ಕಲಬುರಗಿ : ಸಮಾಜ ಬದಲಾಗದ ಹೊರತು ಭ್ರಷ್ಟಾಚಾರ ನಿರ್ಮೂಲನೆ ಅಸಾಧ್ಯ: ನ್ಯಾ.ಬಿ.ವೀರಪ್ಪ

0
29

ಸುಳ್ಳು ದೂರು ಕೊಟ್ಟಲ್ಲಿ 3 ವರ್ಷ ಜೈಲು ಶಿಕ್ಷೆ

ಕಲಬುರಗಿ: ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಭ್ರಷ್ಟಾಚಾರವನ್ನು ಬುಡ ಸಮೇತ ಕಿತ್ತೊಗೆಯಬೇಕಾದರೆ ಜನ ಬದಲಾಗಬೇಕಿದೆ. ಜನ ಬದಲಾಗದ ಹೊರತು ಇದರ ನಿರ್ಮೂಲನೆ ಅಸಾಧ್ಯ ಎಂದು ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ನ್ಯಾ.ಬಿ.ವೀರಪ್ಪ ಅಭಿಪ್ರಾಯಪಟ್ಟರು.

ಶುಕ್ರವಾರ ಕಲಬುರಗಿ ನಗರದ ಡಾ.ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆ ಮತು ಕಲಬುರಗಿ ಜಿಲ್ಲಾಡಳಿತ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಸಾರ್ವಜನಿಕ ಕುಂದುಕೊರತೆಗಳ ಅಹವಾಲು ಸ್ವೀಕಾರ ಮತ್ತು ವಿಚಾರಣೆ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಮತ್ತು ಅಧಿಕಾರಿ-ಸಿಬ್ಬಂದಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ದೇಶದ 130 ಕೋಟಿ ಜನಸಂಖ್ಯೆಯಲ್ಲಿ ಶೇ.10ರಷ್ಟು ಜನ ಪ್ರಾಮಾಣಿಕವಾಗಿ ಬದುಕುತ್ತಿರುವುದರಿಂದ ಮಳೆ-ಬೆಳೆ ಚೆನ್ನಾಗಾಗುತ್ತಿದೆ. ಬ್ರಿಟೀಷರು ದೇಶ ಬಿಟ್ಟು ಹೋಗುವ ಮುನ್ನ ಡಿವೈಡ್ & ರೂಲ್ ನೀತಿ ಇಲ್ಲಿಯೇ ಬಿಟ್ಟು ಹೋಗಿದ್ದಾರೆ. ಇದನ್ನೆ ಕೆಲ ವಿದ್ಯಾವಂತರು ಬಂಡವಾಳ ಮಾಡಿಕೊಂಡು ಬದುಕುತ್ತಿದ್ದಾರೆ. ಮುಂದೆ ದೇಶಕ್ಕೆ ಏನಾದರು ಕಂಟಕವಾದರೆ ಇಂತಹ ಮೀರ್ ಸಾಧಕರಾಗಿರುವ ವಿದ್ಯಾವಂತರಿಂದಲೆ ಹೊರತು ಅವಿದ್ಯಾವಂತರಿಂದಲ್ಲ ಎಂದರು.

ಎಲ್ಲಿಯವರೆಗೆ ದುಡ್ಡು ಕೊಡುವವರು ಇರುತ್ತಾರೋ, ಅಲ್ಲಿಯವರೆಗೆ ತೆಗೆದುಕೊಳ್ಳುವವರು ಇರುತ್ತಾರೆ. ಹೀಗಾಗಿ ಸರ್ಕಾರಿ ಕೆಲಸಕ್ಕೆ ಸಾರ್ವಜನಿಕರು ದುಡ್ಡು ಕೊಡಬಾರದು ಎಂದು ಮನವಿ ಮಾಡಿದ ಅವರು ತಾವು ವಕೀಲ ವೃತ್ತಿ ಆರಂಭದ ಪೂರ್ವ ಪಿ.ಎಸ್.ಐ. ಹುದ್ದೆಗೆ ಅರ್ಜಿ ಸಲ್ಲಿಸಿದಾಗ ನೇಮಕಾತಿ ಸಂದರ್ಭದಲ್ಲಿ 70 ಸಾವಿರ ರೂ. ಲಂಚ ಕೇಳಿದಕ್ಕೆ ಅದನ್ನು ದಿಕ್ಕರಿಸಿ ವಕೀಲ ವೃತ್ತಿ ಆಯ್ದುಕೊಂಡೆ. ಮುಂದೆ ಹೈಕೋರ್ಟ್ ನ್ಯಾಯಾಧೀಶ, ಇದೀಗ ಉಪ ಲೋಕಾಯುಕ್ತನಾಗಿದ್ದೇನೆ ಎಂದರು.

