಟವನ್ನು ನಿರಂತರವಾಗಿ ಮಾಡುತ್ತ ಬಂದಿರುತ್ತೇವೆ. ಅದರ ಪ್ರತಿಫಲವಾಗಿ ಸುಪ್ರೀಂ ಕೋರ್ಟ್ ಐತಿಹಾಸಿಕ ನಿರ್ಣಯವನ್ನು ಪ್ರಕಟಿಸುವ ಮೂಲಕ ಮಾದಿಗ ಸಮಾಜಕ್ಕೆ ನ್ಯಾಯ ನೀಡಿದೆ ಮತ್ತು ಹೋರಾಟಕ್ಕೆ ಬೆಲೆ ಬಂದಿದೆ” ಎಂದು ಸಂತೋಷ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯದಲ್ಲಿರುವ ಹಲವಾರು ಇಲಾಖೆಯ ನೇಮಕಾತಿ ಹುದ್ದೆಗಳನ್ನು ಕೂಡಲೇ ತಡೆಹಿಡಿಯಬೇಕು. ಒಂದುವೇಳೆ ಒಳಮೀಸಲಾತಿ ಸುಗ್ರಿವಾಜ್ಞೆ ವಿಳಂಬವಾದಲ್ಲಿ ರಾಜ್ಯಾದ್ಯಂತ ದಲಿತ ಮಾದಿಗ ಸಮನ್ವಯ ಸಮಿತಿ ಸಂಘಟನೆ ಪರವಾಗಿ ತೀವ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಡಿಎಂಎಸ್‍ಎಸ್ ಕಾರ್ಯಾಧ್ಯಕ್ಷ ಶರಣು ಬಿ ಪಗಲಾಪೂರ, ಜಿಲ್ಲಾ ಪ್ರತಿನಿಧಿ ರವಿ ಬೆಳಮಗಿ, ಸಂಘಟನಾ ಕಾರ್ಯದರ್ಶಿ ನಾಗಪ್ಪ ಟಿ ರಾಯಚೂರಕ್, ಅಧ್ಯಕ್ಷ ಯಲ್ಲಾಲಿಂಗ ಹೈಯ್ಯಾಳಕರ ಸೇರಿದಂತೆ ಇತರರು ಇದ್ದರು.