ಕಲಬುರಗಿ: ಸಾಲ ತೀರಿಸಲು ತವರು ಮನೆಯಿಂದ ಹಣ ತರುವಂತೆ ಕಿರುಕುಳ ಕೊಟ್ಟು ತನ್ನ ಪತ್ನಿಗೆ ನೇಣು ಹಾಕಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾಚಪ್ಪ ತಾಳಿಕೋಟಿ ಅವರು ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ನಗರದ ಶಹಾಬಜಾರ್‌ನ ಸ್ವಾದಿ ಗಲ್ಲಿಯ ನಿವಾಸಿ ನಾಗರಾಜ್ ಅಲಿಯಾಸ್ ನಾಗಣ್ಣ ತಂದೆ ಮಲ್ಲಿಕಾರ್ಜುನ್ ಹಂಗರಗಿ ಎಂಬಾತನೇ ಶಿಕ್ಷೆಗೆ ಒಳಗಾದ ಆರೋಪಿ. ಪತ್ನಿ ಅಂಬಿಕಾ ಉರ್ಫ್ ಕವಿತಾಳನ್ನು ಕೊಲೆ ಮಾಡಿದ ಆರೋಪಕ್ಕೆ ಒಳಗಾಗಿದ್ದ. ಈ ಕುರಿತು ಚೌಕ್ ಪೋಲಿಸ್ ಠಾಣೆಯ ಪಿಐ ಬಿ.ಬಿ. ಭಜಂತ್ರಿ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ ೧೦೦೦ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದರು. ದಂಡ ಕಟ್ಟಲು ತಪ್ಪಿದಲ್ಲಿ ಮತ್ತು ಮೂರು ತಿಂಗಳು ಸಾದಾ ಶಿಕ್ಷೆಯನ್ನು ಹಾಗೂ ಕಲಂ ೩೦೬ ಐಪಿಸಿ ಅಪರಾಧಕ್ಕೆ ಐದು ವರ್ಷಗಳ ಜೈಲು ಶಿಕ್ಷೆ ಹಾಗೂ ೫೦೦೦ರೂ.ಗಳ ದಂಡ ವಿಧಿಸಿದರು. ದಂಡ ಕಟ್ಟಲು ತಪ್ಪಿದಲ್ಲಿ ಮತ್ತೆ ಆರು ತಿಂಗಳು ಸಾದಾ ಶಿಕ್ಷೆ ವಿಧಿಸಿದರು. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಶ್ರೀಮತಿ ಅಂಜನಾ ಚವ್ಹಾಣ್ ಅವರು ವಾದ ಮಂಡಿಸಿದರು.