ಕಲಬುರಗಿ: ಪ್ರಸಕ್ತ 2019-20ನೇ ಶೈಕ್ಷಣಿಕ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿ.ಇ.ಟಿ) ಇದೇ ಏಪ್ರಿಲ್ 29 ಹಾಗೂ 30 ರಂದು ಕಲಬುರಗಿ ನಗರದ 21 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸುವುದು. ಪರೀಕ್ಷಾ ಕರ್ತವ್ಯದಲ್ಲಿ ಯಾವುದೇ ಲೋಪ ಕಂಡುಬಂದಲ್ಲಿ ಸಂಬಂಧಿಸಿದ ಕೇಂದ್ರದ ಅಧಿಕಾರಿಗಳನ್ನೆ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಅವರು ಶನಿವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಿ.ಇ.ಟಿ. ಪರೀಕ್ಷೆಗೆ ಸಂಬಂಧಿಸಿದಂತೆ ಕೈಗೊಳ್ಳಲಾದ ಪೂರ್ವಭಾವಿ ಸಿದ್ಧತಾ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತ, ಏಪ್ರಿಲ್ 29 ರಂದು ಜೀವಶಾಸ್ತ್ರ ಮತ್ತು ಗಣಿತ ಹಾಗೂ 30 ರಂದು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದ್ದು, ಒಟ್ಟು 8853 ವಿದ್ಯಾರ್ಥಿಗಳು ಸಿ.ಇ.ಟಿ. ಪರೀಕ್ಷೆ ಬರೆಯಲಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಠಿಯಿಂದ ಈ ಪರೀಕ್ಷೆ ಪ್ರಮುಖ ಘಟ್ಟವಾಗಿದೆ. ವಿವಿಧ ವೃತ್ತಿ ಕೋರ್ಸುಗಳಿಗೆ ಪ್ರವೇಶ ಪಡೆಯಲು ಈ ಪರೀಕ್ಷೆಯಲ್ಲಿ ಗಳಿಸುವ ಅಂಕವೆ ವಿದ್ಯಾರ್ಥಿಗಳಿಗೆ ಮಾನದಂಡವಾಗಿರುವುದರಿಂದ ಪರೀಕ್ಷೆಯಲ್ಲಿ ಯಾವುದೇ ಲೋಪವಾಗದಂತೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕು ಎಂದರು.
ಪರೀಕ್ಷೆ ಸುಸೂತ್ರವಾಗಿ ನಡೆಯಲು ಜಿಲ್ಲಾಡಳಿತದಿಂದ ತಲಾ 21 ಮಾರ್ಗಾಧಿಕಾರಿಗಳು, ವೀಕ್ಷಕರು ಹಾಗೂ ಪ್ರಶ್ನೆ ಪತ್ರಿಕೆ ಪಾಲಕರನ್ನು ನೇಮಿಸಲಾಗಿದೆ. ನಕಲು ತಡೆಯಲೆಂದೆ ಪ್ರತಿ ಕೇಂದ್ರಕ್ಕೆ ಇಬ್ಬರಂತೆ ಒಟ್ಟು 42 ಜಾಗೃತ ದಳದ ಸದಸ್ಯರನ್ನು ನಿಯೋಜಿಸಲಾಗಿದೆ. ಇದಲ್ಲದೆ ಪರೀಕ್ಷಾ ದಿನದಂದು ಸಿ.ಆರ್.ಪಿ.ಸಿ. ಕಲಂ 144 ಸಹ ಜಾರಿಗೊಳಿಸಲಾಗುವುದು. ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದಲ್ಲಿಯೆ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಗೆ ಪ್ರತ್ಯೇಕ ತಪಾಸಣೆ ನಡೆಸಬೇಕು. ಬಂದೋಬಸ್ತ್‌ಗಾಗಿ ಪೊಲೀಸ್ ಸಿಬ್ಬಂದಿ ಒದಗಿಸಲು ಪೊಲೀಸ್ ಅಧೀಕ್ಷಕರಿಗೆ ಈಗಾಗಲೆ ಪತ್ರ ಬರೆಯಲಾಗಿದೆ. ಇದರ ಹೊರತಾಗಿಯೂ ಕೇಂದ್ರದ ಮುಖ್ಯಸ್ಥರು ಸಂಬಂಧಿಸಿದ ಠಾಣೆಗೆ ಪೊಲೀಸ್ ಸಿಬ್ಬಂದಿ ನಿಯೋಜನೆಗೆ ಪತ್ರ ಬರೆಯಿರಿ ಎಂದರು.
