ಕಲಬುರಗಿ: ವಿಶ್ವ ಹೃದಯ ದಿನದ ಅಂಗವಾಗಿ ಸ್ಥಳೀಯ ಖಾಜಾ ಬಂದಾನವಾಜ ವಿವಿಯ ಖಾಜಾ ಬಂದಾನವಾಜ ಆಸ್ಪತ್ರೆಯ ಜನರಲ ಮೆಡಿಸಿನ್ ವಿಭಾಗದಲ್ಲಿ ಸೋಮವಾರ ಉಚಿತ ಬಿಪಿ ಮತ್ತು ಇಸಿಜಿ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ 9 ರಿಂದ ಸಂಜೆ 5ರವರೆಗೆ ಮೆಡಿಸಿನ ವಿಭಾಗದಲ್ಲಿ ತಪಾಸಣೆ ಜರುಗಿತು.
ಈ ಕಾರ್ಯಕ್ರಮದಲ್ಲಿ ಸುಮಾರು 70 ರೋಗಿಗಳು ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆ ಪಡೆದುಕೊಂಡರು. ಜಾಗೃತಿ ಕಾರ್ಯಕ್ರಮದಲ್ಲಿ ಡಾ. ಹಿದಾಯತ ಉಲ್ಲಾ ಹೃದಯದ ಕಾಯಿಲೆ, ಹೃದಯ ಆರೋಗ್ಯ, ಮಾಡಿಸಿಕೊಳ್ಳಬೇಕಾದ ಪರೀಕ್ಷೆಗಳ ಬಗ್ಗೆ ತಿಳಿ ಹೇಳಿದರು.
ಹೃದಯದ ಆರೋಗ್ಯ ಚಟುವಟಿಕೆಯ ಸಲುವಾಗಿ ಅನುಸರಿಸಬೇಕಾದ ಆಹಾರ ಕ್ರಮದ ಬಗ್ಗೆ ಮಾತನಾಡುತ್ತ, ಜಂಕ್ ಫುಡ್, ಅತಿಯಾಗಿ ಮಾಂಸ, ಎಣ್ಣೆ ಪದಾರ್ಥ ತಿನ್ನಬಾರದು. ಬದಲಾಗಿ ಹಸಿ ತರಕಾರಿ, ಮೊಳಕೆ ಕಾಳುಗಳು, ಹಣ್ಣು ಸೇವಿಸಬೇಕೆಂದರು.
ನಿಯಮಿತವಾದ ನಡುಗೆ, ಲಘು ವ್ಯಾಯಾಮ, ಮಿತಪರಿಶ್ರಮ ಹೃದಯಕ್ಕೆ ಬೇಕು ಎಂದರು. ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿ ಅವರ ಸಂದೇಹ ಪರಿಹರಿಸಿದರು. ಡಾ. ಎಂ ಎ ಫಯೀಮ ವಂದಿಸಿದರೆ ಡಾ. ಇರಫಾನ ಅಲಿ ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ಮೆಡಿಕಲ ಡೀನ ಡಾ. ಸಿದ್ದೇಶ ಶೀರ್ವಾರ, ಮೆಡಿಕಲ್ ಸೂಪೇರಿಟೆಂಡೆಂಟ್ ಡಾ. ಸಿದ್ಧಲಿಂಗ ಚೆಂಗಟಿ, ಆಡಳಿತ ಅಧಿಕಾರಿ ಡಾ. ರಾಧಿಕಾ, ಜನರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥೆ ಡಾ. ಚಂದ್ರಕಲಾ, ಚರ್ಮರೋಗ ವಿಭಾಗದ ಮುಖ್ಯಸ್ಥ ರಾದ ಡಾ. ಗುರುರಾಜ, ಕೆಬಿಎನ ಆಸ್ಪತ್ರೆಯ ವೈದ್ಯರು, ವಿಭಾಗದ ಪಿಜಿ ವಿದ್ಯಾರ್ಥಿಗಳು ಹಾಜರಿದ್ದರು.