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರಸ್ತುತ ಶಾಸಕಾಂಗ, ಕಾರ್ಯಾಂಗ ನಿಶಕ್ತವಾಗಿದೆ. ನ್ಯಾಯಾಂಗ, ಪತ್ರಿಕಾ ರಂಗದ ಮೇಲೆ ಜನರ ಅಲ್ಪಸ್ವಲ್ಪ ವಿಶ್ವಾಸ ಉಳಿದುಕೊಂಡಿದೆ. ಇತ್ತೀಚೆಗೆ ಸರ್ಕಾರದ ನಾಲ್ಕನೇ ಅಂಗ ಎಂದು ಕರೆಸಿಕೊಳ್ಳುವ ಮಾಧ್ಯಮ ಅಂಗವು ನಿಶಕ್ತವಾಗಿದೆ ಎಂದು ಬೇಸರದಿಂದ ನುಡಿದ ಅವರು, ಕತ್ತಿಗ್ಗಿಂತ ಲೇಖನಿ ಹರಿತವಾಗಿದೆ. ಪತ್ರರ್ಕತರು ಸಮಾಜ ತಿದ್ದುವ ಕೆಲಸ ಮಾಡಬೇಕಿದೆ. ಭ್ರಷ್ಟಾಚಾರ ವಿರುದ್ಧ ಜನರ ಧ್ವನಿಗೆ ಬಲ ನೀಡಬೇಕಿದೆ. ಸ್ವಾತಂತ್ರ್ಯ ಬಂದು 78 ವರ್ಷವಾದರು ಇನ್ನು ನಮ್ಮ ಹಕ್ಕಿಗಾಗಿ ಹೋರಾಟ ಮಾಡುವ ತಾಪತ್ರಯ ತಪ್ಪಿಲ್ಲ ಎಂದರು.

ಇಂದು ಕಲಬುರಗಿ ನಗರದ ಸೂಪರ್ ಮಾರ್ಕೆಟ್ ಪ್ರದೇಶಕ್ಕೆ ಭೇಟಿ ನೀಡಿದಾಗ ಅಲ್ಲಲ್ಲಿ ಕಸದ ರಾಶಿ ಕಂಡುಬಂತು. ಕಸವನ್ನು ಸಂಗ್ರಹಿಸಿ ಪಾಲಿಕೆ ವಾಹನಕ್ಕೆ ನೀಡಬೇಕಾದ ನಾವು ಅಲ್ಲಲ್ಲಿ ಬಿಸಾಡಿ ಪರಿಸರ ಮಾಲಿನ್ಯಕ್ಕೆ ಕಾರಣರಾಗುತ್ತೇವೆ. ಮುಂದೆ ಮಳೆ ಬಂದಲ್ಲಿ ಇದೇ ಕಸ, ಚರಂಡಿ ಮೂಲಕ ನದಿಗೆ ಸೇರಿ ಕುಡಿಯುವ ನೀರಿನಲ್ಲಿ ಬೆರೆಯುತ್ತದೆ ಎಂಬ ಅರಿವು ನಮಗಿರಬೇಕಿದೆ. ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಜನರ ಮನಸ್ಥಿತಿ ಬದಲಾಗಬೇಕಿದೆ. ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ. ಪರಿಸರವಿಲ್ಲದೆ ನಮ್ಮ ಉಳಿಗಾಲವಿಲ್ಲ ಎಂಬುದನ್ನು ನಾವೆಲ್ಲರು ಅರಿಯಬೇಕಿದೆ ಎಂದರು.

