ವ್ಯಸನಮುಕ್ತ ಗ್ರಾಮ ಸಂಕಲ್ಪ: ಅಕ್ಕ ಅನ್ನಪೂರ್ಣ ತಾಯಿಯವರಿಂದ ದುಶ್ಚಟಗಳ ಭಿಕ್ಷಾಟನೆ

0
186

ಬೀದರ್: ಹಾರೂರಗೇರಿ ಗ್ರಾಮವು ಇದೀಗ ನಗರದ ಪ್ರತಿಷ್ಠಿತ ಬಡಾವಣೆ. ಸಾಮೂಹಿಕವಾಗಿ ಬಸವ ಜಯಂತಿ ಆಚರಣೆ ಆರಂಭಿಸಿದ ಕೀರ್ತಿ ಈ ಗ್ರಾಮಕ್ಕಿದೆ. ತಮ್ಮ ಹುಟ್ಟೂರಾದ ಹಾರೂರಗೇರಿಯನ್ನು ವ್ಯಸನಮುಕ್ತಗೊಳಿಸುವ ಸಂಕಲ್ಪದಿಂದ ಅಕ್ಕ ಅನ್ನಪೂರ್ಣತಾಯಿಯವರು ಇಂದು ಮುಂಜಾನೆ ಪಾದಯಾತ್ರೆಯ ಮೂಲಕ ಓಣಿ ಓಣಿ ಸುತ್ತಾಡಿ ಮನೆ ಮನೆಗೆ ತೆರಳಿ ದುಶ್ಚಟಗಳ ಬಿಕ್ಷೆ ಯಾಚಿಸಿದರು.

ಯುವಕರು ವ್ಯಸನಗಳಿಂದ ಹಾಳಾಗುತ್ತಿರುವುದು ಕಂಡು, ಮಹಿಳೆಯರು ಅನಾಥರಾಗುತ್ತಿರುವ ಪರಸ್ಥಿತಿಯನ್ನು ನೋಡಿ ಹಾರೂರಗೇರಿಯು ವ್ಯಸನಗಳಿಂದ ಮುಕ್ತವಾಗಿ ನೈತಿಕ, ಸಾಂಸ್ಕೃತಿಕ ವೈಭವಗಳಿಂದ ಮೆರೆಯುವಂತಾಗಬೇಕು ಎಂಬ ಕಳಕಳಿಯಿಂದ ಎರಡು ದಿನಗಳ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದ ಅಕ್ಕನವರು ದುಶ್ಚಟಗಳ ದುಷ್ಪರಿಣಾಮಗಳನ್ನು ವಿವರಿಸಿದರು. ತಾಯಿಯಾಗಿ, ಗುರುವಾಗಿ, ಸೋದರಿಯಾಗಿ ನಿಮ್ಮೆಲ್ಲರ ಹಿತೈಷಿಯಾಗಿ ಬೇಡಿಕೊಳ್ಳುತ್ತಿದ್ದೇನೆ. ನಿಮ್ಮೆಲ್ಲರ ದುಶ್ಚಟಗಳನ್ನು ನಿಮ್ಮಕ್ಕನ ಜೋಳಿಗೆಗೆ ಹಾಕಿ ನಿತಿವಂತರಾಗಿ ನಿಮ್ಮ ಕುಟುಂಬಕ್ಕೆ ಆಶ್ರಯದಾತರಾಗಿ ಎಂದು ಅಂಗಲಾಚಿದರು.

