ಕಲಬುರಗಿ: ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ’ ಪ್ರದಾನ ಸಮಾರಂಭವು ನ.೨೬ ರಂದು ಸಂಜೆ ೫.೩೦ ಕ್ಕೆ ಆಯೋಜಿಸಲಾಗಿದೆ ಎಂದು ಅಮ್ಮ ಪ್ರಶಸ್ತಿ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಟ್ಟಣದ ಐತಿಹಾಸಿಕ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರುಗುವ ೧೯ ನೇ ವರ್ಷದ ಈ ಸಮಾರಂಭದ ಸಾನಿಧ್ಯವನ್ನು ನಾಲವಾರ ಶ್ರೀ ಕೋರಿಸಿದ್ದೇಶ್ವರ ಸಂಸ್ಥಾನ ಮಠದ ಪೂಜ್ಯ ಡಾ.ಶ್ರೀ ಸಿದ್ದತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಮುಗಳನಾಗಾವ್ ಶ್ರೀ ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು.
ಸೇಡಂ ಶಾಸಕ ರಾಜಕುಮಾರ ಪಾಟೀಲ ಅಧ್ಯಕ್ಷತೆ ವಹಿಸುವರು. ಚಲನಚಿತ್ರ ಸಂಗೀತ ನಿರ್ದೇಶಕ, ನಟ, ಸಾಹಿತಿ ವಿ.ಮನೋಹರ ಅವರು ‘ಅಮ್ಮ ಪ್ರಶಸ್ತಿ’ ಪ್ರದಾನ ಮಾಡುವರು. ಗುಲಬರ್ಗ ವಿಶ್ವವಿದ್ಯಾಲಯ ಕಲಬುರಗಿ ಕುಲಪತಿ ಪ್ರೊ. ಪರಿಮಳ ಅಂಬೇಕರ್ ಅವರು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸುವರು.
ವಿಧಾನ ಪರಿಷತ್ತಿನ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ಮುಖ್ಯ ಅತಿಥಿಗಳಾಗಿರುವರು.
ಅಮ್ಮ ಪ್ರಶಸ್ತಿ ಪುರಸ್ಕೃತರು: ಹಿರಿಯ ಪತ್ರಕರ್ತ, ಲೇಖಕ ಜೋಗಿ (‘ಎಲ್’ ಕಾದಂಬರಿ), ಉಡುಪಿಯ ಸುಧಾ ಆಡುಕಳ (‘ಬಕುಲದ ಬಾಗಿಲಿನಿಂದ’ ಲಲಿತ ಪ್ರಬಂಧ), ಕಲಬುರಗಿಯ ರಂಗಕರ್ಮಿ ಪ್ರಭಾಕರ ಸಾತಖೇಡ (‘ಮಾಸ್ತರರ ನೆರಳಾಗಿ’ ಅನುವಾದ), ತುಮಕೂರಿನ ಲೇಖಕ ಜಿ.ಎನ್.ನಾಗರಾಜ್ (ನಿಜ ರಾಮಾಯಣ ಅನ್ವೇಷಣೆ ವೈಚಾರಿಕ ಕೃತಿ), ವಿಜಯಪುರ ಜಿಲ್ಲೆಯ ಚನ್ನಪ್ಪ ಕಟ್ಟಿ (ಏಕತಾರಿ ಕಥಾ ಸಂಕಲನ) ಮತ್ತು ಬೈಲಹೊಂಗಲ ಲೇಖಕಿ ಭುವನಾ ಹಿರೇಮಠ (‘ಟ್ರಯಲ್ ರೂಮಿನ ಅಪ್ಸರೆಯರು’ ಕವನ ಸಂಕಲನ) ೧೯ ನೇ ವರ್ಷದ ಅಮ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ತಲಾ ೫೦೦೦ ರೂ. ನಗದು ಪುರಸ್ಕಾರ, ಪ್ರಮಾಣ ಪತ್ರ ಮತ್ತು ಸತ್ಕಾರ ಒಳಗೊಂಡಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಅಮ್ಮ ಗೌರವ ಪುರಸ್ಕಾರ: ಕಳೆದ ಹತ್ತು ವರ್ಷಗಳಿಂದ ಆರಂಭಗೊಂಡ ‘ಅಮ್ಮ ಗೌರವ ಪುರಸ್ಕಾರ’ಕ್ಕೆ ಈ ಬಾರಿಯೂ ನಾಡು-ನುಡಿಗೆ ನೀಡಿದ ಕೊಡುಗೆಯನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಗಣನೀಯ ಸಾಧನೆಯನ್ನು ಗುರುತಿಸಿ ಅಮ್ಮ ಗೌರವ ಪುರಸ್ಕಾರ ನೀಡಿ ಸತ್ಕರಿಸಲಾಗುತ್ತದೆ.
