ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರು: ಡಾ. ಎಸ್.ಎಸ್. ಗುಬ್ಬಿ ಬೇಸರ

0
14

ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಎಸ್.ಎಸ್. ಗುಬ್ಬಿ ಅವರು ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಅನ್ನಪೂರ್ಣ ಕ್ರಾಸ್‌ನಲ್ಲಿನ ಕಲಾ ಮಂಡಳದಲ್ಲಿ ಸೋಮವಾರ ರವಿವರ್ಮ ಕಲಾ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಜರುಗಿದ ಸಂಗೀತ ಕಲಾ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾಜ್ಯೋತ್ಸವ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ, ವಿಶೇಷ ಗೌರವವನ್ನು ಸ್ವೀಕರಿಸಿ ಮಾತನಾಡಿದರು.

Contact Your\'s Advertisement; 9902492681

ರಾಜ್ಯೋತ್ಸವದಂತಹ ಉತ್ತಮ ಕಾರ್ಯಕ್ರಮದಲ್ಲಿ ಪ್ರಶಸ್ತಿಗಾಗಿ ಹಲವು ಸಾಧಕರನ್ನು ಆಯ್ಕೆ ಮಾಡಿದ್ದು, ಅವರು ಕಾರ್ಯಕ್ರಮದಲ್ಲಿ ಭಾಗವಹಿಸದೇ ಇರುವುದು ಸರಿಯಲ್ಲ ಎಂದರು.

ಪ್ರಶಸ್ತಿ ಪುರಸ್ಕೃತರು ಹಾಗೂ ಸನ್ಮಾನಿತರು ಈಗ ಬರುತ್ತಾರೆ, ಆಗ ಬರುತ್ತಾರೆ ಎಂದು ಆಯೋಜಕರು ನಿಗದಿತ ಸಮಯವನ್ನು ಮುಂದೂಡುತ್ತ ಬಂದರು. ಪರಿಣಾಮ ಮೂರು ತಾಸುಗಳ ನಂತರ ಕಾರ್ಯಕ್ರಮ ಆರಂಭವಾಯಿತು.

ಇಂತಹ ವಿಳಂಬಕ್ಕೆ ಪ್ರಶಸ್ತಿ ಪುರಸ್ಕೃತರು ಹಾಗೂ ಸನ್ಮಾನಿತರು ತಮ್ಮ ಭಾಗವಹಿಸುವಿಕೆಯ ಕುರಿತು ಖಚಿತ ನಿರ್ಧಾರವನ್ನು ತಿಳಿಸದೇ ಇರುವುದರಿಂದ ಕಾರ್ಯಕ್ರಮ ವಿಳಂಬವಾಯಿತು ಎಂದು ಅವರು ಹೇಳಿದರು.

ಕರೆದರೂ ಬರಲಾರದ್ದು ಖೇದನೀಯ. ಬರಲ್ಲ ಅಂತಾ ಹೇಳಬೇಕು. ಅದು ಸಂಸ್ಕೃತಿ, ಸಂಸ್ಕಾರ. ಇದರಿಂದ ಸಂಘಟಕರಿಗೆ ಶಕ್ತಿ ಬರುತ್ತದೆ. ಎಂತಹ ಸನ್ಮಾನ ಇದ್ದರೂ ಸಹ ಅದು ದೊಡ್ಡದು. ಅದನ್ನು ಸ್ವೀಕರಿಸಬೇಕು ಎಂದು ಅವರು ತಿಳಿಸಿದರು.

ನಾನೂ ಸಹ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿ ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದೇನೆ. ನಿಗದಿತ ಸಮಯದಲ್ಲಿಯೇ ಕಾರ್ಯಕ್ರಮ ಮಾಡುತ್ತಿದ್ದೆವು. ಸಮಯ ಪಾಲನೆಗೆ ಹೆಚ್ಚು ಆದ್ಯತೆ ಕೊಡುತ್ತಿದ್ದೆವು. ಆದಾಗ್ಯೂ, ನಾನು ನಿಗದಿತ ಸಮಯಕ್ಕೆ ಬರಬೇಕು ಎಂದು ಆಯೋಜಕರಿಗೆ ಹೇಳಿದಾಗ ಇನ್ನೂ ಹಲವು ಪ್ರಶಸ್ತಿ ಪುರಸ್ಕೃತರು ಮತ್ತು ಸನ್ಮಾನಿತರು ಬರಬೇಕಾಗಿದೆ. ಕಾಯುತ್ತಿದ್ದೇವೆ ಎಂದು ಹೇಳಿದರು. ಕೊನೆಗೆ ಕಾಯ್ದು, ಕಾಯ್ದು ನಾನೂ ಸಹ ವಿಳಂಬವಾಗಿ ಕಾರ್ಯಕ್ರಮಕ್ಕೆ ಆಗಮಿಸಿದೆ. ವಿಳಂಬಕ್ಕೆ ಕ್ಷಮೆ ಕೇಳುವುದಾಗಿ ಅವರು ತಿಳಿಸಿದರು.

