ಕಲಬುರಗಿ: ಸಮೀಪದ ಉದನೂರಿನ ಅಪ್ಪಾಜೀ ಗುರುಕುಲ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆಯ ವಿಶೇಷ ಕಾರ್ಯಕ್ರಮದಲ್ಲಿ ಅಲ್ಲಿನ ಮಕ್ಕಳೇ ಕಾರ್ಯಕ್ರಮದ ಅತಿಥಿಗಳಾಗಿ ವೇದಿಕೆ ಅಲಂಕರಿಸಿರುವ ಅಪರೂಪದ ಕಾರ್ಯಕ್ರಮವೊಂದನ್ನು ಗುರುವಾರ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರತಿಭಾವಂತ ವಿದ್ಯಾರ್ಥಿ ಅಪ್ಪಾಜಿ ರಾಜಕುಮಾರ ಬಿ.ಉದನೂರ, ನಮ್ಮ ಹಣೆಯಲ್ಲಿ ಅಕ್ಷರದಿಂದ ಭವಿಷ್ಯ ಬರೆಯುವ ಜೊತೆಗೆ ನಮ್ಮ ಬದುಕಿನ ನೈತಿಕ ಶಿಕ್ಷಣ ಹೇಳಿಕೊಡುವ ನಮ್ಮ ಗುರುಗಳು ಶ್ರೇಷ್ಠ ಶಿಲ್ಪಿಗಳು ಆಗಿದ್ದಾರೆ. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಈ ದೇಶದ ನಿಜವಾದ ಸೈನಿಕರಾಗಿ ಬದುಕೋಣ ಎಂದು ಆ ಮಗು ತನ್ನ ಅಂತರಾಳದ ಮಾತೊಂದು ಹೇಳುತ್ತಿರುವಾಗ ಭಾಗವಹಿಸಿದ್ದ ಶಿಕ್ಷಕರು ವಾಹಾ… ವಾಹಾ… ಎಂದು ಚಪ್ಪಾಳೆ ಬಾರಿಸುವ ಮೂಲಕ ಅತಿಥಿಗಳ ರೂಪದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಹುರಿದುಂಬಿಸಿದ ಪ್ರಸಂಗ ಎಲ್ಲರ ಮನಸ್ಸು ಕರಗುವಂತಹದಿತ್ತು.
ಇನ್ನೋರ್ವ ಅತಿಥಿ ಬಾಲ ಪ್ರತಿಭೆ ಸೃಷ್ಠಿ ಮೈಲಾರಿ ಮಾತನಾಡಿ, ನಮ್ಮ ಕಾಲಿನ ಮೇಲೆ ನಾವು ನಿಂತುಕೊಳ್ಳುವ ವಿದ್ಯೆಯನ್ನು ನಮಗೆ ಧಾರೆಯೆರುತ್ತಿರುವ ನಮ್ಮ ಶಿಕ್ಷಕರೇ ನಿಜವಾದ ಹೀರೋಗಳು ಎಂದು ತಮ್ಮ ತೊದಲು ನುಡಿಯಿಂದ ಆ ಬಾಲಕಿ ಹೇಳುತ್ತಿರುವಾಗ ಪಾಲ್ಗೊಂಡಿದ್ದ ಪಾಲಕರು, ಶಿಕ್ಷಕರು ಒಂದು ಕ್ಷಣ ಭಾವುಕರಾದ ಸನ್ನಿವೇಶ ಕಂಡು ಬಂತು. ಬಾಲ ಪ್ರತಿಭೆಗಳಾದ ಭಕ್ತಿ ಬಾಬುಗೌಡ ಪಾಟೀಲ, ಅಜಯ ದಿಲೀಪ, ಮಲ್ಕಣ್ಣ ಭೀಮಾಶಂಕರ, ಲಕ್ಷ್ಮೀ ಮಲ್ಲಿಕಾರ್ಜುನ, ವೈಷ್ಣವಿ ಅಪ್ಪಾರಾಯ, ಅಭಿಷೇಕ ಶರಣಬಸಪ್ಪ ವೇದಿಕೆ ಮೇಲಿದ್ದರು.
ಟ್ರಸ್ಟನ ಅಧ್ಯಕ್ಷೆ ಭಾಗಮ್ಮ ರಾಜಕುಮಾರ ಬಿರಾದಾರ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಶಿಕ್ಷಕರಾದ ಗುರುರಾಜ, ಕವಿತಾ ಪಾಟೀಲ, ಜ್ಞಾನೇಶ್ವರಿ, ಶೀಲಾ ಹೊಸಮಠ, ಶ್ರೀದೇವಿ ಪತ್ರಿಗಿಡ, ನಿಶಾ, ಅಜಯ್, ಸುಜಾತಾ, ಸುವರ್ಣಾ, ಪ್ರಿಯಾ, ರಂಜೀತಾ, ರೂಪಾ, ಮಹಾದೇವಿ ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.