ಬಹಳಷ್ಟು ಕಡೆ ಆಸ್ಪತ್ರೆಗಳಿಗೆ ಭೇಟಿ ನೀಡಿದಾಗ ಸಾಮಾನ್ಯ ಹೆರಿಗೆ ಪರಿಸ್ಥಿಯಲ್ಲಿಯೂ ಸೀಸರಿಂಗ್ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗೆ ಉಚಿತ ಚಿಕಿತ್ಸೆ ಮತ್ತು ಔಷದೋಪಚಾರ ನೀಡಬೇಕಾಗಿರುವುದು ಪ್ರತಿ ಆರೋಗ್ಯ ಸಂಸ್ಥೆ ಜವಾಬ್ದಾರಿಯಾಗಿದೆ. ಆಸ್ಪತ್ರೆಯಲ್ಲಿ ಮಾತ್ರೆ, ಔಷಧಿ ಇಲ್ಲದಿದ್ದರೆ ಹೊರಗಡೆಯಿಂದ ಖರೀದಿಸಿ ರೋಗಿಗೆ ನೀಡಲು ಪ್ರತಿ ತಿಂಗಳಿಗೆ 25 ಸಾವಿರ ರೂ. ಸರ್ಕಾರ ನೀಡುತ್ತಿದ್ದರು,

ವೈದ್ಯರು ಅನಾವಶ್ಯಕ ರೋಗಿಗಳಿಗೆ ಚೀಟಿ ಬರೆದು ಹೊರಗಡೆಯಿಂದ ಮಾತ್ರ, ಇಂಜೆಕ್ಷನ್ ತರಿಸಿಕೊಳ್ಳುತ್ತಿರುವುದು ದುರಾದೃಷ್ಠಕರ. ಸಾರ್ವಜನಿಕರು ಯಾರು ಹೊರಗಡೆಯಿಂದ ಮಾತ್ರೆ, ಔಷಧಿ ತರಬೇಕಿಲ್ಲ. ಈ ಸಂಬಂಧ ಜಿಲ್ಲೆಯ ಪ್ರತಿ ಆಸ್ಪತ್ರೆಗೆ ಸುತ್ತೋಲೆ ಹೊರಡಿಸುವಂತೆ ಡಿ.ಎಚ್.ಓ. ಡಾ.ಶರಣಬಸಪ್ಪ ಖ್ಯಾತನಾಳ ಅವರಿಗೆ ಉಪ ಲೋಕಾಯುಕ್ತರು ಸೂಚನೆ ನೀಡಿದರು.

