ಆರ್.ಟಿ.ಐ ಕಾಯ್ದೆ ಚೆನ್ನಾಗಿ ಓದಿದರೆ ಅರ್ಜಿಗೆ ಹೆದರಬೇಕಿಲ್ಲ: ರವೀಂದ್ರ ಡಾಕಪ್ಪ

0
92

ಕಲಬುರಗಿ ವಿಭಾಗ ಮಟ್ಟದ ಮಾಹಿತಿ ಹಕ್ಕು ಕಾರ್ಯಾಗಾರ

ಕಲಬುರಗಿ: ಸಾಮಾಜಿಕ ನ್ಯಾಯದ ತತ್ವದಡಿ ಜಾರಿಗೆ ತಂದಿರುವ ಮಾಹಿತಿ ಹಕ್ಕು ಕಾಯ್ದೆಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಸರಿಯಾಗಿ ಓದಿ ಅರ್ಥೈಸಿಕೊಂಡಿದಲ್ಲಿ ಆರ್.ಟಿ.ಐ. ಅರ್ಜಿಗಳಿಗೆ ಹೆದರುವ ಅವಶ್ಯಕತೆ ಇಲ್ಲ ಎಂದು ರಾಜ್ಯ ಮಾಹಿತಿ ಆಯೋಗದ ಕಲಬುರಗಿ ಪೀಠದ ಆಯುಕ್ತ ರವೀಂದ್ರ ಡಾಕಪ್ಪ ಹೇಳಿದರು.

ಮಾಹಿತಿ ಹಕ್ಕು ದಿನಾಚರಣೆ ಅಂಗವಾಗಿ ರಾಜ್ಯ ಮಹಾತಿ ಹಕ್ಕು ಆಯೋಗ ಹಾಗೂ ಕಲಬುರಗಿ ಜಿಲ್ಲಾಡಳಿತ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲಬುರಗಿ ವಿಭಾಗ ಮಟ್ಟದ ಅಧಿಕಾರಿ-ಸಿಬ್ಬಂದಿಗಳಿಗೆ ಆಯೋಜಿಸಿದ ಮಾಹಿತಿ ಹಕ್ಕು ಕಾಯ್ದೆ-2005ರ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಸಾರ್ವಜನಿಕ ಮಾಹಿತಿ ಪ್ರಾಧಿಕಾರಿಗಳು ಮತ್ತು ವಿಷಯ ನಿರ್ವಾಹಕರು ನಮೂನೆ 6(1) ಅರ್ಜಿಯಲ್ಲಿ ಅರ್ಜಿದಾರ ಕೋರಿರುವ ಮಾಹಿತಿಯನ್ನು ಮೊದಲು ಸರಿಯಾಗಿ ಅರ್ಥೈಸಿಕೊಳ್ಳಬೇಕು. ನಿಯಮಾವಳಿಯಂತೆ ಕಚೇರಿಯಲ್ಲಿ ಮಾಹಿತಿ ಲಭ್ಯವಿದ್ದರೆ ನೀಡಬೇಕು. ಇಲ್ಲದಿದ್ದರೆ ಮಾಹಿತಿ ಲಭ್ಯವಿರುವುದಿಲ್ಲ ಎಂದು ಹಿಂಬರಹ ನೀಡಬೇಕು ಅಥವಾ ಯಾವ ಪ್ರಾದಿಕಾರದಡಿ ಮಾಹಿತಿ ಲಭ್ಯವಿದಿಯೋ ಆ ಪ್ರಾಧಿಕಾರಕ್ಕೆ ಒಂದು ಬಾರಿಗೆ ಮಾತ್ರ 6(3) ಅನ್ವಯ ಅರ್ಜಿ ಸ್ವೀಕೃತ 5 ದಿನದಲ್ಲಿ ವರ್ಗಾವಣೆ ಮಾಡಬೇಕು. ಕಚೇರಿಯಲ್ಲಿಲ್ಲದ ಮಾಹಿತಿಯನ್ನು ವಿವಿಧ ಪ್ರಾಧಿಕಾರದಿಂದ ಕ್ರೋಢಿಕರಿಸಿ ನೀಡುವ ಅವಶ್ಯಕತೆ ಇಲ್ಲ ಎಂದರು.

