ಕಲಬುರಗಿ: ಮಹಾಮಾನವತಾವಾದಿ ಭಕ್ತ ಕನಕದಾಸರು ನೀಡಿರುವ ತ್ರಿಸೂತ್ರಗಳಾದ, ಪ್ರಾಮಾಣಿಕತೆಯಿಂದ ಕೂಡಿದ ದುಡಿಮೆ, ಅದರಿಂದ ಬಂದ ಪ್ರತಿಫಲದಲ್ಲಿ ಸ್ಪಲ್ಪ ಪ್ರಮಾಣದಲ್ಲಿಯಾದರೂ ಸಮಾಜದ ದುರ್ಬಲ ವರ್ಗಕ್ಕೆ ದಾನದ ರೂಪದಲ್ಲಿ ನೀಡುವುದು ಮತ್ತು ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ಏನಾದರೂ ಕೊಡುಗೆಯನ್ನು ನೀಡಿದರೆ ಬದುಕು ಸುಂದರವಾಗುವುದರ ಜೊತೆಗೆ ಸ್ವಸ್ಥ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆಯೆಂದು ಉಪನ್ಯಾಸಕ, ಚಿಂತಕ ಪ್ರೊ.ಎಚ್.ಬಿ.ಪಾಟೀಲ ಹೇಳಿದರು.
ಅವರು ನಗರದ ಆಳಂದ ಚೆಕ್ ಪೋಸ್ಟ್ ಸಮೀಪದಲ್ಲಿರುವ ಬಸವೇಶ್ವರ ಕಾನ್ವೆಂಟ್ ಶಾಲೆಯಲ್ಲಿ, ಬಸವೇಶ್ವರ ಸಮಾಜ ಸೇವಾ ಬಳಗದ ಸಹಯೋಗದೊಂದಿಗೆ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ್ದ ಭಕ್ತ ಕನಕದಾಸರ ೫೩೨ನೇ ಜಯಂತಿಯ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ನಂತರ ಮಾತನಾಡುತ್ತಿದ್ದರು.
ಸಂಸ್ಥೆಯ ಅಧ್ಯಕ್ಷ ರಾಜಶೇಖರ ಬಿ.ಮರಡಿ ಮಾತನಾಡಿ, ಕನಕದಾಸರು ಈ ನಾಡು ಕಂಡ ಶ್ರೇಷ್ಠ ಮಹನೀಯರಲ್ಲಿ ಒಬ್ಬರಾಗಿದ್ದಾರೆ. ಇವರು ಭಕ್ತರಾಗಿ, ಸಮಾಜ ಸುಧಾರಕರಾಗಿ, ದಾರ್ಶನಿಕರಾಗಿ, ಸಂತರಾಗಿ, ಹೀಗೆ ಬಹುಮುಖ ವ್ಯಕ್ತಿತ್ವವನ್ನು ಹೊಂದಿದ್ದರು. ನಮ್ಮ ಬದುಕು ಹಸನುಗೊಳಿಸಲು ಕನಕದಾಸರು ನೀಡಿರುವ ಸಂದೇಶಗಳನ್ನು ಪಾಲಿಸಬೇಕೆಂದರು.
ಕಾರ್ಯಕ್ರಮದಲ್ಲಿ ವಿಕ್ರಮ ಘನಾಟೆ, ಸಂಸ್ಥೆಯ ಉಪಾಧ್ಯಕ್ಷ ಸತೀಶ ಸಣಮನಿ, ಕಾರ್ಯದರ್ಶಿ ಸೋಮಶೇಖರ ಬಿ.ಮೂಲಗೆ, ಖಜಾಂಚಿ ಸೋಮಶೇಖರ ಪಾಟೀಲ, ಸದಸ್ಯ ನರಸಪ್ಪ ಬಿರಾದಾರ ದೇಗಾಂವ, ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ ಭರಮಶೆಟ್ಟಿ, ಸಹ ಶಿಕ್ಷಕರಾದ ಶಶಿಕಲಾ ಮೈಂದರ್ಗಿ, ಉಮಾದೇವಿ ಆರ್.ಸಿ, ಶಿಲ್ಪಾ ಎಸ್, ರೂಪಾ ಕೊಟ್ಟರಕಿ ,ಪ್ರೀತಿ ಹೌಶೆಟ್ಟಿ, ದತ್ತು ಹಡಪದ ಸೇರಿದಂತೆ ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.