ಪರೀಕ್ಷಾ ದಿನ ಮುನ್ನವೆ ಕೇಂದ್ರದ ಅಧೀಕ್ಷಕರು ಆಸನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಬೆಳಕಿನ ವ್ಯವಸ್ಥೆ ಸ್ಭೆರಿದಂತೆ ಮೂಲಭೂತ ವ್ಯವಸ್ಥೆ ಕಲ್ಪಿಸಿರುವ ಬಗ್ಗೆ ಖಾತ್ರಿ ಮಾಡಿಕೊಳ್ಳಬೇಕು. ಈ ಸಂಬಂಧ ವೀಕ್ಷಕರು ಪರೀಕ್ಷಾ ಕೇಂದ್ರಕ್ಕೆ ತೆರಳಿ ಕೇಂದ್ರದ ಮುಖ್ಯಸ್ಥರು ಹಾಗೂ ಕೊಠಡಿ ಮೇಲ್ವಿಚಾರಕರ ಸಭೆ ನಡೆಸಿ ಪೂರ್ವ ಸಿದ್ಧತೆ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿಗಳು ವೀಕ್ಷಕರಿಗೆ ನಿರ್ದೇಶನ ನೀಡಿದರು.
ನಕಲಿನಲ್ಲಿ ಭಾಗಿಯಾದಲ್ಲಿ ಕಠಿನ ಕ್ರಮ:- ಪರೀಕ್ಷಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹೊರತುಪಡಿಸಿ ಅನಧೀಕೃತ ವ್ಯಕ್ತಿಗಳು ಪರೀಕ್ಷಾ ಕೇಂದ್ರ ಆವರಣ ಪ್ರವೇಶಿಸದಂತೆ ಕೇಂದ್ರದ ಮುಖ್ಯಸ್ಥರು ಗಮನಹರಿಸಬೇಕು. ಇನು ಕೊಠಡಿ ಮೇಲ್ವಿಚಾರಕರು ಕೋಣೆಯಲ್ಲಿ ವಿದ್ಯಾರ್ಥಿಗಳ ನಿಗಾ ಮಾಡುವ ಬದಲು ಪತ್ರಿಕೆ, ಪುಸ್ತಕ ಓದುವಂತಿಲ್ಲ. ಎಲ್ಲ ಪರೀಕ್ಷಾ ಕೇಂದ್ರದಲ್ಲಿ ಸಿ.ಸಿ.ಟಿ.ವಿ. ಅಳವಡಿಸಲಾಗಿದ್ದು, ಯಾವುದೇ ನಕಲುಗಳೀಗೆ ಇಲ್ಲಿ ಅವಕಾಶವಿಲ್ಲ. ನಕಲು ಮಾಡುವ ಅಭ್ಯರ್ಥಿಗಳು ಮತ್ತು ಅದಕ್ಕೆ ಸಹಕರಿಸಿ ಅಕ್ರಮದಲ್ಲಿ ಭಾಗಿಯಾಗುವವರ ವಿರುದ್ಧ ಕಾನೂನಿನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಮೊಬೈಲ್ ನಿಷೇಧ: ಪರೀಕ್ಷಾ ಕೇಂದ್ರದಲ್ಲಿ ಕೊಠಡಿ ಮೇಲ್ವಿಚಾರಕರು ಸೇರಿದಂತೆ ಅಭ್ಯರ್ಥಿಗಳು ಮೊಬೈಲ್ ಫೋನ್, ಪೇಜರ್, ಬ್ಲ್ಯೂಟೂತ್, ವೈರಲೆಸ್ ಸೆಟ್, ಸ್ಲೈಡರೂಲ್ ಕ್ಯಾಲ್ಕುಲೇಟರ್, ವಾಚ್ ಕ್ಯಾಲ್ಕುಲೇಟರ್, ಪಠ್ಯ ಪುಸ್ತಕ ಸೇರಿದಂತೆ ಇನ್ನಿತರ ಯಾವುದೇ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ತರುವುದನ್ನು ನಿಷೇಧಿಸಲಾಗಿದ್ದು, ಇವುಗಳನ್ನು ಪರೀಕ್ಷಾ ಕೇಂದ್ರಕ್ಕೆ ತರುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಠಪಡಿಸಿದ್ದಾರೆ.
ಗುರುತಿನ ಚೀಟಿ ಕಡ್ಡಾಯ:- ಪರೀಕ್ಷೆಗ ಬರುವಾಗ ಅಭ್ಯರ್ಥಿಗಳು ಪ್ರವೇಶ ಪತ್ರದಲ್ಲಿ ನಮೂದಿಸಿರುವ ಗುರುತಿನ ಚೀಟಿ ಪೈಕಿ ಯಾವುದಾದರು ಒಂದು ಮೂಲ ಗುರುತಿನ ಚೀಟಿ ತರುವುದು ಕಡ್ಡಾಯವಾಗಿದೆ. ತಪ್ಪಿದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ.
ಸಭೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ, ಕೆಇಎ ರೂಟ್ ಅಧಿಕಾರಿ ಪ್ರಭಾಕರ ರೆಡ್ಡಿ, ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ್, ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ಮಾರ್ಗಾಧಿಕಾರಿಗಳು, ವೀಕ್ಷಕರು ಸೇರಿದಂತೆ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.