Contact Your\'s Advertisement; 9902492681

ಅಕ್ಕನವರ ಕರುಳಕರೆಗೆ ಇಡೀ ಹಾರೂರಗೇರಿಯೇ ಸ್ಪಂದಿಸಿತು. ಮುಂಜಾನೆ ಏಳು ಗಂಟೆಗೆ ಆರಂಭವಾದ ಪಾದಯಾತ್ರೆ ಐದುವರೆ ಗಂಟೆಗಳ ಕಾಲ ಮುಂದುವರೆಯಿತು. ಊರವರು ಸಾಲು ಸಾಲಾಗಿ ಬಂದು ಮದ್ಯಪಾನ, ಗುಟಕಾ, ತಂಬಾಕು ಸೇವನೆ, ಬೀಡಿ-ಸಿಗರೇಟು, ಇಸ್ಪೇಟ್ ಮುಂತಾದ ದುಶ್ಚಟ-ದುರ್ಗುಣಗಳನ್ನು ಚೀಟಿಯ ಮೇಲೆ ಬರೆದು ಅಕ್ಕನ ಜೋಳಿಗೆಗೆ ಹಾಕಿ ಪಾದಕ್ಕೆರಗಿ ವ್ಯಸನಮುಕ್ತರಾಗುತ್ತೇವೆಂದು ಪ್ರತಿಜ್ಞೆಗೈದರು. ವ್ಯಸನ ಮುಕ್ತ ಗೈದವರಿಗೆ ಅಕ್ಕನವರು ವಚನಗ್ರಂಥವನ್ನು ನೀಡಿ ಹೊಸ ಬದುಕಿಗೆ ಶುಭ ಹಾರೈಸುತ್ತಾ ಮುನ್ನಡೆಯುತ್ತಿರುವ ದೃಶ್ಯ ಹೃದಯಸ್ಪರ್ಶಿಯಾಗಿತ್ತು. ಅನೇಕ ಮನೆಗಳಲ್ಲಿ ರಾತ್ರಿ ಕುಡಿದ ಅಮಲಿನಲ್ಲಿಯೇ ಮಲಗಿದ್ದವರನ್ನು ಎಬ್ಬಿಸಿ ತಿಳಿಹೇಳಿ, ಜರಿದು, ಜಂಕಿಸಿ ಬುದ್ಧಿಹೇಳಿ, ವ್ಯಸನಮುಕ್ತರಾಗಲು ಪ್ರೇರಣೆ ನೀಡಿದರು.

ಎಷ್ಟೋ ವರ್ಷಗಳಿಂದ ಕುಡಿತಕ್ಕೆ ತುತ್ತಾಗಿದ್ದ ತಮ್ಮ ಮನೆಯವರು ಚಟ ಬಿಡುವ ಪ್ರತಿಜ್ಞೆ ಮಾಡುತ್ತಿದ್ದಂತೆ ಅನೇಕ ಮಹಿಳೆಯರು ಮತ್ತು ಮಕ್ಕಳು ಸಂತೋಷದಿಂದ ಕಣ್ಣೀರು ಗರೆದರು. ಮತ್ತೆ ಕೆಲವರು ಅಕ್ಕನವರನ್ನು ಅಪ್ಪಿಕೊಂಡು, ಮನಸಾರೆ ಅತ್ತರು. ಕುಡಿತಕ್ಕೆ ಬಲಿಯಾಗಿ ಸತ್ತವರನ್ನು ನೆನೆಸಿಕೊಂಡು ಅವರ ಮಡದಿಯವರು ಅಕ್ಕನವರು ಮೊದಲೇ ಬಂದಿದ್ದರೆ ಪರಸ್ಥಿತಿ ಬೇರೆಯಾಗಿರುತ್ತಿತ್ತು ಎಂದು ಬಿಕ್ಕಿ ಬಿಕ್ಕಿ ಅತ್ತರು.

