ಕಲಬುರಗಿ; ಹಣತೆ ಬಲು ಶ್ರೇಷ್ಠ ಅದು ಇನ್ನೊಬ್ಬರಿಗಾಗಿ ಉರಿದು ಬೆಳಕು ನೀಡುತ್ತದೆ, ಇನ್ನೊಬ್ಬರನ್ನು ಕಂಡು ಉರಿಯುವುದಿಲ್ಲ ಎಂದು ಶ್ರೀನಿವಾಸ ಸರಡಗಿ ಪೂಜ್ಯರಾದ ಡಾ.ರೇವಣಸಿದ್ಧ ಶಿವಾಚಾರ್ಯರು ಹೇಳಿದರು.
ತಾಲೂಕಿನ ಹತಗುಂದಿ ಗ್ರಾಮದ ಭಾಗ್ಯವಂತಿ ದೇವಸ್ಥಾನದ ಆವರಣ ದಲ್ಲಿ ದೇವಿ ಭಾಗ್ಯವಂತಿ ಮಹಾಪುರಾಣ ಕಾರ್ಯಕ್ರಮದಲ್ಲಿ ಧರ್ಮಸಭೆ ಉದ್ಘಾಟಿಸಿ ಆಶೀರ್ವಚನ ನೀಡುತ್ತಾ ದೇವಿಯ ಆರಾಧಕರಾದ ಶಿವಲೀಲಾ ತಾಯಿಯವರು ಜಾತಿ ಮತ ಎನ್ನದೆ ಸರ್ವರೂ ನಮ್ಮವರೆಂದು ಅರಿತು ಶರಣರ ಪರಿಕಲ್ಪನೆಯ ಸಮಾಜ ಕಟ್ಟುತ್ತಿದ್ದಾರೆ. ಪ್ರೀತಿ,ತಾಳ್ಮೆ ಹಾಗೂ ತ್ಯಾಗಗಳಿಂದ ಸುಂದರ ಬದುಕು ನಿರ್ಮಿಸಿಕೊಳ್ಳಬಹುದೆಂದು ನಾಡಿಗೆ ತೋರಿಸಿಕೊಟ್ಟ ಓರ್ವ ಶ್ರೇಷ್ಠ ಮಹಿಳೆಯಾಗಿದ್ದಾರೆ.
ಮನುಷ್ಯನಿಗೆ ನೆಮ್ಮದಿ ಬೇಕೆಂದರೆ ಹುಡುಕಲೇಬೇಕು, ಮೊದಲು ಮನದೊಳಗೆ ನಂತರ ಜಗದೊಳಗೆ. ತಲೆತಗ್ಗಿಸಿ ನಿಮ್ಮ ಕಾರ್ಯ ನೀವು ಮಾಡಿದರೆ ಅದರ ಫಲ ನಿಮ್ಮನ್ನು ತಲೆ ಎತ್ತುವಂತೆ ಮಾಡುತ್ತದೆ ಎಂದು ಮಾರ್ಮಿಕವಾಗಿ ನುಡಿದರು. ಕಲ್ಯಾಣ ಕರ್ನಾಟಕ ಭಾಗದ ಶ್ರೇಷ್ಠ ಪುರಾಣ ಪಟುಗಳಾದ ಸಂಗಮೇಶ ಶಾಸ್ತ್ರಿ ಮಾಶಾಳ ಅವರು ಪುರಾಣ ಹೇಳುತ್ತಾ ತಮಗಾಗಿ ಜೀವಿಸಿದವರು ಅಲ್ಪಕಾಲ ಉಳಿದರೆ, ಪರರಿಗಾಗಿ ಜೀವಿಸಿದವರು ಅಮರವಾಗಿ ಉಳಿದಿದ್ದಾರೆ.ಇಂಥವರ ಸಾಲಿನಲ್ಲಿ ನಾವು ಕೂಡ ಒಳ್ಳೆಯ ಕಾರ್ಯ ಮಾಡಿ ಸನ್ಮಾರ್ಗದತ್ತ ಸಾಗೋಣ ಎಂದು ಮಾರ್ಮಿಕವಾಗಿ ಹೇಳಿದರು.
ಚಿಣಮಗೇರಿಯ ಪೂಜ್ಯರಾದ ವೀರ ಮಹಾಂತ ಶಿವಾಚಾರ್ಯರು, ಜೋಗುರದ ಪೂಜ್ಯರಾದ ಮರಳಸಿದ್ದ ದೇವರು, ಕೊಳ್ಳುರದ ಪೂಜ್ಯರಾದ ಮೃತ್ಯುಂಜಯ ದೇವರು, ಸಿಂದಗಿ ತಾಲೂಕಿನ ಬೊಮ್ಮನಳ್ಳಿಯ ನರಸಿಂಹ ಮಹಾರಾಜರು, ಪೂಜ್ಯರಾದ ಶಶಿಕುಮಾರ ದೇವರು ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ವೇದಿಕೆಯ ಮೇಲೆ ಚಿಣಮಗೇರಿ ಸಾಧು ಮಹಾರಾಜರು, ವಿಶಾಲ ಮುತ್ಯಾ, ಹುಣಸಿ ಹಡಗಿಲ ಹಾಲುಮತದ ಶರಣರಾದ ಸಿದ್ದರಾಮ ಪೂಜ್ಯರು, ನ್ಯಾಯವಾದಿ ಹಣಮಂತರಾಯ ಎಸ್ ಅಟ್ಟೂರ ಉಪಸ್ಥಿತರಿದ್ದರು.
ಸಂಗೀತ ಕಲಾವಿದರಾದ ಶಿವಾನಂದ ಮಂದೇವಾಲ, ಮಲ್ಲಿನಾಥ ಭೂಪಾಲ ತೆಗನೂರ, ಆಂಜನೇಯ ಗುತ್ತೇದಾರ ಸಾವಳಗಿ, ಶ್ರೀಶೈಲ ಗುತ್ತೇದಾರ, ಮಹಾಂತಯ್ಯ ಸ್ವಾಮಿ ಗೊಬ್ಬುರ, ಶಿವಶರಣಪ್ಪ ದಿಕ್ಸಂಗಿ, ಬಸವರಾಜ ದಿಕ್ಸಂಗಿ ಸಂಗೀತ ಸೇವೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಹತಗುಂದಾ ಗ್ರಾಮದ ದೇವಿ ಭಾಗ್ಯವಂತಿಯ ಆರಾಧಕರಾದ ಶಿವಲೀಲಾ ತಾಯಿಯವರನ್ನು ವಿಶೇಷವಾಗಿ ಗೌರವಿಸಲಾಯಿತು. ಮಾಜಿ ಸೈನಿಕರಿಗೆ, ಪ್ರಗತಿಪರ ರೈತರಿಗೆ, ಸಮಾಜ ಸೇವಕರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹತಗುಂದಿ,ಯಳವಂತಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಸಾವಿರಾರು ಜನ ಭಕ್ತರು ಭಾಗವಹಿಸಿದರು.