ಭಾಲಿ; ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ 480 ನೆಯ ಮಾಸಿಕ ಶಿವಾನುಭವಗೋಷ್ಠಿ ಹಾಗೂ ಶರಣ ಹೂಗಾರ ಮಾದಣ್ಣನವರ ಸ್ಮರಣೋತ್ಸವ ಆಚರಿಸಲಾಯಿತು.
ಸಮಾರಂಭದ ದಿವ್ಯ ಸಾನಿಧ್ಯವಹಿಸಿದ ಪೂಜ್ಯ ಶ್ರೀ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಶರಣ ಹೂಗಾರ ಮಾದಣ್ಣನವರ ಕಾಯಕನಿಷ್ಠೆ, ದಾಸೋಹಭಾವ ಹಾಗೂ ಇಷ್ಟಲಿಂಗ ನಿಷ್ಠೆಯ ಕುರಿತು ಮಾತನಾಡಿದರು.
ಹೂಗಾರ ಮಾದಣ್ಣನವರು ಬಸವ ಸಮಕಾಲೀನ ಶರಣರು. ಅನುಭವಮಂಟಪದಲ್ಲಿ ಎಲ್ಲ ಶರಣರ ಜೊತೆ ಅನುಭಾವ ಮಾಡಿದವರು. ಪ್ರತಿ ನಿತ್ಯ ಬೆಳಿಗ್ಗೆ ಶಿವಶರಣರ ಮನೆಗೆ ಹೂ ಮತ್ತು ಬಿಲ್ವಪತ್ರಿ ವಿತರಿಸುವ ಕಾಯಕ ಮಾಡುತ್ತ ತಮ್ಮ ಸುವಿಚಾರದಿಂದ ಎಲ್ಲರ ಮನಸ್ಸುಗಳನ್ನು ಅರಳಿಸಿದರು. ಹೂಗಾರ ಮಾದಣ್ಣನ ಕಾಯಕ ಮತ್ತು ದಾಸೋಹತತ್ವದಲ್ಲಿ ಅತ್ಯಂತ ಶ್ರದ್ಧೆ ಇಟ್ಟುಕೊಂಡವರು.
ಹೂಗಾರ ಮಾದಣ್ಣನವರ ಪತ್ನಿ ಮಹಾದೇವಿ ಪತಿಗೆ ತಕ್ಕ ಸತಿಯಾಗಿದ್ದಳು. ಸಕಲೇಶ ಮಾದರಸರಿಂದ ಇಷ್ಟಲಿಂಗ ದೀಕ್ಷೆ ಪಡೆದುಕೊಂಡು ಲಿಂಗಾನುಭವವನ್ನು ಸಾಧಿಸಿದ ಮಹಾ ಶರಣರು ಇವರು. ಹೂಗಾರ ಮಾದಣ್ಣನವರ ಜೀವನ ಚರಿತ್ರೆ ಜನಪದ ಸಾಹಿತ್ಯದಲ್ಲಿ ಅಭಿವ್ಯಕ್ತಗೊಂಡಿದೆ. ಅವರ ವಚನಗಳು ನಮಗೆ ದೊರೆತಿಲ್ಲ. ಚರಿತ್ರೆಯೂ ಸಿಗುವುದಿಲ್ಲ.
ಆದರೆ ಜನಪದ ಸಾಹಿತ್ಯದಿಂದ ಹೂಗಾರ ಮಾದಣ್ಣನವರ ಘನವ್ಯಕ್ತಿತ್ವವನ್ನು ಕಂಡುಕೊಳ್ಳಲು ಸಾಧ್ಯವಿದೆ. ಅವರು ವಿಶ್ವಗುರು ಬಸವಣ್ಣನವರನ್ನು ನಂಬಿ ಅವರ ತತ್ವಾದರ್ಶಗಳನ್ನು ಅನುಷ್ಠಾನದಲ್ಲಿ ತಂದರು ಎಂದು ಪೂಜ್ಯರು ಆರ್ಶೀವಚನ ನೀಡಿದರು. ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಸಮ್ಮುಖ ವಹಿಸಿದ್ದರು.
ಮನೋಹರ ಫುಲಾರಿ ಅಧ್ಯಕ್ಷತೆ ವಹಿಸಿದ್ದರು. ರಾಜಕುಮಾರ ಹೂಗಾರ ಶ್ರೀಮಂಡಲ ಅವರಿಂದ ಅನುಭಾವ ನಡೆಯಿತು. ಸಂತೋಷ ಮಾಲಗಾರ ಗ್ರಂಥ ಪಠಣ ಮಾಡಿದರು. ಮುಖ್ಯ ಅತಿಥಿಗಳಾಗಿ ಜಯಪ್ರಕಾಶ ಮಾಲಗಾರ, ವಿಠ್ಠಲ ಹೂಗಾರ, ವೀರಣ್ಣ ಹೂಗಾರ ಆಗಮಿಸಿದರು. ರವಿ ಹೂಗಾರ ಭಾಲ್ಕಿ ಅವರಿಗೆ ಸನ್ಮಾನಿಸಲಾಯಿತು.
ಬಸವರಾಜ ಹೂಗಾರ, ಶಿವಕುಮಾರ ಹೂಗಾರ, ಜಗದೀಶ ಡೋಣಗಾಪೂರೆ ಹೂಗಾರ ಉಪಸ್ಥಿತರಿದ್ದರು. ವೀರಣ್ಣ ಕುಂಬಾರ ನಿರೂಪಿಸಿದರು. ರಾಜಕುಮಾರ ಹೂಗಾರ ಅವರಿಂದ ವಚನ ಸಂಗೀತ ಜರುಗಿತು. ಅಕ್ಕನ ಬಳಗದ ಶರಣೆಯರು ಹಾಗೂ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು.