ಕಲಬುರಗಿ: ಪ್ರತಿಯೊಂದು ಮಗುವಿನಲ್ಲಿ ಒಂದು ಪ್ರತಿಭೆಯಿರುತ್ತದೆ. ಅದನ್ನು ಗುರ್ತಿಸಿ, ಪ್ರೋತ್ಸಾಹಿಸಿ, ಬೆಳೆಸಿ ಅದನ್ನು ನಿರಂತರವಾಗಿ ಪೋಷಣೆ ಮಾಡುವ ಕಾರ್ಯ ಶಿಕ್ಷಕರು ಮಾಡಬೇಕು. ಮಕ್ಕಳಿಗೆ ತಿಳಿಯದೆಂದು ನಿರ್ಲಕ್ಷ್ಯ ಬೇಡ. ಅವರ ಜೊತೆ ಬೆರೆತು ಬೋಧನೆ ಮಾಡಿದರೆ ಕಲಿಕೆಯು ಪರಿಣಾಮಕಾರಿಯಾಗಲು ಸಾಧ್ಯವಿದೆಯೆಂದು ಜಿ.ಪಂ. ಸದಸ್ಯ ಶರಣಗೌಡ ಡಿ.ಪಾಟೀಲ ಶಿಕ್ಷಕರಿಗೆ ಸಲಹೆ ನೀಡಿದರು.
ಅವರು ನಗರದ ಆಳಂದ ರಸ್ತೆಯಲ್ಲಿರುವ ’ಬಸವೇಶ್ವರ ಕಾನ್ವೆಂಟ್ ಶಾಲೆ’ಯಲ್ಲಿ, ನೂತನವಾಗಿ ಆರಂಭಿಸಲಾದ ’ಬಸವೇಶ್ವರ ಅಬಾಕಸ್, ಸ್ಪೋಕನ್ ಇಂಗ್ಲೀಷ್ ತರಬೇತಿ ಕೇಂದ್ರ’ವನ್ನು ಬುಧವಾರ ಉದ್ಘಾಟಸಿ ಮಾತನಾಡುತ್ತಿದ್ದರು. ಇಂದಿನ ಬಾಲಕರೆ,ನಾಳಿನ ನಾಗರಿಕರಾಗಿರುವದರಿಂದ ಅವರಲ್ಲಿ ಸೃಜನಶೀಲ, ನೈತಿಕ ಮೌಲ್ಯಗಳನ್ನು ಬಿತ್ತಿ, ಬೆಳೆಸಿ. ನೈತಿಕತೆ ಇಲ್ಲದೆ ಬರಿ ಶಿಕ್ಷಣ ಪಡೆದರೆ ವ್ಯರ್ಥ. ಮಕ್ಕಳು ಬಿಳಿಹಾಳೆಯಂತೆ. ಬಾಲ್ಯದಿಂದಲೆ ಅವರ ಮನಸ್ಸಿನ ಮೇಲೆ ರಾಷ್ಟ್ರ ನಿರ್ಮಾಣದ ಉನ್ನತವಾದ ಚಿಂತನೆಗಳನ್ನು ಮೂಡಿಸಿದರೆ ಮುಂದೆ ಅವರು ದೇಶಕ್ಕೆ ಅಮೂಲ್ಯವಾದ ಆಸ್ತಿಯಾಗಲು ಸಾಧ್ಯವಿದೆಯೆಂದು ಅನೇಕ ದೃಷ್ಟಾಂತಗಳ ಮೂಲಕ ಹೇಳಿದರು.
ಸಂಸ್ಥೆಯ ಅಧ್ಯಕ್ಷ ರಾಜಶೇಖರ ಬಿ.ಮರಡಿ ಮಾತನಾಡಿ, ಗಣಿತ, ಇಂಗ್ಲೀಷ್ ವಿಷಯ ಕಠಿಣವೆಂಬುದು ಸಾಮಾನ್ಯ ಅಭಿಪ್ರಾಯವಾಗಿದೆ. ಅಬಾಕಸ್ ತರಬೇತಿಯು ಗಣಿತ ಕಲಿಕೆಯನ್ನು ಅತ್ಯಂತ ಸರಳ ಹಾಗೂ ಆಸಕ್ತಿದಾಯಕವನ್ನಾಗಿಸುತ್ತದೆ. ಇಂಗ್ಲೀಷ್ ಭಾಷೆಯ ಉತ್ತಮ ಸಂವಹನದ ಕೊರತೆಯಿಂದ ಅನೇಕ ಅವಕಾಶಗಳು ದೊರೆಯುತ್ತಿಲ್ಲ. ಇದನ್ನು ಮನಗಂಡು ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿಯೆಂಬ ಉದ್ದೇಶದಿಂದ ತರಬೇತಿ ಕೇಂದ್ರವನ್ನು ಆರಂಭಿಸಲಾಗಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಸಮಾರಂಭದಲ್ಲಿ ಆಳಂದ ಎಸ್.ಎಸ್.ಕೆ ಉಪಾಧ್ಯಕ್ಷ ಶಿವರಾಜ ಮಹಾಗಾಂವ, ಉಪನ್ಯಾಸಕ ಎಚ್.ಬಿ.ಪಾಟೀಲ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಮೂಲಗೆ, ಖಜಾಂಚಿ ಸೋಮಶೇಖರ ಪಾಟೀಲ, ಸದಸ್ಯರುಗಳಾದ ಪ್ರಭುರಾವ ಹೌಶೆಟ್ಟಿ, ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ ಭರಮಶೆಟ್ಟಿ, ಸಹ ಶಿಕ್ಷಕರಾದ ಪಾರ್ವತಿ ತೆಲ್ಲೂರ, ರೂಪಾ ಅವರಾದ, ಪ್ರೀತಿ ಹೌಶೆಟ್ಟಿ, ಶಿಲ್ಪಾ ಬೇಡರ್, ಹುಮೇರಾ ಶೇಖ್, ದತ್ತು ಯಳವಂತಗಿ ಪ್ರಮುಖರಾದ ಶರಣು ಹೌಶೆಟ್ಟಿ, ಬಸವರಾಜ ಪುರಾಣೆ, ಅಮರ ಬಂಗರಗಿ ಸೇರಿದಂತೆ ಸಂಸ್ಥೆಯ ಸಿಬ್ಬಂದಿ, ಪಾಲಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಅಂಕಿತಾರೆಡ್ಡಿ ಪ್ರಾರ್ಥಿಸಿದರು. ಸಹ ಶಿಕ್ಷಕಿಯರಾದ ಶಶಿಕಲಾ ಮೈಂದರ್ಗಿ ಸ್ವಾಗತಿಸಿದರು. ರಿಹಾಬ್‌ಜಹಾ ನಿರೂಪಿಸಿದರು. ಸಂಸ್ಥೆಯ ಉಪಾಧ್ಯಕ್ಷ ಸತೀಶ ಸಣ್ಣಮನಿ ವಂದಿಸಿದರು.