ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ ಕ್ರಮವನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ.
ಗುರುರಾಜ ಕರ್ಜಗಿ ಇವರು ಕೇವಲ ಜನಪ್ರಿಯ ಉಪನ್ಯಾಸಕರಾಗಿದ್ದು, ಶಿಕ್ಷಣ ತಜ್ಞರಾಗಿ ಕೆಲಸ ನಿರ್ವಹಿಸಿರುವ ನಿದರ್ಶನಗಳಿರುವುದಿಲ್ಲ. ಅವರು ನಂಬಿರುವ ಸಿದ್ಧಾಂತವು ಆರ್.ಎಸ್.ಎಸ್ ಪರವಾಗಿದ್ದು ಪ್ರಚಾರಪ್ರಿಯರಾಗಿರುತ್ತಾರೆ. ಕಲಬುರಗಿ ವಿಭಾಗದಲ್ಲಿ ಅನೇಕ ಶಿಕ್ಷಣ ತಜ್ಞರಿದ್ದಾರೆ. ಯಾವ ಮಾನದಂಡಗಳಿಂದ ಸದರಿಯವರನ್ನು ಆಯ್ಕೆ ಮಾಡಲಾಗಿದೆ ಎಂಬುದನ್ನು ಕೆ.ಕೆ.ಆರ್.ಡಿ.ಬಿ ಯ ಅಧ್ಯಕ್ಷರೆ ಸ್ಪಷ್ಟಪಡಿಸಬೇಕು ಎಂದು ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಸುಜಾತಾ ಒತ್ತಾಯಿಸಿದ್ದಾರೆ.
ಸಮಿತಿಯ ಅಧ್ಯಕ್ಷರನ್ನಾಗಿ ಮಾಡುವಾಗ ಕೆ.ಕೆ.ಆರ್.ಡಿ.ಬಿಯ ಅಧ್ಯಕ್ಷರ ಪೂರ್ವಾಪರ ಯೋಚಿಸದೆ ಕೈಗೊಂಡಿರುವ ಕ್ರಮವನ್ನು ಖಂಡಿಸಿ ತಕ್ಷಣ ಗುರುರಾಜ ಕರ್ಜಗಿ ಅವರನ್ನು ಸಮಿತಿಯಿಂದ ಕೈಬಿಡಬೇಕೆಂದು ಹಾಗೂ ಅನುಭವಿ ಶಿಕ್ಷಕರನ್ನು, ಚಿಂತಕರನ್ನು ಸಮಿತಿಯಲ್ಲಿ ಸೇರ್ಪಡೆಗೊಳಿಸಬೇಕೆಂದು ಸರ್ವೇಶ ಮಾವಿನಕರ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.