ಯಾವುದೆ ಸಾರ್ವಜನಿಕ ಪ್ರಾಧಿಕಾರವು ಅರ್ಜಿ ಸ್ವೀಕೃತ ದಿನಾಂಕದಿಂದ 30 ದಿನದಲ್ಲಿ ಅರ್ಜಿದಾರರಿಗೆ ಮಾಹಿತಿ ನೀಡಬೇಕು. ಮಾಹಿತಿ ನಿಡುವ ಮುನ್ನ ಪ್ರತಿ ಪುಟದ ಮಾಹಿತಿಗೆ 2 ರೂ. ಶುಲ್ಕ ಪಾವತಿಸಿವಂತೆ ಅರ್ಜಿದಾರರಿಗೆ ಪತ್ರ ಬರೆಯಬೇಕು. ಕಚೇರಿಯಿಂದ ರವಾನೆಯಾದ ದಿನಾಂಕದಿಂದ 90 ದಿನದೊಳಗೆ ಅರ್ಜಿದಾರ ಶುಲ್ಕ ಕಟ್ಟದಿದ್ದಲ್ಲಿ ಸದರಿ ಪ್ರಕರಣ ಅಲ್ಲಿಗೆ ಮುಕ್ತಾಯವಾದಂತೆ ಎಂದೇ ಭಾವಿಸಬೇಕು ಎಂದ ಅವರು ಅರ್ಜಿದಾರರಿಗೆ ಪತ್ರ ವ್ಯವಹಾರ ಮಾಡುವಾಗ ಖುದ್ದಾಗಿ ಅಥವಾ ಆರ್.ಪಿ.ಎ.ಡಿ ಅಂಚೆ ಮೂಲಕವೇ ವ್ಯವಹರಿಸಬೇಕು ಎಂದರು.

ಸಾರ್ವಜನಿಕ ಮಾಹಿತಿ ಅಧಿಕಾರಿಗಳು 30 ದಿನದೊಳಗೆ ಅರ್ಜಿದಾರರಿಗೆ ಮಾಹಿತಿ ನೀಡದಿದ್ದಲ್ಲಿ ಅಥವಾ ನೀಡಿದ ಮಾಹಿತಿ ಅರ್ಜಿದಾರನಿಗೆ ಸಮಂಜಸ ಎನಿಸದಿದ್ದಲ್ಲಿ ಅರ್ಜಿದಾರ 30 ದಿನದ ಅವಧಿಯಲ್ಲಿ ಪ್ರಥಮ ಮೇಲ್ಮನವಿಗೆ ಹೋಗಬಹುದು. ಪ್ರಥಮ ಮೇಲ್ಮನವಿ ಪ್ರಾಧಿಕಾರವು ಗರಿಷ್ಠ 45 ದಿನದಲ್ಲಿ ಅರ್ಜಿದಾರರನ್ನು ಮತ್ತು ಪಿ.ಐ.ಓ ಅಧಿಕಾರಿಗಳನ್ನು ವಿಚಾರಣೆಗೆ ಕರೆಸಿ ಅಥವಾ ವಿಚಾರಣೆ ದಿನದಂದು ಅವರಿಬ್ಬರು ಗೈರಾದಲ್ಲಿ ಲಭ್ಯ ದಾಖಲೆ ಮೇಲೆ ಸೂಕ್ತ ತೀರ್ಮಾನ ತೆಗೆದುಕೊಳ್ಳಬಹುದು. ಇಬ್ಬರಲ್ಲಿ ಯಾರೊಬ್ಬರು ಗೈರಾದಲ್ಲಿ ಪುನಃ ವಿಚಾರಣೆ ದಿನಾಂಕ ನಿಗದಿಪಡಿಸುವ ಅವಶ್ಯಕತೆ ಇಲ್ಲ ಎಂದು ರವೀಂದ್ರ ಡಾಕಪ್ಪ ಸ್ಪಷ್ಟಪಡಿಸಿದರು.