ಈ ಬಾರಿಯ ‘ಅಮ್ಮ ಗೌರವ’ ಪುರಸ್ಕಾರಕ್ಕೆ, ಹಿರಿಯ ಸಂಶೋಧಕರಾದ ಪ್ರೊ.ದೇವರಕೊಂಡಾರೆಡ್ಡಿ, ಕಲಬುರಗಿಯ ಬಸವ ಸಮಿತಿ ಅಧ್ಯಕ್ಷರಾದ ವಿಲಾಸವತಿ ಖೂಬಾ, ಮಕ್ಕಳ ಸಾಹಿತ್ಯದಲ್ಲಿ ಅಪಾರ ಸೇವೆ ಸಲ್ಲಿಸಿದ ಹಿರಿಯ ಲೇಖಕ ಏ.ಕೆ.ರಾಮೇಶ್ವರ, ಸೇಡಂನ ಹಿರಿಯ ಸಾಹಿತಿ ಲಿಂಗಾರೆಡ್ಡಿ ಶೇರಿ ಮತ್ತು ಮೂಡಬಿದರೆಯ ರಂಗ ತಜ್ಞ ಜೀವನರಾಂ ಸುಳ್ಯ ಅವರನ್ನು ಗೌರವಿಸಲಾಗುತ್ತದೆ ಎಂದು ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.
ಪ್ರಶಸ್ತಿಯಲ್ಲಿ ಈ ಬಾರಿಯೂ ತೊಗರಿ ಬೇಳೆ: ಕಳೆದ ನಾಲ್ಕೈದು ವರ್ಷಗಳಿಂದ ಅಮ್ಮ ಪ್ರಶಸ್ತಿ ಪ್ರದಾಸ ಸಮಾರಂಭದಲ್ಲಿ ಪ್ರಶಸ್ತಿಯು ತಲಾ ೫೦೦೦ ರೂ. ನಗದು ಪುರಸ್ಕಾರ, ಪ್ರಮಾಣ ಪತ್ರ ಮತ್ತು ಸತ್ಕಾರದ ಜೊತೆಗೆ ಎರಡು ಕೆಜಿ ತೊಗರಿ ಬೇಳೆಯನ್ನು ನೀಡಿ ಗೌರವಿಸಲಾಗುವುದು. ಈ ಭಾಗ ತೊಗರಿ ಕಣಜ ಎಂದೇ ಖ್ಯಾತಿ ಪಡೆದಿದ್ದು, ಪ್ರತಿಯೊಬ್ಬ ಪುರಸ್ಕೃತರಿಗೂ ತೊಗರಿ ಬೇಳೆ ನೀಡಿ ಗೌರವಿಸುವುದನ್ನು ಈ ಬಾರಿಯೂ ಮುಂದುವರಿಸಲಾಗುತ್ತಿದೆ ಎಂದು ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.
ಹೊಲಿಗೆ ಮಷಿನ್ ವಿತರಣೆ: ಕಳೆದ ಹತ್ತು ವರ್ಷಗಳಿಂದ ಸ್ವಾವಲಂಬಿ ಜೀವನ ನಡೆಸಲು ಅನುಕೂಲ ಮಾಡಿಕೊಡುವ ಹಿನ್ನೆಲೆಯಲ್ಲಿ ಹೆಣ್ಣುಮಕ್ಕಳಿಗೆ ನೀಡುತ್ತಿರುವ ಹೊಲಿಗೆ ಮಷಿನ್‌ಗಳನ್ನು ಈ ಬಾರಿಯೂ ನಿವೃತ್ತ ಮೇಷ್ಟ್ರು ನಾಗಪ್ಪ ಮುನ್ನೂರ್ ಸ್ಮರಣಾರ್ಥ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.