ಚಿಂಚೋಳಿಯ ಸಿದ್ದಸಿರಿ ಎಥೆನಾಲ್‌ ಕಾರ್ಖಾನೆ ಸ್ಥಗಿತ ಹಿನ್ನೆಲೆ: ಬೇರೆ ಕಾರ್ಖಾನೆಗೆ ಕಬ್ಬು ಹಂಚಿಕೆ‌ ಮಾಡಿ ಡಿ.ಸಿ ಆದೇಶ

0
46

ಕಲಬುರಗಿ: ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿರುವ ಮೆ. ಸಿದ್ದಸಿರಿ ಸೌಹಾರ್ದ ಸಹಕಾರಿ ನಿಯಮಿತ ಎಥೆನಾಲ್ ಕಾರ್ಖಾನೆಯು ಸ್ಥಗಿತಗೊಂಡಿದ್ದರಿಂದ ರೈತರ ಹಿತದೃಷ್ಠಿಯಿಂದ ಪ್ರಸಕ್ತ 2024-25ನೇ ಸಾಲಿನ‌ ಹಂಗಾಮಿಗೆ ಸೀಮಿತವಾಗಿ ಸದರಿ ಕಾರ್ಖಾನೆ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ಬೆಳೆಯಲಾದ ಕಬ್ಬನ್ನು ಸಮೀಪದ ಇತರೆ ಕಾರ್ಖಾನೆಗಳಿಗೆ ಮಾರಾಟ ಮಾಡಲು ತಾತ್ಕಲಿಕವಾಗಿ ಹಂಚಿಕೆ ಮಾಡಿ ಜಿಲ್ಲಾಧಿಕಾರಿ‌ ಬಿ.ಫೌಜಿಯಾ ತರನ್ನುಮ್ ಆದೇಶಿಸಿದ್ದಾರೆ.

ಮೆ.ಸಿದ್ದಸಿರಿ ಕಾರ್ಖಾನೆಗೆ ಹಂಚಿಕೆ ಮಾಡಲಾಗಿದ್ದ ಚಿಂಚೋಳಿ ಮತ್ತು ಕಾಳಗಿ ತಾಲೂಕಿನ 111, ಚಿತ್ತಾಪೂರ ತಾಲೂಕಿನ 77 ಹಾಗೂ ಸೇಡಂ ತಾಲೂಕಿನ 112 ಗ್ರಾಮಗಳು ಸೇರಿ ಒಟ್ಟು 300 ಗ್ರಾಮಗಳಲ್ಲಿ ರೈತರು ಬೆಳೆದ ಕಬ್ಬನ್ನು ಜಿಲ್ಲೆಯ ಅಫಜಲಪೂರ ತಾಲೂಕಿನ ಚಿಣಮಗೇರಾದ ಕೆ.ಪಿ.ಆರ್. ಶುಗರ್ ಆ್ಯಂಡ್ ಅಪರೇಲ್ಸ್ ಲಿ. ಸಕ್ಕರೆ ಕಾರ್ಖಾನೆಗೆ 189 ಗ್ರಾಮ ಹಾಗೂ ನೆರೆಯ ಬೀದರ ತಾಲೂಕಿನ ಮಲ್ಲೂರು ಕಿಸಾನ್ ಸಕ್ಕರೆ ಕಾರ್ಖಾನೆಗೆ 111 ಗ್ರಾಮಗಳನ್ನು ಪ್ರಸಕ್ತ ಹಂಗಾಮಿಗೆ ಸೀಮಿತವಾಗಿ ಹಂಚಿಕೆ ಮಾಡಿ ಆದೇಶಿಸಲಾಗಿದೆ.

Contact Your\'s Advertisement; 9902492681

ಹೀಗಾಗಿ ಜಿಲ್ಲೆಯ ಚಿಂಚೋಳಿ, ಕಾಳಗಿ, ಸೇಡಂ ಮತ್ತು ಚಿತ್ತಾಪೂರ ತಾಲೂಕುಗಳ ಕಬ್ಬು ಬೆಳೆಗಾರರು ಹಂಚಿಕೆಯಂತೆ ಸಂಬಂಧಿಸಿದ ಸಕ್ಕರೆ ಕಾರ್ಖಾನೆಗಳಿಗೆ ತಾವು ಬೆಳೆದ ಕಬ್ಬನ್ನು ಮಾರಾಟ ಮಾಡಬಹುದಾಗಿದೆ ಎಂದು ಡಿ.ಸಿ. ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಇದಲ್ಲದೆ ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಿಂದ ಹಂಚಿಕೆ ಮಾಡಲಾದ ಸಕ್ಕರೆ ಕಾರ್ಖಾನೆಗಳ ಮೀಸಲು ಪ್ರದೇಶದಿಂದ ಬೇರೆ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಬೆಳೆಗಾರರು ಕಬ್ಬು ಸಾಗಾಣಿಕೆ ಮಾಡಲು ಇಚ್ಛಿಸಿದಲ್ಲಿ ನಿಗಧಿತ ನಮೂನೆ-2 ರಲ್ಲಿ ವಿವರಗಳೊಂದಿಗೆ 100 ರೂ. ಗಳ ಭದ್ರತಾ ಠೇವಣಿ ಹಾಗೂ ನಿಗಧಿತ ಶುಲ್ಕ 5 ರೂ. ಗಳನ್ನು ಲೆಕ್ಕ ಶೀರ್ಷಿಕೆ 0070-6-8000-3-04-000 ಗೆ ಸಂದಾಯ ಮಾಡಿ ಸಂಬಂಧಪಟ್ಟ ಕಲಬುರಗಿ ಮತ್ತು ಸೇಡಂ ಉಪ-ವಿಭಾಗಗಳ ಸಹಾಯಕ ಆಯುಕ್ತರುಗಳಿಗೆ ಅರ್ಜಿ ಸಲ್ಲಿಸಿ ಕಬ್ಬು ಸಾಗಾಣಿಕೆ ಪರವಾನಗಿ ಪಡೆಯಬಹುದಾಗಿದೆ.

ಇನ್ನು ಕಾರ್ಖಾನೆವಾರು ಹಂಚಿಕೆ ಮಾಡಲಾದ ಗ್ರಾಮಗಳ ವಿವರವನ್ನು ತಹಶೀಲ್ದಾರ ಕಚೇರಿ, ನಾಡ ಕಚೇರಿ, ಗ್ರಾಮ‌ ಪಂಚಾಯತ್ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ವೀಕ್ಷಿಸಬಹುದಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here