ವೈಯಕ್ತಿಕ ಮಾಹಿತಿ ನೀಡುವಂತಿಲ್ಲ: ಮೂಲ ಕಾಯ್ದೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವುದಿದ್ದರೆ ವೈಯಕ್ತಿಕ ಮಾಹಿತಿ ನೀಡಲು ಅವಕಾಶ ನೀಡಲಾಗಿತ್ತು. 2023ರಲ್ಲಿ ಡಿ.ಪಿ.ಡಿ‌.ಪಿ ಕಾಯ್ದೆಯ ಸೆಕ್ಷನ್ 24ರಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಯಾವುದೇ ಸರ್ಕಾರಿ ನೌಕರನ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮೊಬೈಲ್ ಸಂಖ್ಯೆ, ಇಮೇಲ್‌ ವಿಳಾಸ, ವೇತನ, ಸೇವಾ ವಹಿ, ಹಾಜರಾತಿ, ಬಯೋಮೆಟ್ರಿಕ್, ಸಿ.ಸಿ.ಟಿ.ವಿ. ಫೂಟೇಜ್, ಚರಾಸ್ಥಿ-ಸ್ಥಿರಾಸ್ತಿ, ಶಿಸ್ತು ಕ್ರಮದ ಪತ್ರ ವ್ಯವಹಾರಗಳು ಸೇರಿದಂತೆ ವೈಯಕ್ತಿಕ ಮಾಹಿತಿ ಅರ್ಜಿದಾರರಿಗೆ ನೀಡುವಂತಿಲ್ಲ. ಸೆಕ್ಷನ್ 8(ಜೆ) ಅನ್ವಯ ತಿರಸ್ಕರಿಸಬಹುದಾಗಿದೆ. ಇದಲ್ಲದೆ ನ್ಯಾಯಾಂಗ ನಿಂದನೆ ಹಾಗೂ ಇನ್ನಿತರ ಪ್ರಕರಣಗಳಲ್ಲಿ ಮಾಹಿತಿ ನೀಡುವುದರಿಂದ ವಿನಾಯಿತಿ ಇದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ಮಾತನಾಡಿ ಪ್ರತಿ ಸಾರ್ವಜನಿಕ ಮಾಹಿತಿ ಪ್ರಾಧಿಕಾರ ಕಚೇರಿಯಲ್ಲಿ ಇಲಾಖಾ ಅಥವಾ ಕಚೇರಿ ಕೈಪಿಡಿ ಪ್ರಕಾರ ಕಡತಗಳನ್ನು ವರ್ಗಿಕರಿಸಿಟ್ಟುಕೊಂಡು ಅವುಗಳ ಕಾಲಾವಧಿ ನಂತರ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು ಕಡತ ನಾಶ ಮಾಡಿದಲ್ಲಿ 10-20 ವರ್ಷಗಳ ಹಿಂದಿನ ದಾಖಲೆ, ಮಾಹಿತಿ ಕೋರಿ ಸಲ್ಲಿಕೆಯಾಗುವ ಅರ್ಜಿಗೆ ಕಾನೂನಿನ ಪ್ರಕಾರವೇ ಉತ್ತರ ನೀಡಬಹುದಾಗಿದೆ ಎಂದರು.