ಸನ್ಮಾನಿತರು ಹಾಗೂ ಪ್ರಶಸ್ತಿ ಪುರಸ್ಕೃತರು ತಮಗೆ ಸಮಾರಂಭಕ್ಕೆ ಬರುವುದು ಆಗುವುದಿಲ್ಲ. ಇಲ್ಲವೇ ವಿಳಂಬವಾಗಿ ಬರುತ್ತೇವೆ ಎಂಬ ಮಾಹಿತಿಯನ್ನೂ ಸಹ ಆಯೋಜಕರಿಗೆ ನೀಡದೇ ಇರುವುದರಿಂದ ಕಾರ್ಯಕ್ರಮ ವಿಳಂಬವಾಗಿ ಆರಂಭವಾಗಲು ಕಾರಣವಾಯಿತು. ಇದಕ್ಕೆ ಆಯೋಜಕರದು ತಪ್ಪಿಲ್ಲ. ಸನ್ಮಾನಿತರೇ ಸೂಕ್ತ ನಿರ್ಧಾರ ತೆಗೆದುಕೊಳ್ಳದೇ ಇರುವುದು ಎಂದು ಅವರು ಹೇಳಿದರು.

ಹಿರಿಯ ಪತ್ರಕರ್ತ ಬಸವರಾಜ್ ಅ. ಚಿನಿವಾರ್, ಗುಲಬರ್ಗಾ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಡಾ. ಸುನೀಲಕುಮಾರ್ ವಂಟಿ ಅವರು ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ಸಂಸ್ಕಾರ ಅತ್ಯಂತ ಅಗತ್ಯವಾಗಿದೆ. ಕನ್ನಡ ಭಾಷೆಯಲ್ಲಿ ಅಂತಹ ಸಂಸ್ಕಾರ ಇದೆ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶದಲ್ಲಿ ಮಾತೃಭಾಷೆಯಲ್ಲಿ ಸಾಕಷ್ಟು ವ್ಯತ್ಯಾಸವಿದ್ದರೂ ಸಹ ಕನ್ನಡ ಸಂಸ್ಕೃತಿ, ಸಂಸ್ಕಾರ ಒಂದುಗೂಡಿಸಿದೆ ಎಂದರು.

ದಿವ್ಯ ಸಾನಿಧ್ಯ ವಹಿಸಿದ್ದ ಸಿದ್ದಾರ್ಥ ಬುದ್ಧ ವಿಹಾರದ ಸಂಘಾನಂದ್ ಬಂತೇಜಿ ಅವರು ಮಾತನಾಡಿ, ಏನೇ ಮಾಡಿದರೂ ಸಹ ಒಳ್ಳೆಯದನ್ನು ಮಾಡಬೇಕು. ನಮಗೆ ಮಾತೃಭಾಷೆ ಕನ್ನಡ ಬೇಕು. ನಮ್ಮ ನಿತ್ಯ ವ್ಯವಹಾರವೂ ಸಹ ಕನ್ನಡದಲ್ಲಿ ಇರಬೇಕು. ಕನ್ನಡವನ್ನು ಇನ್ನಷ್ಟು ವೈಭವದಿಂದ ಬೆಳೆಸಬೇಕು. ಮಾತೃಭಾಷೆಯ ಕುರಿತು ಅಭಿಮಾನ ಇರಬೇಕು. ಪ್ರತಿ ಚಟುವಟಿಕೆಯಲ್ಲಿಯೂ ಕನ್ನಡವನ್ನು ಸ್ವಾಭಿಮಾನದಿಂದ ಬಳಸಬೇಕು ಎಂದು ತಿಳಿಸಿದರು.

ಕನ್ನಡ ಭಾಷೆಗೆ ಯಾವುದೇ ಜಾತಿ, ಮತ, ಪಂಥಗಳು, ಧರ್ಮದ ಬೇಧ ಭಾವ ಇಲ್ಲ. ಕನ್ನಡವು ಸಮಾನತೆಯನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ವಿಶೇಷ ಗೌರವ ಪ್ರಶಸ್ತಿಯನ್ನು ಪತ್ರಕರ್ತ ಶಿವಲಿಂಗಪ್ಪ ದೊಡ್ಡಮನಿ, ಖ್ಯಾತ ವೈದ್ಯ ಸಾಹಿತಿ ಡಾ. ಎಸ್.ಎಸ್. ಗುಬ್ಬಿ, ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಮಾಜಿ ಉಪ ಕುಲಪತಿ ವಿ.ಟಿ. ಕಾಂಬಳೆ, ಡಾ. ಕಿರಣ್ ಜಾರ್ಜ್, ಡಾ. ಅರವಿಂದ್ ಕಟ್ಟಿ, ಶ್ರೀಮತಿ ಚಂದ್ರಕಲಾ ಪಾಟೀಲ್, ವಿಶ್ವನಾಥ್ ಭಕ್ರೆ, ಶ್ರೀಮತಿ ತಾರಾಬಾಯಿ ಬಿಳಲಕರೆ, ಎಚ್.ಎಸ್. ಬರಗಾಲಿ, ಶ್ರೀಮತಿ ಗೀತಾ ಭರಣಿ, ಜಗನ್ನಾಥ್ ಎಸ್. ನಾಗೂರ್, ಶ್ರೀಮತಿ ಮಾಯಾದೇವಿ ಎನ್. ಮುರಡಿ ಅವರಿಗೆ ಪ್ರದಾನ ಮಾಡಲಾಯಿತು.

ಸೂಕಿ ಸಂಸ್ಥೆಯ ಸಂಸ್ಥಾಪಕ ಕಿರಣ್ ಪಾಟೀಲ್ ಅವರು ಕನ್ನಡ ಹಾಡನ್ನು ಹಾಡುವ ಮೂಲಕ ಸಮಾರಂಭಕ್ಕೆ ವಿಶೇಷ ಮೆರುಗು ತಂದರು. ಶಿವಯೋಗಿ ಭಜಂತ್ರಿ ಪಾಳಾ ತಂಡದವರಿಂದ ಶಹನಾಯಿ ವಾದನ ಜರುಗಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here