ಕಲಬುರಗಿ: ನಾಡಿನ ಮಠಗಳಿಗೆ ವಠುಗಳನ್ನು ಅಣಿ ಮಾಡಿ ಸಮಾಜಕ್ಕೆ ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆ ಮಾಡಲು ಪ್ರೇರಣೆ ನೀಡಿದವರು ಪೂಜ್ಯಶ್ರೀ ಹಾನಗಲ್ ಕುಮಾರ ಶಿವಯೋಗಿಗಳು ಎಂದು ಪತ್ರಕರ್ತ ದೇವೇಂದ್ರಪ್ಪ ಅವಂಟಿ ಹೇಳಿದರು.
ಅವರಿಂದು ಸ್ಥಳೀಯ ಪ್ರಭುದೇವ ನಗರದಲ್ಲಿ ನೀಲಕಂಠೇಶ್ವರ ಶಾಲೆಯಲ್ಲಿ ಹಾನಗಲ್ ಕುಮಾರ ಶಿವಯೋಗಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾತನಾಡುತ್ತ, ವಚನ ಪಿತಾಮಹ ಫ.ಗು.ಹಳಕಟ್ಟಿ, ಲಿಂಗರಾಜ ದೇಸಾಯಿ, ಅಥಣಿಯ ಶಿವಯೋಗಿಗಳು ಸೇರಿದಂತೆ ಅನೇಕ ಪುಣ್ಯ ಪುರುಷರನ್ನು ನಾಡಿಗೆ ನೀಡಿದ ಶ್ರೇಯಸ್ಸು ಹಾನಗಲ್ ಕುಮಾರಸ್ವಾಮಿಗಳಿಗೆ ಸಲ್ಲುತ್ತದೆ ಎಂದರು.
ಹನ್ನೆರಡನೆಯ ಶತಮಾನದಲ್ಲಿ ವಚನ ಸಾಹಿತ್ಯವನ್ನು ದೇಶದ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಕರ್ನಾಟಕದ ಎಲ್ಲ ಭಾಗದಲ್ಲಿ ನಡೆದಾಡಿಕೊಂಡು ಪ್ರತಿಯೊಬ್ಬರ ಮನೆ – ಮನ ಮುಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಾನ್ ತಪಸ್ವಿ ಎಂದು ಹೇಳಿದರು.
ಅಖಿಲ ಭಾರತ ವೀರಶೈವ ಮಹಾ ಸಭೆಯನ್ನು ಸ್ಥಾಪಿಸುವ ಮೂಲಕ ಸಮಾಜದಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸಿದ್ದಾರೆ ಎಂದು ವಿವರಿಸಿದರು.
ಖ್ಯಾತ ವೈದ್ಯ ಡಾ.ರಾಜಶೇಖರ ಪಾಟೀಲ ಹೆಬ್ಳೆಯವರು ಮಾತನಾಡುತ್ತ, ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಶಿಕ್ಷಕರರು ಉತ್ತಮ ಶಿಕ್ಷಣ ನೀಡುವುದರೊಂದಿಗೆ ನಾಡಿನ ಸೇವೆ ಅಣಿಗೊಳಿಸಬೇಕೆಂದು ಕರೆ ನೀಡಿದರು.
ಚೌಕಿಮಠ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಷಣ್ಮುಖಯ್ಯ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡುತ್ತ ಭಾಲ್ಕಿ ಶ್ರೀಗಳ ಹಾಗೂ ಸಿದ್ಧಗಂಗಾಶ್ರೀಗಳ ಪ್ರೇರಣೆಯಿಂದ ಈ ಸಂಸ್ಥೆಯನ್ನು ಸ್ಥಾಪಿಸಲಾಹಿದ್ದು, ಬಡ ಮಕ್ಕಳಿಗೆ ಶಿಕ್ಷಣ ನೀಡುವುದೇ ನಮ್ಮ ಸಂಸ್ಥೆಯ ಉದ್ದೇಶವಾಗಿದೆ ಎಂದು ಹೇಳಿದರು.
ಶಿಕ್ಷಕಿ ರಾಜೇಶ್ವರಿಯವರು ಸ್ವಾಗತಿಸಿ, ನಿರೂಪಣೆ ಮಾಡಿದರು. ಕೊನೆಯಲ್ಲಿ ಶಿಕ್ಷಕಿ ಸಂಗೀತಾ ಅವರು ವಂದನಾರ್ಪಣೆ ಮಾಡಿದರು.