ಕಲಬುರಗಿ: ತಂದೆ ಇಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ 24,000 ರೂ. ಸ್ಕಾಲರ್ ಶಿಪ್ ಸೌಲಭ್ಯವಿದ್ದು, ತಂದೆ ಇಲ್ಲದ ಮಕ್ಕಳು ಇದರ ಪ್ರಯೋಜನ ಪಡೆಯಬೇಕೆಂದು ಇತ್ತೀಚೆಗೆ ಸಾಮಾಜಿಕ ಜಾಲತಾಣ ವಾಟ್ಸಪ್ ನಲ್ಲಿ ಕೆಲವು ದಿನಗಳಿಂದ ತಪ್ಪು ಸಂದೇಶ ಹರಿದಾಡುತ್ತಿದ್ದು, ಇದಕ್ಕೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಸ್ಪಷ್ಟನೆ ನೀಡಿದ್ದು, ತಂದೆ ಇಲ್ಲದ ಮಕ್ಕಳಿಗಲ್ಲ ಬದಲಾಗಿ ಅರ್ಹತಾ ಮಾನದಂಡ ಪೂರೈಸಿದ ವಿಶೇಷ ಮಕ್ಕಳಿಗೆ ಮಾತ್ರ ಆರ್ಥಿಕ ನೆರವು ನೀಡುವ ಯೋಜನೆ ಇದಾಗಿದೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಯೋಜನೆ ಕುರಿತು ತಪ್ಪು ಮಾಹಿತಿಯಿಂದ ಸಾರ್ವಜನಿಕರು ಗೊಂದಲಕ್ಕೀಡಾಗಿ ಅನಗತ್ಯ ಜಿಲ್ಲಾಧಿಕಾರಿಗಳ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿ, ಸಿ.ಡಿ.ಪಿ.ಓ ಕಚೇರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಛೇರಿಗೆ ಅಲೆದಾಡುತ್ತಿರುವುದಲ್ಲದೆ ದೂರವಾಣಿ ಕರೆ ಮಾಡಿ ವಿಚಾರಿಸುತ್ತಿದ್ದಾರೆ.
ಯೋಜನೆಗೆ ಯಾರು ಅರ್ಹರು?: ಮಕ್ಕಳು ಅನಾಥರಾಗಿದ್ದರೆ, ವಿಸ್ತ್ರುತ ಕುಟುಂಬದೊಂದಿಗೆ ವಾಸಿಸುತ್ತಿದ್ದರೆ, ಪಾಲನೆ ಮತ್ತು ರಕ್ಷಣೆಗೆ ಅವಶ್ಯವಿರುವ ಪಾಲನಾ ಸಂಸ್ಥೆಯ ಮಕ್ಕಳು, ವಸತಿ ರಹಿತರು, ನೈಸರ್ಗಿಕ ವಿಕೋಪಗಳ ಸಂತ್ರಸ್ಥರು, ಬಾಲಕಾರ್ಮಿಕರು, ಬಾಲ್ಯವಿವಾಹ ಸಂತ್ರಸ್ಥರು, ಮಾನವಕಳ್ಳ ಸಾಗಾಣಿಕೆ ಸಂತ್ರಸ್ಥರು, ಪೋಷಕರು ಮಾರಣಾಂತಿಕ ಕಾಯಿಲೆಗೆ ತುತ್ತಾದವರು, ಹೆಚ್.ಐ.ವಿ-ಏಡ್ಸ್ ಪೀಡಿತ, ವಿಶೇಷ ಚೇತನ ಮಕ್ಕಳು, ಭಿಕ್ಷಾಟನೆ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳು, ಬಂಧಿಖಾನೆಯಲ್ಲಿರುವ ಪೋಷಕರ ಮಕ್ಕಳು, ಆರ್ಥಿಕವಾಗಿ ಹಿಂದುಳಿದ ಕುಟುಂಬದಲ್ಲಿರುವ ಮಕ್ಕಳು ಈ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ. ಇಂತಹ 18 ವರ್ಷದೊಳಗಿನ ಮಕ್ಕಳು ಕುಟುಂಬದೊಂದಿಗೆ ಬೆಳೆಯುವ ದೃಷ್ಟಿಯಿಂದ ಪ್ರತಿ ಮಾಹೆ 4,000 ರೂ. ಗಳಂತೆ ಒಂದು ವರ್ಷಕ್ಕೆ ಸೀಮಿತವಾಗಿ ಮಾತ್ರ ಆರ್ಥಿಕ ನೆರವು ನೀಡಲಾಗುತ್ತಿದೆ.
ಮುಂದುವರೆದು, ಮುಂದಿನ ವರ್ಷ 2025-26ನೇ ಸಾಲಿಗೆ ಸಂಬಂಧಿಸಿದಂತೆ ಅರ್ಹರಿಂದ ಅರ್ಜಿ ಪಡೆಯಲಾಗುತ್ತಿದೆ. ಅರ್ಜಿಗಳನ್ನು ಇದೇ ಸೆ.30 ರೊಳಗೆ ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಎದುರುಗಡೆ ಇರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಛೇರಿಯಿಂದ ಪಡೆದುಕೊಂಡು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಅಕ್ಟೋಬರ್ 10 ರೊಳಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಪ್ರಗತಿ ಕಾಲೋನಿ, ಸೇಡಂ ರೋಡ, ಕಲಬುರಗಿ ಇಲ್ಲಿಗೆ ಸಲ್ಲಿಸಲು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ ಮತ್ತು ದೂರವಾಣಿ ಸಂಖ್ಯೆ 08472-243219ಗೆ ಸಂಪರ್ಕಿಸಲು ಕೋರಲಾಗಿದೆ.