ಪಿ.ಐ.ಓ ಮತ್ತು ಸಿಬ್ಬಂದಿಗಳ ಕಾಯ್ದೆ ಕುರಿತ ನೂರಾರು ಪ್ರಶ್ನೆಗಳಿಗೆ ರಾಜ್ಯ ಮಾಹಿತಿ ಆಯೋಗದ ಕಲಬುರಗಿ ಪೀಠದ ಆಯುಕ್ತ ರವಿಂದ್ರ ಧಾಕಪ್ಪ ಅವರು ತಾಳ್ಮೆಯಿಂದ ಉದಾಹರಣೆ ಸಮೇತ ಉತ್ತರ ನೀಡುವ ಮೂಲಕ ಸಂದೇಹಗಳನ್ನು ನಿವಾರಿಸಿದರು.

ಕಾರ್ಯಾಗಾರದಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರು ಕಾಯ್ದೆಯ ಸೆಕ್ಷನ್ 7(1), ಜೆಸ್ಕಾಂ ಮಾನವ
ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಆಶಪ್ಪ ಅವರು ಸೆಕ್ಷನ್ 7(2), ಕೆ.ಕೆ.ಆರ್.ಡಿ.ಬಿ. ಅಧೀನ ಕಾರ್ಯದರ್ಶಿ ಪ್ರಕಾಶ ಕುದರಿ ಅವರು ಸೆಕ್ಷನ್ 6(1), ಅಳಂದ ತಾಲೂಕ ಪಂಚಾಯತ್ ಇ.ಓ ಮಾನಪ್ಪ ಅವರು ಸೆಕ್ಷನ್ 6(3), ಎಸ್.ಪಿ. ಕಚೇರಿಯ ಎ.ಎ.ಓ ಮಲ್ಲಿಕಾರ್ಜುನ ಸುಗೂರ ಅವರು ಸೆಕ್ಷನ್ 8, ಕಲಬುರಗಿ‌ ಮಹಾನಗರ ಪಾಲಿಕೆಯ ಎಸ್ಟೇಟ್ ಅಧಿಕಾರಿ ಸಾವಿತ್ರಿ ಸಲಗರ್ ಅವರು ಸೆಕ್ಷನ್ 19(1), ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಮೀಹನ ಹಂಚಾಟೆ ಅವರು ಸೆಕ್ಷನ್ 20(1), ಜಿಲ್ಲಾ ಮಾಲಿನ್ಯ ನಿಯಂತ್ರಣಾಧಿಕಾರಿ ಸೋಮಶೇಖರ ಅವರು ಸೆಕ್ಷನ್ 20(2) ಹಾಗೂ ಕೆ.ಕೆ.ಆರ್.ಟಿ.ಸಿ ಕೇಂದ್ರ ಕಚೇರಿಯ ಮುಖ್ಯ ಕಾನೂನು ಅಧಿಕಾರಿ ಎಸ್.ಡಿ.ಭಾವಿಕಟ್ಟಿ ಮತ್ತು ಮಹಾಂತೇಶ ಅವರು ಸೆಕ್ಷನ್ 4(1) ಎ ಮತ್ತು ಬಿ ಕುರಿತು ಸವಿಸ್ತಾರವಾಗಿ ವಿವರಣೆ ನೀಡಿದರು.

ಕಾರ್ಯಾಗಾರದಲ್ಲಿ ಹೆಚ್ಚುವರಿ ಎಸ್.ಪಿ. ಶ್ರೀನಿಧಿ, ನಗರ ಪೊಲೀಸ್ ಉಪ ಆಯುಕ್ತ ಪ್ರವೀಣ ಎಚ್. ನಾಯಕ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಣ್ಮಣ ಶೃಂಗೇರಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಉಳಿದಂತೆ ವಿಭಾಗದ ಉಳಿದ ಜಿಲ್ಲೆಗಳ ಅಧಿಕಾರಿಗಳು ಅಯಾ ಜಿಲ್ಲೆಯಿಂದ ವಿಡಿಯೋ ಕಾನ್ಫೆರೆನ್ಸ್ ಮೂಲಕ ಹಾಜರಾಗಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here