ಅವಿಕಂಪಿತ ಕನ್ನಡಪ್ರೇಮಿ ಗೊ.ರು.ಚನ್ನಬಸಪ್ಪ: ಡಾ. ದಂಡೆ

0
14

ಕಲಬುರಗಿ: ನಾಡು, ನುಡಿ, ನರ ನಾಡಿಗಳಲ್ಲಿ ಅವಿಕಂಪಿತ ಕನ್ನಡ ಪ್ರೇಮ ಹೊಂದಿರುವ ಹಿರಿಯ ಜಾನಪದ ಮತ್ತು ವಚನ ವಿದ್ವಾಂಸ ಗೊ.ರು.ಚನ್ನಬಸಪ್ಪ ಅವರು ಈ ನಾಡು ಕಂಡು ಅಪ್ರತಿಮ ಮೇಧಾವಿ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ವೀರಣ್ಣ ದಂಡೆ ಅಭಿಪ್ರಾಯಪಟ್ಟರು.

ಅಖಿಲ ಭಾರತ ಶರಣ ಸಆಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಆಶ್ರಯದಲ್ಲಿ ನಗರದ ಕನ್ನಡ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ನಾಡೋಜ ಡಾ. ಗೊ.ರು.ಚನ್ನಬಸಪ್ಪ ಅವರ ಅಭಿನಂದನಾ ಸಮಾರಂಭದಲ್ಲಿ ಅಭಿನಂದನಾ ನುಡಿಗಳನ್ನಾಡಿದ ಅವರು, ಜಾನಪದ ಸಾಹಿತ್ಯ, ಶರಣ ಸಾಹಿತ್ಯ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ತಮ್ಮ ಸೃಜನಶೀಲತೆ ಮತ್ತು ಕ್ರಿಯಾಶೀಲತೆಯಿಂದ ಇತರರಿಗೆ ಮಾದರಿಯಾಗಿದ್ದಾರೆ ಎಂದರು.

Contact Your\'s Advertisement; 9902492681

ಸ್ವಾತಂತ್ರ್ಯ ಚಳವಳಿ, ಭೂದಾನ ಚಳವಳಿಯಲ್ಲಿ ಭಾಗವಹಿಸಿರುವ ಗೋ.ರು.ಚ ಅವರು ಶಿಕ್ಷಕರಾಗಿ ವಯಸ್ಕರ ಶಿಕ್ಷಣದ ಸಂಪನ್ಮೂಲ ವ್ಯಕ್ತಿಯಾಗಿ, ಸ್ಕೌಟ್ಸ್ ಮತ್ತು ಗೈಡ್ಸ್‍ನಲ್ಲಿ ಪ್ರಧಾನ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ 87ರ ಈ ಇಳಿವಯಸ್ಸಿನಲ್ಲೂ ಕುಗ್ಗದ ಉತ್ಸಾಹದಿಂದ ವಿವಿಧ ಖಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ಅವರಲ್ಲಿರುವ ಜೀವನೋತ್ಸಾಹವನ್ನು ಪ್ರದರ್ಶಿಸುವಂತಿದೆ ಎಂದು ಬಣ್ಣಿಸಿದರು.

ಮುಖ್ಯ ಅತಿಥಿಯಾಗಿದ್ದ ಕಲಬುರಗಿ ಶರಣಬಸವೇಶ್ವರ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಕಲ್ಯಾಣರಾವ ಜಿ. ಪಾಟೀಲ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್, ಶರಣ ಸಾಹಿತ್ಯ ಪರಿಷತ್‍ನ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ಕನ್ನಡ ಹಾಗೂ ಶರಣ ಸಾಹಿತ್ಯದ ಪರಿಚಾರಕರಾಗಿ ಇಂದಿಗೂ ದುಡಿಯುತ್ತಿದ್ದಾರೆ. ಅವರ ಸೇವೆ ಅನುಪಮ ಮತ್ತು ಅನನ್ಯವಾಗಿದೆ ಎಂದು ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಿರಿಯ ಉಪಾಧ್ಯಕ್ಷ ಅಪ್ಪಾರಾವ ಅಕ್ಕೋಣೆ ಅಧ್ಯಕ್ಷತೆ ವಹಿಸಿದ್ದರು. ಸೊನ್ನ ವಿರಕ್ತಮಠದ ಡಾ. ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಅಭಿನಂದನೆ ಸ್ವೀಕರಿಸಿದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷ ಗೊ.ರು. ಚನ್ನಬಸಪ್ಪ ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ಸ್ವಾಗತಿಸಿದರು. ಶರಣ ಸಆಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ಡಾ. ಶಿವರಂಜನ ಸತ್ಯಂಪೇಟೆ ನಿರೂಪಿಸಿದರು. ವಿಶ್ವನಾಥ ಮಂಗಲಗಿ ಪ್ರಾರ್ಥಿಸಿದರು. ಸಂಜಯ ಪಾಟೀಲ ವಂದಿಸಿದರು.

ಶಿವರಾಜ ಅಂಡಗಿ, ಶಾಂತಲಿಂಗ ಪಾಟೀಲ ಕೋಳಕೂರ, ಶರಣರಾಜ್ ಛಪ್ಪರಬಂದಿ, ಬಸವರಾಜ ಧೂಳಾಗುಂಡಿ, ಬಾಬುರಾವ ಮಡ್ಡೆ, ಬಸವರಾಜ ಚಾಂದಕವಟೆ, ಅಪ್ಪಾಸಾಬ ತೀರ್ಥೆ, ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ, ಜಯಶ್ರೀ ಚಟ್ನಳ್ಳಿ, ಸಿದ್ದಪ್ಪ ತಳ್ಳಳ್ಳಿ, ಪ್ರಭಾಕರ ಜೋಶಿ, ಮಹಿಪಾಲರೆಡ್ಡಿ ಮುನ್ನೂರ್, ಬಾಬುರಾವ ಚಿತ್ತಕೋಟೆ, ಶಿಲ್ಪಾ ಜೋಶಿ, ಎಚ್.ಬಿ. ತೀರ್ಥೆ, ಎಸ್.ಕೆ. ಬಿರಾದಾರ, ಬಸವರಾಜ ಮೊರಬದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸರ್ವಾಧ್ಯಕ್ಷನಾಗಿ ಆಯ್ಕೆಯಾಗಿರುವುದರಿಂದ ಕನ್ನಡದ ಕೆಲಸಗಳ ಬಗ್ಗೆ ಜನರು ತಮ್ಮ ಅಭಿಪ್ರಾಯಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಕನ್ನಡದ ಏಳಿಗೆಗೆ ಮಾಡಬೇಕಾದುದರ ಬಗ್ಗೆ ನನ್ನ ಅಧ್ಯಕ್ಷೀಯ ಭಾಷಣದಲ್ಲಿ ಸೇರಿಸಲು ಪ್ರಯತ್ನಿಸುವೆ. ಆತ್ಮೀಯರು, ಅಭಿಮಾನಿಗಳೇ ನನಗಿರುವ ಸಂಪತ್ತು. ಸಾವಿನ ಬಗ್ಗೆ ಚಿಂತೆ ಮಾಡದಿರುವುದೇ ನನ್ನ ಆಯುಷ್ಯದ ಗುಟ್ಟಾಗಿದೆ. -ಗೊ.ರು. ಚನ್ನಬಸಪ್ಪ, ನಿಯೋಜಿತ ಅಧ್ಯಕ್ಷ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here