ಕಲಬುರಗಿ : ಭಾರತ ದೇಶ ಪ್ರಗತಿಯಲ್ಲಿ ಯುವಶಕ್ತಿ ಸಹಭಾಗಿತ್ವ ಬಹಳ ಮುಖ್ಯ ಎಂಬುದು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಕನಸಾಗಿತ್ತು. ಅವರ ಕನಸಿನಂತೆ ಯುವಕರು ರಾಷ್ಟ್ರೀಯ ಸೇವೆಯಲ್ಲಿ ಸಕ್ರಿಯರಾಗಿ ಭಾಗವಹಿಸಬೇಕು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಶಿಕ್ಷಣ ನಿಕಾಯದ ಡೀನ್ ಪ್ರೊ. ಬಾಬಣ್ಣ ಹೂವಿನಭಾವಿ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶದಡಿಯಲ್ಲಿ ನ.16 ರಿಂದ 26 ರವರೆಗೆ ಜ್ಞಾನ ಗಂಗಾ ಆವರಣದಲ್ಲಿ ನಡೆಯಲಿರುವ ವಿಶ್ವವಿದ್ಯಾಲಯ ಮಟ್ಟದ ಅಂತರ್ ಮಹಾವಿದ್ಯಾಲಯಗಳ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿ ದೇಶದ ಉದ್ದಾರ ಮತ್ತು ಸಾಮಾಜಿಕ ಜವಾಬ್ದಾರಿ ನಿರ್ವಹಿಸುವುದು ರಾಸೇಯೋ ಉದ್ದೇಶವಾಗಿದೆ ಎಂದರು.
ದೇಶದ ಅಭಿವೃದ್ಧಿ ಸಾಧನೆಗೆ ಯುವಕರು ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು. ಸಮುದಾಯ ಅಭಿವೃದ್ಧಿ, ನಾಯಕತ್ವ ಬೆಳವಣಿಗೆ, ನೈಸರ್ಗಿಕ ವಿಕೋಪ ನಿಭಾಯಿಸುವುದು, ಪ್ರಾಯೋಗಿಕ ಕೌಶಲ್ಯ ಕಲಿಕೆಯಲ್ಲಿ ರಾಸೇಯೋ ಪ್ರಮುಖ ಪಾತ್ರ ವಹಿಸುತ್ತದೆ. “ನನಗಲ್ಲ ಆದರೆ ನಿಮಗಾಗಿ ನಾನು” ಎಂಬುದು ರಾಸೇಯೋ ದ್ಯೇಯವಾಗಿದೆ ಎಂದರು.
ಕುಲಸಚಿವ ಪ್ರೊ. ರಾಜನಾಳ್ಕರ್ ಲಕ್ಷ್ಮಣ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮಾಜವನ್ನು ಒಳ್ಳೆಯ ದಾರಿಯಲ್ಲಿ ಮುನ್ನಡೆಸುವುದು ಯುವ ಜನತೆಯ ಕರ್ತವ್ಯವಾಗಿದೆ. ಅದಕ್ಕೆ ಪೂರಕವಾಗಿ ಯುವ ಜನತೆಯನ್ನು ರೂಪಿಸಿ ಬೆಳೆಸುವುದು ರಾಸೇಯೋ ಕಾರ್ಯಕ್ರಮದಿಂದ ಸಾಧ್ಯ. ದಾರ್ಶನಿಕರು ಕಂಡಂತೆ ದೇಶ ನಿರ್ಮಾಣ ಆಗಬೇಕು. ಸಮಾಜದಲ್ಲಿ ನೆಮ್ಮದಿ ಮತ್ತು ಶಾಂತಿ ನೆಲಸುವಂತೆ ಮಾಡಲು ರಾಷ್ಟ್ರೀಯ ಸೇವಾ ಯೋಜನೆ ಪ್ರಮುಖ ಪಾತ್ರ ವಹಿಸುತ್ತದೆ. ಅದರರಂತೆ ಶಿಬಿರಾರ್ಥಿಗಳು ಸಂಪೂರ್ಣವಾಗಿ ಶಿಬಿರದಲ್ಲಿ ತೊಡಗಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ರಾಸೆಯೋ ಕೋಶದ ಸಂಯೋಜಕ ಡಾ. ಎನ್.ಜಿ. ಕಣ್ಣೂರು ಶಿಬಿರಾರ್ಥಿಗಳು ಹಾಗೂ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ ಮತ್ತು ರಾಷ್ಟ್ರೀಯ ಸೇವಾ ಮನೋಭಾವ ರೂಢಿಸಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಮಹಾವಿದ್ಯಾಲಯಗಳ ರಾಸೇಯೋ ಕಾರ್ಯಕ್ರಮ ಅಧಿಕಾರಿಗಳಾದ ಶ್ರೀ ರಾಜೇಂದ್ರಕುಮಾರ, ಡಾ. ಶಂಕರ, ವಸಂತಕುಮಾರ, ಡಾ. ವಿದ್ಯಾಸಾಗರ ಮತ್ತು ಡಾ. ಪ್ರಕಾಶ ಕುಮಾರ ಹಾಗೂ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದರು.
ಕು. ಸೌಮ್ಯ ಪ್ರಾರ್ಥಿಸಿದರು. ಕು. ಶ್ರೀದೇವಿ ಮತ್ತು ಸಂಗಡಿಗರು ರಾಸೇಯೋ ಗೀತೆ ಹಾಡಿದರು. ಡಾ. ಸಂಗಪ್ಪಾ ಮಾಮನಶೇಟ್ಟಿ ನಿರೂಪಿಸಿದರು, ಡಾ. ಶಂಕರ್ ವಂದಿಸಿದರು.