ಚಿಕ್ಕ ಚಿಕ್ಕ ಮಕ್ಕಳು ಓಡೋಡಿ ಬಂದು “ನಮ್ಮ ಮನೆಗೆ ಬನ್ನಿ” ಎಂದು ಕರೆಯುತ್ತಾ ತಮ್ಮ ಕುಟುಂಬದ ಹಿರಿಯರ ದುಶ್ಚಟಗಳ ಬಗ್ಗೆ ವಿವರಿಸುತ್ತಿದ್ದ ದೃಶ್ಯ ಮನ ಕಲಕುವಂತಿತ್ತು. ಕೆಲವು ಕುಟುಂಬಗಳಲ್ಲಿ ಕುಡಿತದ ಚಟದಿಂದ ೩೭-೪೦ ವಯಸ್ಸಿನವರಾದರೂ ಮದುವೆಯಾಗದೇ ಇರುವುದು ಚಟಗಳ ಪರಿಣಾಮವನ್ನು ಸಾರುವಂತಿತ್ತು. ಅನೇಕ ಕುಟುಂಬಗಳ ದುಸ್ಥಿತಿಯನ್ನು ಕಂಡು ಅಕ್ಕನವರೂ ಕಣ್ಣೀರಿನ ಬಾಷ್ಪ ಸುರಿಸಿದರು. ನೂರಾರು ಜನರು ವ್ಯಸನ ಮುಕ್ತರಾಗಿ ಹೊಸ ಬದುಕನ್ನು ಆರಂಬಿಸಿದ್ದು, ಅವರ ಮುಖಗಳು ಹೊಸ ಹೊಸ ಕನಸುಗಳೊಂದಿಗೆ ಹೊಳೆಯುತ್ತಿದ್ದವು.

ಶ್ರೀ ಬಸವೇಶ್ವರ್ ದೇವಾಲಯದಲ್ಲಿ ವಿವಿಧ ಶರಣರ ಮೂರ್ತಿಗಳ ಅನಾವರಣ ನಿಮಿತ್ಯ ಜರುಗುತ್ತಿರುವ ಹತ್ತು ದಿನಗಳ ಪ್ರವಚನದ ನಿಮಿತ್ಯ ವ್ಯಸನಮುಕ್ತ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಸ್ಥಳೀಯ ಬಸವ ಸಮಿತಿಯು ಪೂರ್ಣ ಸಹಯೋಗ ನೀಡಿತು. ಬಸವ ಸಮಿತಿಯ ಅಧ್ಯಕ್ಷ ಬಸವರಾಜ್ ಪಾಟೀಲ್, ಬಸವರಾಜ್ ಅಮಾಜಿ, ವಿಶ್ವನಾಥ್ ಕಾಜಿ, ಗಣಪತಿ ಕೋಡಗೆ, ಚನ್ನಬಸವ ಹಂಗರಗಿ, ಜಗನ್ನಾಥ್ ಕಾಜಿ, ಪ್ರಭು ವಡ್ಡಿ, ಅರವಿಂದ್ ಕಾಜಿ, ನಾಗಶೆಟ್ಟಿ ಹೊಕರಾಣಿ, ಹಾವಶೆಟ್ಟಿ ಪಾಟೀಲ್, ಜಗನ್ನಾಥ್ ಚಿಮಕೋಡೆ ಮುಂತಾದ ಗಣ್ಯರು ಮತ್ತು ನೀಲಮ್ಮನ ಬಳಗದ ಸದಸ್ಯರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಪಾದಯಾತ್ರೆಯಲ್ಲಿ ಮಕ್ಕಳೂ ಸಹ ಉತ್ಸಾಹದಿಂದ ಭಾಗವಹಿಸಿದ್ದು ವಿಶೇಷವಾಗಿತ್ತು. ಹೆಜ್ಜೆ ಹೆಜ್ಜೆಗೆ ’ಅಕ್ಕನ ಜೋಳಿಗೆ – ಬೆಳಕು ನಮ್ಮ ಬಾಳಿಗೆ’ ಎಂಬ ಘೋಷಣೆಗಳು ಮುಗಿಲು ಮುಟ್ಟಿದ್ದವು. ಶ್ರೀ ಗುರುಬಸವಲಿಂಗಾ ನಮಃ ಮತ್ತು ವಚನ ಘೋಷಗಳೊಂದಿಗೆ ಶರಣ-ಶರಣೆಯರು ಪಾದಯಾತ್ರೆಯಲ್ಲಿ ಸಂಭ್ರಮ ಸಡಗರದಿಂದ ಸಾಗುತ್ತಿರುವುದು ಕಣ್ಮನ ಸೆಳೆಯುವಂತಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here