ಸುಳ್ಳು ಕೇಸ್ ದಾಖಲಿಸಿದರೆ ಜೈಲು ಶಿಕ್ಷೆ: ರಾಜ್ಯದ ಲೋಕಾಯುಕ್ತ ಸಂಸ್ಥೆಯಲ್ಲಿ ಸುಮಾರು 20 ಸಾವಿರ ಪ್ರಕರಣಗಳು ಬಾಕಿ ಇವೆ. ಇದರಲ್ಲಿ ಸರಿ ಸುಮಾರು 7 ಸಾವಿರ ಪ್ರಕರಣಗಳು ಅಧಿಕಾರಿ-ಸಿಬ್ಬಂದಿಗಳ ಮೇಲೆ ದುರುದ್ದೇಶವಾಗಿ ಸುಳ್ಳು ಪ್ರಕರಣ ದಾಖಲಿಸಿ ನೌಕರರ ನೈತಿಕತೆಗೆ ಕುಂದು ತರುವ ಕೆಲಸ ಕೆಲವರು ಮಾಡುತ್ತಿದ್ದಾರೆ. ಸುಳ್ಳು ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ಅದರ ಸುತ್ತನೆ ನಾವು ಸುತ್ತುತ್ತಿರುವುದರಿಂದ ಅನ್ಯಾಯಕ್ಕೊಳಗಾದ ನಿಜವಾದ ಸಂತ್ರಸ್ತರ ಪ್ರಕರಣಗಳನ್ನು ನಿಯಮಿತವಾಗಿ ವಿಚಾರಣೆ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಂಸ್ಥೆ ಮುಂದಾಗಿದ್ದು, ಇನ್ನು ಮುಂದೆ ಸರ್ಕಾರಿ ನೌಕರರ ಮೇಲೆ ಯಾರೇ ಸುಳ್ಳು ಪ್ರಕರಣ ದಾಖಲಿಸಿದ್ದಲ್ಲಿ ಅಂತಹ ದೂರುದಾರರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಭ್ರಷ್ಟಾಚಾರ ವಿರುದ್ಧ ಸಮರ ಸಾರಿ: ಇಂದು ಅಂಗನವಾಡಿಯಲ್ಲಿ ಮಕ್ಕಳಿಗೆ ಮೊಟ್ಟೆ ವಿತರಣೆಯಲ್ಲಿ ಭ್ರಷ್ಟಾಚಾರ. ಶಿಕ್ಷಕರು ಶಾಲೆಗೆ ಸರಿಯಾಗಿ ಹೋಗಿ ಪಾಠ ಮಾಡಲ್ಲ. ವೈದ್ಯರು ಸರಿಯಾಗಿ ಆಸ್ಪತ್ರೆಗೆ ಬರಲ್ಲ. ಸ್ಥಳೀಯ ಸಂಸ್ಥೆ ಅಧಿಕಾರಿಗಳು ಊರು ಸ್ವಚ್ಛತೆಗೆ ಗಮನಹರಿಸಲ್ಲ. ಅಂಕ ಪಟ್ಟಿ, ಫಲಿತಾಂಶ ಘೋಷಣೆಗೆ ಲಂಚದ ಬೇಡಿಕೆ ಇಂತಹ ದಿನಂಪ್ರತಿ ನೂರಾರು ಪ್ರಕರಣಗಳನ್ನು ನೋಡುತ್ತಿದ್ದೇವೆ. ಜವಾಬ್ದಾರಿಯುತ ಅಧಿಕಾರಿ-ನೌಕರರು ತಮ್ಮ ತಮ್ಮ ಕೆಲಸಗಳನ್ನು ಪ್ರಮಾಣಿಕ ರೀತಿಯಲ್ಲಿ ಮಾಡಿದಲ್ಲಿ ಲೋಕಾಯುಕ್ತ ಸಂಸ್ಥೆ ಏಕೆ ಬೇಕು ಎಂದು ಪ್ರಶ್ನಿಸಿದ ಉಪ ಲೋಕಾಯುಕ್ತ ಬಿ. ವೀರಪ್ಪ ಅವರು, ಭ್ರಷ್ಟಾಚಾರ ವಿರುದ್ಧ ಯುವ ಜನತೆ ಸಮರ ಸಾರಬೇಕಿದೆ ಎಂದರು.

ಪೊಲೀಸರೆ ತಲೆ ತಗ್ಗಸಬೇಡಿ: ದೇಶಕ್ಕೆ ಬಾಹ್ಯ ಶತ್ರು ನಿಗ್ರಹಿಸಲು ಯೋಧ ಪಾತ್ರದಷ್ಟೆ ದೇಶದೊಳಗಿನ ಆಂತರಿಕ ಶತ್ರುಗಳನ್ನು ಮಟ್ಟ ಹಾಕಬೇಕಾದ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲಿದೆ. ಇಂದು ಪುಡಾರಿ ನಾಯಕರ ಮುಂದೆ ನಮ್ಮ ಪೊಲೀಸರು ತಲೆ ತಗ್ಗಿಸಿ ನಿಲ್ಲುತ್ತಿರುವುದು ತುಂಬಾ ನೋವು ತಂದಿದೆ ಎಂದ ಅವರು, ಪೊಲೀಸರೆ ನೀವು ತಲೆ ತಗ್ಗಿಸಿದರೆ ಅದು ಭಾರತ ಮಾತೆ, ತಲೆಯ ಮೇಲೆ ಟೊಪ್ಪಿಗೆ ಮೇಲೆ ಹಾಕಿಕೊಂಡಿರುವ ರಾಷ್ಟ್ರ ಲಾಂಛನ ತಲೆ ತಗ್ಗಿಸಿದಂತಾಗುತ್ತದೆ. ಹೀಗಾಗಿ ಪಾರದರ್ಶಕವಾಗಿ ಕೆಲಸ ಮಾಡಿ ಯಾವುದೇ ಕಾರಣಕ್ಕೂ ಯಾರಿಗೂ ತಲೆ ತಗ್ಗಿಸಿಬೇಡಿ ಎಂದು ಪೊಲೀಸರಿಗೆ ನ್ಯಾ. ಬಿ.ವೀರಪ್ಪ ಕಿವಿಮಾತು ಹೇಳಿದರು.

ಲಂಚಕ್ಕೆ ಕೈಯೊಡ್ಡಿದರೆ ನೆಮ್ಮದಿ ಕಳೆದುಕೊಳ್ಳುವಿರಿ: ಸಾರ್ವಜನಿಕ ಸೇವಕರಾಗಿರುವ ಸರ್ಕಾರಿ ನೌಕರರು ಲಂಚಕ್ಕೆ ಕೈಯೊಡ್ಡಿದರೆ ಬದುಕಿನಲ್ಲಿ ನೆಮ್ಮದಿ ಕಳೆದಕೊಳ್ಳುವಿರಿ. ಕೊಟಿ ಸಂಪಾದಿಸಿದ್ದರು ಹೊಟ್ಟೆ ತುಂಬಾ ಊಟ ನಿಮ್ಮದಾಗಲ್ಲ. ರಾತ್ರಿ ನಿದ್ದೆ ಬರಲ್ಲ. ಲಂಚ ಕೊಟ್ಟವರ ಶಾಪ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಮಾರ್ಮಿಕವಾಗಿ ಅಧಿಕಾರಿ ಸಿಬ್ಬಂದಿಗಳಿಗೆ ಕಿವಿಮಾತು ಹೇಳಿದ ನ್ಯಾ. ಬೀ.ವೀರಪ್ಪ ಅವರು, ಕಷ್ಟಪಟ್ಟ ಸಂಪಾದನೆಯಿಂದ ಮಾತ್ರ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಭಾರಿ ಕಲಬುರಗಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎ.ವಿ.ಶ್ರೀನಾಥ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ. ಶರಣಪ್ಪ, ಎಸ್.ಪಿ.ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ್ ಪಾಟೀಲ್, ಡಿ.ಸಿ.ಎಫ್. ಸುಮಿತ್ ಪಾಟೀಲ, ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಅಪರ ನಿಬಂಧಕರಾದ ಜೆ.ವಿ.ವಿಜಯಾನಂದ, ಗಿರೀಶ ಭಟ್ ಕೆ., ಅರವಿಂದ ಎನ್.ವಿ., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ನವಲೆ, ಕಲಬುರಗಿ ಲೋಕಾಯುಕ್ತ ಎಸ್.ಪಿ. ಬಿ.ಕೆ.ಉಮೇಶ, ಕೆ.ಕೆ.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ, ಜೆಸ್ಕಾಂ ಎಂ.ಡಿ. ರವೀಂದ್ರ ಕರಲಿಂಗಣ್ಣನವರ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಸಹಾಯಕ ಆಯುಕ್ತರು, ತಹಶೀಲಾರರು ಇದ್ದರು. ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸರ್ವರನ್ನು ಸ್ವಾಗತಿಸಿದರು.

ನಂತರ ಉಪ ಲೋಕಾಯುಕ್ತರು ಸಾರ್ವಜನಿಕರ ಅಹವಾಲುಗಳನ್ನು ಒಂದೊಂದಾಗಿ ತಾಳ್ಮೆಯಿಂದ ಆಲಿಸುತ್ತಾ ಸ್ಥಳದಲ್ಲಿಯೆ ಬಹುತೇಕ ಸಮಸ್ಯೆಗಳಿಗೆ ಪರಿಹಾರ ನೀಡಿ ಆದೇಶಿಸಿದ್ದರು. ಸಾರ್ವಜನಿಕರು ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಟೋಕನ್ ಪಡೆಯಲು ಸ್ಟಾಲ್ ಹಾಕಲಾಗಿತ್ತು. ಟೋಕನ್ ಪಡೆದ ಸಾರ್ವಜನಿಕರು ಉಪ ಲೋಕಾಯುಕ್ತರ ಮುಂದೆ ಹಾಜರಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಪರಿಹಾರ ಕಂಡುಕೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here